ಸಂಸದೆ ಸುಮಲತಾ ಬಿಜೆಪಿಗೆ ಬಂದರೆ ಲಾಭ: ಸಚಿವ ಸುಧಾಕರ್
ಸಂಸದೆ ಸುಮಲತಾ ಅವರು ಬಿಜೆಪಿಗೆ ಬಂದರೆ ನಮ್ಮ ಪಕ್ಷಕ್ಕೆ ಲಾಭವಾಗಲಿದ್ದು, ಅವರು ಒಳ್ಳೆಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಮಾ.06): ಸಂಸದೆ ಸುಮಲತಾ ಅವರು ಬಿಜೆಪಿಗೆ ಬಂದರೆ ನಮ್ಮ ಪಕ್ಷಕ್ಕೆ ಲಾಭವಾಗಲಿದ್ದು, ಅವರು ಒಳ್ಳೆಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅವರನ್ನು ಬೆಂಬಲಿಸಿದೆ. ಅಲ್ಲದೆ ಅವರಿಗೆ ಮೋದಿ ಸರ್ಕಾರ ಕೆಲಸ ಮಾಡುತ್ತಿರುವ ರೀತಿ ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿಗೆ ಇರುವ ಭವಿಷ್ಯದ ಬಗ್ಗೆ ಅವರಿಗೆ ಅರಿವಿದೆ. ಹಾಗಾಗಿ ಅವರು ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಬುಟ್ಟಿಯಲ್ಲಿರುವ ಹಲ್ಲು ಕಿತ್ತ ಹಾವು: ಭ್ರಷ್ಟಾಚಾರ ನಿಗ್ರಹ ಮಾಡಲು ಲೋಕಾಯುಕ್ತ ಸಂಸ್ಥೆಗೆ ಮತ್ತೆ ಅಧಿಕಾರ ಮತ್ತು ಹೆಚ್ಚಿನ ಸ್ವಾಯತ್ತತೆ ನೀಡಿದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಹಾಗಾಗಿ ಅವರು ರಾಜೀನಾಮೆ ನೀಡಬೇಕಾ ಎಂದು ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ನವರು ಬುಟ್ಟಿಯಲ್ಲಿರುವ ಹಲ್ಲು ಕಿತ್ತ ಹಾವಿನಂತಹವರು. ನಾವು ಒಳ್ಳೆಯ ಹಾವು ಇಟ್ಟಿದ್ದೇವೆ, ಹಾಗಾಗಿ ಪಕ್ಷಾತೀತವಾಗಿ ಲೋಕಾಯುಕ್ತರು ಕೆಲಸ ಮಾಡುತ್ತಿದ್ದಾರೆ. ನಿಮ್ಮ ರೀತಿಯಲ್ಲಿ ಮುಚ್ಚಿಹಾಕುವುದು, ಬಿ ರಿಪೋರ್ಟ್ ಕೊಡಿಸುವ ಕೆಲಸ ಮಾಡಿಲ್ಲ. ಸತ್ಯ ಹೊರ ಬರಲಿದೆ. ಸತ್ಯ ತೋರಿಸುವ ಎದೆಗಾರಿಕೆ ಮುಖ್ಯಮಂತ್ರಿಗಳಿಗೆ ಇದೆ. ಆ ಎದೆಗಾರಿಕೆ ನಿಮಗೆ ಇಲ್ಲ ಎಂದೂ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೆ ಸುಧಾಕರ್ ತಿರುಗೇಟು ನೀಡಿದರು.
ಎಚ್‌ಡಿಕೆ ಅಧಿಕಾರ ಇದ್ದಾಗ ಏಕೆ ಪಂಚರತ್ನ ಜಾರಿ ಮಾಡಲಿಲ್ಲ?: ಸಚಿವ ಸುಧಾಕರ್ ಪ್ರಶ್ನೆ
ತಳ ಸಮುದಾಯಗಳಿಗೆ ನ್ಯಾಯ ಒದಗಿಸಲು ಬದ್ಧ: ತಳ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಬಲ ನೀಡಲು ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ. ಅದರಲ್ಲಿ ತಾವೂ ಸದಸ್ಯರಾಗಿದ್ದು, ತಳ ಸಮುದಾಯಗಳಿಗೆ ನ್ಯಾಯ ಒದಗಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದ ಕೊರವರ ಪೇಟೆಯಲ್ಲಿ ಭಾನುವಾರ ಕೊರಚ ಮತ್ತು ಕೊರಮರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮುದಾಯಗಳ ಮಕ್ಕಳು ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಒಬ್ಬರಾದರೂ ಶಾಸಕರಾಗಬೇಕು: ಈಗಾಗಲೇ ಶರಣರಾದ ಚಂದಯ್ಯನವರ ಕಾರ್ಯಕ್ರಮವನ್ನು ಅಧಿಕೃತವಾಗಿ ಆಚರಿಸಲು ರಾಜ್ಯ ಸರ್ಕಾರ ಘೋಷಿಸಿರುವುದು ಹೆಮ್ಮೆ ತಂದಿದೆ. ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಮುದಾಯ ಇದಾಗಿದ್ದು, ಈ ಸಮುದಾಯವನ್ನು ಪ್ರತಿಧಿನಿಸುವವರು ವಿಧಾನಸಭೆಯಲ್ಲಿ ಇಲ್ಲದಿರುವುದು ನೋವು ತಂದಿದೆ. 2023ರ ಚುನಾವಣೆಯಲ್ಲಿ ಒಬ್ಬ ಶಾಸಕರಾದರೂ ಈ ಸಮುದಾಯದಿಂದ ಆರಿಸಿಬರಬೇಕು. ಸರ್ಕಾರದ ಯೋಜನೆಗಳನ್ನು ರೂಪಿಸಲು ಸಹಕಾರ ನೀಡಲು ಸಮುದಾಯದ ಒಬ್ಬರಾದರೂ ಶಾಸಕರಿರಬೇಕು ಎಂದು ಅವರು ಪ್ರತಿಪಾದಿಸಿದರು.
