ಬೆಂಗಳೂರು (ನ.10):  ಆರ್‌.ಆರ್‌.ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸೋಲಿಗೆ ಮೊದಲೇ ಶಸ್ತ್ರ ತ್ಯಾಗ ಮಾಡಿ ಹೋಗಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಟಾಂಗ್‌ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳವಾರ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಎರಡೂ ಕ್ಷೇತ್ರದಲ್ಲಿ ಮೂರು ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ಆರ್‌.ಆರ್‌.ನಗರ ಕ್ಷೇತ್ರದ ಉಸ್ತುವಾರಿ ನನಗೆ ನೀಡಿದ್ದು, ಸುಮಾರು 25 ವರ್ಷ ಆ ಕ್ಷೇತ್ರದಲ್ಲಿ ಕಾರ್ಯಕರ್ತ, ಶಾಸಕ, ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಉಪಚುನಾವಣೆಯಲ್ಲಿ ದುಡಿಮೆ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಟ ನಡೆಯುವುದಿಲ್ಲ. ಅವರು ಸೋಲಿಗೆ ಮೊದಲ ಶಸ್ತ್ರತ್ಯಾಗ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಅಶೋಕ್ ಸಾವಿನ ಬಗ್ಗೆ ಅನುಮಾನ, ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ ...

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್‌ ಆಟಕ್ಕಿಂತ ಬಿಜೆಪಿ ಆಟ ನಡೆಯಲಿದೆ. ಬಿಜೆಪಿ ಅಭ್ಯರ್ಥಿ 25-30 ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ. ಡಿ.ಕೆ.ಶಿವಕುಮಾರ್‌ ಅವರು ನನ್ನ ಹೇಳಿಕೆಗಳಿಗೆ ಉತ್ತರವನ್ನೇ ಕೊಟ್ಟಿಲ್ಲ. ಮಾತೆತ್ತಿದರೆ ಅಶೋಕಣ್ಣ ದೊಡ್ಡವರು, ಮುನಿರತ್ನ ನನ್ನ ಸರಿ ಸಮಾನ ಅಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಅವರು ಯಾವುದೇ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿಲ್ಲ. ಶಿವಕುಮಾರ್‌ ಅವರು ನಾನೇ ಇಲ್ಲಿ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಓಡಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಹ ನಾನೇ ಅಭ್ಯರ್ಥಿ ಎಂದು ಪ್ರಚಾರ ಮಾಡಿದ್ದೇನೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.