ಬಳ್ಳಾರಿ, (ನ.18): ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚಿಸಬೇಕೆಂಬ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ.  ವಿಜಯನಗರ ಜಿಲ್ಲೆ ರಚನೆಗೆ ಇಂದು (ಬುಧವಾರ( ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ದೊರೆತಿದೆ.

"

ಇನ್ನು  ಈ ಬಗ್ಗೆ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ ರೆಡ್ಡಿ, ವಿಜಯನಗರ ಜಿಲ್ಲೆ ರಚನೆಗೆ ನನ್ನ ಸಹಮತವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು ವಿಜಯನಗರ ಜಿಲ್ಲೆ ರಚನೆಯನ್ನು ವಿರೋಧಿಸಿ ಹೋರಾಟ ಮಾಡಿದರೆ ಅವರೊಂದಿಗೆ ನಾನೂ ಕೂಡ ನಿಲ್ಲುವೆ ಎಂದು ಎಚ್ಚರಿಸಿದರು.

ಯಾವುದೇ ಹಂತದಲ್ಲಿ ವಿಜಯನಗರ ಜಿಲ್ಲೆ ಘೋಷಣೆ: ಸಚಿವ ಆನಂದ ಸಿಂಗ್‌

"

ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೋಳಾಗುತ್ತದೆ. ಈ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ವಿಜಯನಗರ ‌ಜಿಲ್ಲೆ ಬೇಡ ಬೇಡ ಎಂದು ಎಷ್ಟು ಬಾರಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೇಳಬೇಕು. ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಹೇಳಿದ್ದೇವೆ. ಇನ್ನೆಷ್ಟು ಬಾರಿ ಹೇಳಬೇಕು ಎಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಭಜನೆ ಆಗಲೇಬೇಕು ಎಂದು ನಿರ್ಧಾರವಾದರೆ ನಾವೇನು ಮಾಡಬೇಕು. ರಾಜ್ಯ ಸರ್ಕಾರ ಮೊಂಡುತನಕ್ಕೆ ಬಿದ್ದರೆ ನಾನೇನು ಮಾಡಬೇಕು. ನಾನಂತೂ ಇನ್ನೊಂದು ಬಾರಿ ಮುಖ್ಯಮಂತ್ರಿಗಳಿಗೆ ಹೇಳುವುದಿಲ್ಲ. ಯಾರಾದರೂ ಈ ಬಗ್ಗೆ ಹೋರಾಟ ಮಾಡಿದರೆ, ನಾನು ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ‌ಮಾಡಿದರೆ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಜನರು ಈ ಬಗ್ಗೆ ಪ್ರತಿಭಟನೆ ಮಾಡುತ್ತಾರೆ. ನನಗೆ ಪಕ್ಷ ಮುಖ್ಯ ಅಲ್ಲ, ನನಗೆ ಜನರೇ ಮುಖ್ಯ. ಜನರು ಹೋರಾಟ ಮಾಡಿದರೆ ನಾನೂ ಜನರ ಪರವಾಗಿ ಹೋರಾಟಕ್ಕೆ ಇಳಿಯುವೆ ಎಂದು ಖಡಾಖಂಡಿತವಾಗಿ ಹೇಳಿದರು.