ಉಪ ಚುನಾವಣೆ : ಇದು ಬಳ್ಳಾರಿ ಫಲಿತಾಂಶದ ಸೀಕ್ರೇಟ್
ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ರೆಡ್ಡಿ ಸಹೋದರರ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯನ್ನು 14 ವರ್ಷಗಳ ಬಳಿಕ ಎಂ ಪಿ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ.
ಬಳ್ಳಾರಿ : ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರ ಅಭೂತಪೂರ್ವ ಗೆಲುವಿನೊಂದಿಗೆ 14 ವರ್ಷಗಳ ರೆಡ್ಡಿ ಸಹೋದರರ ಭದ್ರಕೋಟೆ ಛಿದ್ರಗೊಂಡಿದೆ. ಮತ್ತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಗೊಂಡಂತಾಗಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲುಪಾಲಾದ ಬಳಿಕ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ಹಿಡಿತ ಬಹುತೇಕ ಸಡಿಲಗೊಂಡಿತ್ತು. ಒಂದುಕಾಲದಲ್ಲಿ ರೆಡ್ಡಿ ಹಾಗೂ ಅವರ ಬೆಂಬಲಿಗರ ಆಡುಂಬೊಲದಿಂದಾಗಿ ಬಳ್ಳಾರಿ ಜಿಲ್ಲೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂಬ ಕುಖ್ಯಾತಿ ಗಳಿಸಿತ್ತು.
ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ರೆಡ್ಡಿ ಸಹೋದರರಿಗೆ ಭಾರೀ ಹೊಡೆತ ನೀಡಿತ್ತು. ಈಗ ಲೋಕಸಭಾ ಕ್ಷೇತ್ರದಲ್ಲಿನ ಗೆಲುವು ಮೂಲಕ 14 ವರ್ಷಗಳ ರೆಡ್ಡಿಗಳ ಹಿಡಿತಕ್ಕೆ ಕಾಂಗ್ರೆಸ್ ಇತಿಶ್ರೀ ಹಾಡಿದೆ.
ಜನಾರ್ದನ ರೆಡ್ಡಿ ಜೈಲುಪಾಲಾದ ಬಳಿಕ ಬಳ್ಳಾರಿ ಮೇಲೆ ತನ್ನದೇ ಆದ ನಿಯಂತ್ರಣ ಉಳಿಸಿಕೊಂಡಿದ್ದ ಹಾಗೂ ರಾಜ್ಯದಲ್ಲಿ ನಾಯಕ ಜನಾಂಗದ ಪ್ರಬಲ ನಾಯಕನಾಗಿ ಬೆಳೆಯುತ್ತಿದ್ದ ಬಿ.ಶ್ರೀರಾಮುಲು ಮೂರು ಬಾರಿಯೂ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
2004ರಲ್ಲಿ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ, 2009ರಲ್ಲಿ ಶಾಂತಾ ಹಾಗೂ ಕಳೆದ ಚುನಾವಣೆಯಲ್ಲಿ ಸ್ವತಃ ತಾನೇ ಬಳ್ಳಾರಿ ಲೋಕಸಭೆಗೆ ನಿಂತು ಗೆಲುವು ಸಾಧಿಸಿದ್ದ ಶ್ರೀರಾಮುಲು ಜಿಲ್ಲೆಯ ಮೇಲೆ ಹಿಡಿತ ಇಟ್ಟುಕೊಂಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ವರಿಷ್ಠರ ಆದೇಶದಂತೆ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯೂ ಆಗಿದ್ದರು.
ಅವರ ರಾಜಿನಾಮೆಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ನ.3ರಂದು ನಡೆದ ಈ ಚುನಾವಣೆಯಲ್ಲಿ ಮತ್ತೆ ಸಹೋದರಿ ಶಾಂತಾ ಅವರನ್ನು ಕಣಕ್ಕಿಳಿಸಿದ್ದರು. ಕನಿಷ್ಠ ಪಂಚಾಯತ್ ಚುನಾವಣೆಯನ್ನೂ ಎದುರಿಸದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದದ್ದಷ್ಟೇ ಅಲ್ಲ, ಹೊಸ ದಾಖಲೆಯನ್ನೂ ಬರೆದಿದ್ದಾರೆ. ಕ್ಷೇತ್ರದಲ್ಲಿ ಈವರೆಗೆ ಯಾವ ಅಭ್ಯರ್ಥಿಗೂ ಸಾಧ್ಯವಾಗದಷ್ಟುಮತಗಳ (2,43,161 ಮತಗಳು) ಅಂತರದಿಂದ ಉಗ್ರಪ್ಪ ವಿಜಯ ಮಾಲೆ ಕೊರಳಿಗೆ ಹಾಕಿದ್ದಾರೆ.
ಉಗ್ರಪ್ಪ ಅವರು 6,28,365 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರು ಕೇವಲ 3,85,204 ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಗ್ರಪ್ಪ ಈ ಅಂತರದಲ್ಲಿ ಗೆಲುವು ಸಾಧಿಸಿರುವುದು ಸ್ವತಃ ಕಾರ್ಯಕರ್ತರಲ್ಲೂ ಅಚ್ಚರಿ ಮೂಡಿಸಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಈ ಹಿಂದೆ ನಡೆದ 12 ಚುನಾವಣೆಗಳಲ್ಲಿ ಯಾರೂ 2 ಲಕ್ಷದಷ್ಟುಮತಗಳ ಅಂತರದ ಗೆಲುವು ಸಾಧಿಸಿರಲಿಲ್ಲ. ಆದರೆ, ಬಳ್ಳಾರಿಗೆ ಸಂಪೂರ್ಣವಾಗಿ ಹೊಸಬರೇ ಆಗಿರುವ ಉಗ್ರಪ್ಪ ಡಿ.ಕೆ.ಶಿವಕುಮಾರ್ ತಂತ್ರಗಾರಿಕೆ ಹಾಗೂ ಜೆಡಿಎಸ್ ಬೆಂಬಲದಿಂದಾಗಿ ಸುಮಾರು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬಹುದು ಎಂದು ಬಹುತೇಕರು ಭಾವಿಸಿದ್ದರು. ಆದರೆ, ನಿರೀಕ್ಷೆ ಮೀರಿ ಸಿಕ್ಕ ಈ ಗೆಲುವು ಕಾರ್ಯಕರ್ತರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಉಗ್ರಪ್ಪ ಅವರ ಗೆಲುವಿನೊಂದಿಗೆ ರಾಜ್ಯ ರಾಜಕೀಯದಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಿದ್ದ, ಬಿಜೆಪಿಯ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಕೆಲವರ ಬಾಯಲ್ಲಿ ಬಿಂಬಿಸಿಕೊಂಡಿದ್ದ ಶ್ರೀರಾಮುಲು ಅವರ ಪ್ರಭಾವವೂ ಕ್ಷೀಣವಾದಂತಾಗಿದೆ. ಜಿಲ್ಲೆಯಲ್ಲಿನ್ನು ಕನಕಪುರದಿಂದ ಬಂದು ಜಿಲ್ಲೆಯ ಉಸ್ತುವಾರಿ ಹೊತ್ತುಕೊಂಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಹಿಡಿತ ಬಲಗೊಂಡಂತಾಗಿದೆ.