Asianet Suvarna News Asianet Suvarna News

'ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮಾಡಿದ್ದೇನು?'

ಅಕ್ರಮ ಗಣಿಗಾರಿಕೆಯಿಂದ ರೆಡ್ಡಿ ಸಹೋದರರು ಲೂಟಿ ಒಡೆದ ಒಂದು ಲಕ್ಷ ಕೋಟಿ ರುಪಾಯಿ ವಸೂಲಿ ಮಾಡಿ ಬಡವರಿಗೆ ಮನೆ ನಿರ್ಮಿಸಿಕೊಡುವುದಾಗಿ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ರಿಕವರಿ ಮಾಡಿದ್ದೆಷ್ಟು? ಬಿಟ್ಟಿದ್ದೆಷ್ಟು? ಚರ್ಚೆಗೆ ಸಿದ್ಧವೆಂದು ಜನಾರ್ದನ ರೆಡ್ಡಿ ಕಾಂಗ್ರೆಸ್ಸಿಗೆ ಸವಾಲು ಹಾಕಿದ್ದಾರೆ.

Bellary leader Janardhan Reddy challenges Congress
Author
Bengaluru, First Published Oct 30, 2018, 9:36 AM IST

 ಬಳ್ಳಾರಿ: ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಿಂದ ಲೂಟಿ ಒಡೆದ ಒಂದು ಲಕ್ಷ ಕೋಟಿ ರುಪಾಯಿ ವಸೂಲಿ ಮಾಡಿ ಬಡವರಿಗೆ ಮನೆ ನಿರ್ಮಿಸಿಕೊಡುವುದಾಗಿ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಐದು ವರ್ಷಗಳ ಕಾಲ ಮಾಡಿದ್ದೇನು? ನನ್ನಿಂದ ಎಷ್ಟುಹಣ ವಸೂಲಿ ಮಾಡಿದರು? ಎಷ್ಟುಮನೆಗಳನ್ನು ನಿರ್ಮಿಸಿಕೊಟ್ಟರು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಾನಗಲ್‌ ಕ್ರಾಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಸತ್ಯವನ್ನೇ ಹೇಳುವ ಉಗ್ರಪ್ಪ ನೇತೃತ್ವದಲ್ಲಿ ನೀಡಿದ ಸತ್ಯಶೋಧನಾ ಸಮಿತಿ ವರದಿಯಿಂದ ನಾನು ಜೈಲು ಸೇರುವಂತಾಯಿತು. ನನ್ನ ನಾಲ್ಕು ವರ್ಷಗಳ ಅಮೂಲ್ಯ ಸಮಯ ಜೈಲಿನಲ್ಲಿ ಕಳೆಯಬೇಕಾಯಿತು. ಈ ನಡುವೆ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮಾಡಿದ್ದೇನು? ಅಕ್ರಮ ಗಣಿಗಾರಿಕೆ ಸಂಬಂಧ ಇವರು ಕೈಗೊಂಡಿರುವ ಕ್ರಮಗಳೇನು? ಅವರದೇ ಸರ್ಕಾರ ರಾಜ್ಯದಲ್ಲಿತ್ತು. ನನ್ನ ಮೇಲಿನ ಯಾವ್ಯಾವ ಆರೋಪಗಳನ್ನು ಸಾಬೀತು ಪಡಿಸಿದ್ದಾರೆ ಎಂಬುದನ್ನು ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಅಯೋಗ್ಯರೆನ್ನಲೇ?:

ಲಕ್ಷ ಕೋಟಿ ಹಗರಣ ಎಂದು ಆರೋಪ ಮಾಡಿದವರು ನೂರು, ಇನ್ನೂರು ಕೋಟಿಯಷ್ಟುಚಾಜ್‌ರ್‍ಶೀಟ್‌ ಹಾಕಿದ್ದಾರೆ. ಅವರ ಬಳಿ ಅಧಿಕಾರವಿದ್ದೂ ಗಣಿ ಹಣ ರಿಕವರಿ ಮಾಡದ ಅವರನ್ನು ಅಯೋಗ್ಯರೆಂದು ಕರೆಯಬೇಕೆ? ಪಾದಯಾತ್ರೆ ವೇಳೆ ರೆಡ್ಡಿಗಳು .1 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ ಎಂದು ಹೇಳಿದರು. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ . 35 ಸಾವಿರ ಕೋಟಿ ಎಂದು, ಸಿದ್ದರಾಮಯ್ಯ .25 ಸಾವಿರ ಕೋಟಿ ಎಂದು ಟ್ವೀಟ್‌ ಮಾಡಿದರು. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ. ಇವರಿಬ್ಬರ ಮೇಲೆ ಮಾನನಷ್ಟಮೊಕದ್ದಮೆ ದಾಖಲಿಸಬೇಕೆಂದು ಅಂದುಕೊಂಡಿದ್ದೆ. ಆದರೆ, ಮಾನವೇ ಇಲ್ಲದ ಇವರ ಮೇಲೆ ನಾನ್ಯಾಕೆ ಮಾನನಷ್ಟಮೊಕದ್ದಮೆ ದಾಖಲಿಸಬೇಕು ಎಂದು ಸುಮ್ಮನಾದೆ ಎಂದರು.

ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪ ಹೊತ್ತಿರುವ ಶಾಸಕರಾದ ಬಿ.ನಾಗೇಂದ್ರ ಹಾಗೂ ಆನಂದಸಿಂಗ್‌ ಅವರು ಈಗ ಸಿದ್ದರಾಮಯ್ಯ ಅಕ್ಕಪಕ್ಕದಲ್ಲಿ ಕೂರುತ್ತಾರೆ. ಯಾವ ನಾಚಿಕೆ ಇಟ್ಟುಕೊಂಡು ಅವರನ್ನು ಪಕ್ಕದಲ್ಲಿ ಇಟ್ಟುಕೊಳ್ಳುತ್ತೀರಿ. ಅಧಿಕಾರದ ಅನುಕೂಲಕ್ಕಾಗಿ ನಾಚಿಕೆ ಬಿಟ್ಟು ಏನಾದರೂ ಮಾಡುತ್ತೀರಾ ಎಂದು ರೆಡ್ಡಿ ಪ್ರಶ್ನಿಸಿದರು.

ಬಳ್ಳಾರಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದೀರಿ. ಅಭಿವೃದ್ಧಿಯ ದೊಡ್ಡ ಪಟ್ಟಿನೀಡುತ್ತೇನೆ. ಈ ಕುರಿತು ಮಾಧ್ಯಮಗಳ ಮುಂದೆ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ ಅವರು ಬರುತ್ತಾರಾ? ಎಂದು ಕೇಳಿದರಲ್ಲದೆ, ಅವರಿಗೆ ಬರಲು ಧೈರ್ಯವಿಲ್ಲ. ಆದಾಗ್ಯೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾಧ್ಯಮಗಳ ಮುಂದಿಡುವೆ ಎಂದು ವಿವಿಧ ಪ್ರಗತಿ ಕಾರ್ಯಗಳನ್ನು ನೆನಪಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ಹಾಗೂ ಕುರುಬ ಸಮುದಾಯ ಸಹೋದರರಂತೆ ಇದ್ದಾರೆ. ಸಿದ್ದರಾಮಯ್ಯ ಜಾತಿಯ ವಿಷ ಬೀಜ ಬಿತ್ತುವ ಕೆಲಸ ಬಿಡಬೇಕು. ಶ್ರೀರಾಮುಲು ಬಗ್ಗೆ ಅಪಮಾನದ ಮಾತನಾಡಿರುವ ಸಿದ್ದರಾಮಯ್ಯ ವಾಲ್ಮೀಕಿ ಸಮಾಜವನ್ನು ಹಗುರವಾಗಿ ಪರಿಗಣಿಸಿದ್ದಾರೆ. ಆ ಸಮಾಜವೇ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದೆ ಎಂದರು.

ಡಿಕೆಶಿ ಕೈಯಲ್ಲಿ ಹಣದ ಚೀಲ:

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಣದ ಚೀಲ ಹಿಡಿದುಕೊಂಡು ಬಂದು ಚುನಾವಣೆ ಮಾಡಲು ಹೊರಟಿದ್ದಾರೆ. ಅದು ಸಾಧ್ಯವಾಗದು. ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಮಾಡಿದಾಗ ದುಡ್ಡಿನ ಕಂತೆಗಳೇ ಸಿಕ್ಕವು. ನಮ್ಮ ಮನೆ ಹಾಗೂ ನಮ್ಮ ಸಹಚರರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದರು. ಆದರೆ, ಅವರಿಗೆ ನಯಾಪೈಸೆಯೂ ಸಿಗಲಿಲ್ಲ ಎಂದರು.

ಜತೆಗೆ, ಶ್ರೀರಾಮುಲು ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಡಿಕೆಶಿಗೆ ನನ್ನ ಜತೆಗೆ ಬಹಿರಂಗ ಚರ್ಚೆಗೆ ಬರಲಿ ಎಂದು ರೆಡ್ಡಿ ಸವಾಲು ಹಾಕಿದರು. ಡಿಕೆಶಿ ಅವರಿಗೆ ಗೊತ್ತಿರುವುದು ದುಡ್ಡು ಮಾತ್ರ. ಆದರೆ ಶ್ರೀರಾಮುಲು ಮನೆ ಮಗನಾಗಿ ದುಡಿಯುತ್ತಾರೆ. ದುಡ್ಡು ಕೊಡುವವರಿಗೆ ಕೊಟ್ಟು ಎಲ್ಲ ಖಾಲಿಯಾದ ಮೇಲೆ ಅವರು ನನ್ನ ಜತೆಗೆ ಚರ್ಚೆಗೆ ಬರಲಿ, ಇಡೀ ಅವರ ಜಾತಕವನ್ನೇ ಬಿಚ್ಚಿಡುತ್ತೇನೆ ಎಂದು ಗುಡುಗಿದರು.

Follow Us:
Download App:
  • android
  • ios