ಕಳೆದ 40 ವರ್ಷದಿಂದ ಬಲಹೀನ ವರ್ಗಗಳ ಮೀಸಲಾತಿ ಹೆಚ್ಚಿಸಲು ಹೋರಾಟ ನಡೆದಿತ್ತು, ಬಲಹೀನ ವರ್ಗಗಳ ಮತ ಪಡೆದ ಸರ್ಕಾರಗಳೂ ಮೀಸಲಾತಿ ಹೆಚ್ಚಿಸಲು ವಿಫಲವಾಗಿದ್ದವು. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಲ್ಲದಿದ್ದರೂ ಬದ್ಧತೆ ಮತ್ತು ಕಾಳಜಿಯಿಂದ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಪರಿಶಿಷ್ಟಪಂಗಡಕ್ಕೆ 3 ರಿಂದ 7 ಮತ್ತು ಪರಿಶಿಷ್ಟಜಾತಿಗೆ 15 ರಿಂದ 17ಕ್ಕೆ ಮೀಸಲಾತಿಯನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಕೆಲ ಸಮುದಾಯಗಳ ಒಬ್ಬರೂ ಸರ್ಕಾರಿ ನೌಕರರಿಲ್ಲ. ಈ ಬಗ್ಗೆ ವರದಿ ಪಡೆಯಲಾಗುತ್ತಿದೆ, ಪ್ರತಿ ಸಮುದಾಯಕ್ಕೂ ಶಿಕ್ಷಣ, ಉದ್ಯೋಗ, ಸಾಮಾಜಿಕ ಸಬಲೀಕರಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ನಾಮ ನಿರ್ದೇಶನ ಸದಸ್ಯರ ನೇಮಕ: ಈ ಸಮುದಾಯದಿಂದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯರಾಗಿ ಒಬ್ಬರನ್ನು ನಾಮ ನಿರ್ದೇಶನ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಅವಕಾಶವಿರುವ ಕಡೆ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು. ದೇವರಾಜ ಅರಸು ಅವರು ಅತಿ ಸಣ್ಣ ಸಮುದಾಯಗಳನ್ನೂ ಗುರ್ತಿಸಿದರು. ಚುನಾವಣೆಯಲ್ಲಿ ಗೆಲ್ಲಿಸಿ, ಶಾಸಕರನ್ನಾಗಿ ಮಾಡಿ, ಉನ್ನತ ಮಟ್ಟದ ಸ್ಥಾನಮಾನ ನೀಡಿದ್ದಾರೆ. ಹಾಗೆ ಮಾಡಿದಾಗಲೇ ಸಮಾಜದಲ್ಲಿ ಅಂತರ ಕಡಿಮೆಯಾಗಲಿದೆ ಎಂದು ಹೇಳಿದರು.
ಸಚಿವ ಸುಧಾಕರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಆಗುತ್ತಾ?: ಕಾಂಗ್ರೆಸ್ ಅಭ್ಯರ್ಥಿ ಇನ್ನೂ ನಿಗೂಢ
ಈ ಸಂದರ್ಭದಲ್ಲಿ ಸಮುದಾಯದ ದೇವನಹಳ್ಳಿ ಮಾಜಿ ಶಾಸಕ ಚಂದ್ರಣ್ಣ, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ, ಸಮುದಾಯದ ಜಿಲ್ಲಾಧ್ಯಕ್ಷ ಚಿಕ್ಕಪ್ಪಯ್ಯ, ತಾಲೂಕು ಅಧ್ಯಕ್ಷ ಮಂಜುನಾಥ, ಗಂಗಾಧರಸ್ವಾಮಿ, ಸುಗುಣ, ಮೊಬೈಲ್ ಬಾಬು, ಸಂತೋಷ, ಶ್ರೀನಿವಾಸ್, ಜೆ. ನಾಗರಾಜ, ಮುಖವೀಣೆ ಆಂಜಿನಪ್ಪ, ಸಂದೀಪ್, ಮುನಿಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.