ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್ ಹೇಳುವವರೆಗೂ ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಮತ್ತು ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಇಲ್ಲವೆಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಬೆಳಗಾವಿ (ಡಿ.19): ಈಗಾಗಲೇ ಸಿಎಂ ಆಗಿ 5 ವರ್ಷ ಅಧಿಕಾರ ಮುಗಿಸಿದ್ದೇನೆ, ಎರಡನೇ ಬಾರಿ ನಾನು ಸಿಎಂ ಇದ್ದೇನೆ. ನನ್ನ ಪ್ರಕಾರ ಹೈಕಮಾಂಡ್‌ನವರು ನನ್ನ ಪರವಾಗಿಯೇ ಇರೋದು. ಅವರು ಹೇಳಿದಂತೆ ನಡೆದುಕೊಳ್ಳೋನು ನಾನು. ಹೀಗಾಗಿ, ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಆಗಿರುತ್ತೇನೆ. ಈಗ ಎರಡೂವರೆ ವರ್ಷ ಆಗಿದೆ, ಮುಂದೆಯೂ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಶುಕ್ರವಾರ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತ ವಿಪಕ್ಷಗಳ ಸವಾಲಿಗೆ ಸದನದಲ್ಲೇ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, 'ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ' ಎಂದು ಸ್ಪಷ್ಟಪಡಿಸುವ ಮೂಲಕ ಕುರ್ಚಿ ಸಂಘರ್ಷಕ್ಕೆ ಹೊಸ ತಿರುವು ನೀಡಿದ್ದಾರೆ.

ಎರಡೂವರೆ ವರ್ಷದ ಒಪ್ಪಂದ ಇಲ್ಲ

ವಿರೋಧ ಪಕ್ಷದ ನಾಯಕ ಆರ್. ಅಶೋಕ್, 'ನಿಮ್ಮನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ 5 ವರ್ಷಕ್ಕೆ ಆಯ್ಕೆ ಮಾಡಿದ್ದಾರೋ ಅಥವಾ ಎರಡೂವರೆ ವರ್ಷಕ್ಕೋ? ಅದನ್ನು ಸ್ಪಷ್ಟಪಡಿಸಿ' ಎಂದು ಒತ್ತಾಯಿಸಿದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಸಿಎಂ, 'ನಾನು ಎರಡೂವರೆ ವರ್ಷ ಎಂದು ಎಲ್ಲೂ ಹೇಳಿಲ್ಲ, ಅಂತಹ ಯಾವುದೇ ತೀರ್ಮಾನ ಆಗಿಲ್ಲ. ಎರಡೂವರೆ ವರ್ಷದ ನಂತರ ಕುರ್ಚಿ ಬಿಡುವ ಒಪ್ಪಂದವಾಗಿಲ್ಲ' ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ವದಂತಿಗಳನ್ನು ತಳ್ಳಿಹಾಕಿದರು. 'ಹೈಕಮಾಂಡ್ ನನ್ನ ಪರವಾಗಿಯೇ ಇದೆ, ಅವರು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ' ಎಂದರು.

ತೋಳು ತಟ್ಟಲು ಮುನಿರತ್ನ ಸವಾಲು

ಇದೇ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಮುನಿರತ್ನ, 'ಈ ಹಿಂದೆ ವಿಧಾನಸಭೆಯಲ್ಲಿ ನೀವು ಸವಾಲು ಹಾಕುವಾಗ ತೋಳು ತಟ್ಟುತ್ತಿದ್ರಿ ಅಲ್ವಾ, ಈಗಲೂ ಅದೇ ರೀತಿ ತೋಳು ತಟ್ಟಿ 5 ವರ್ಷ ನಾನೇ ಸಿಎಂ ಎಂದು ಹೇಳಿ' ಎಂದು ಸವಾಲೆಸೆದರು. ಈ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಲು ಮುನಿರತ್ನ ಯತ್ನಿಸಿದರು. ಇದಕ್ಕೆ ಮಾರ್ಮಿಕವಾಗಿ ಉತ್ತರಿಸಿದ ಸಿಎಂ, 'ಯಡಿಯೂರಪ್ಪನವರು 5 ವರ್ಷ ನಾನೇ ಸಿಎಂ ಅಂದಿದ್ದರು, 5 ವರ್ಷ ಅಧಿಕಾರದಲ್ಲಿ ಇದ್ರಾ? ರಾಜಕೀಯದಲ್ಲಿ ಇದೆಲ್ಲಾ ಸಹಜ' ಎನ್ನುತ್ತಾ ಸಿಎಂ ಕುರ್ಚಿ ಶಾಶ್ವತವಲ್ಲ ಎಂಬ ಅರ್ಥದಲ್ಲೂ ಮಾತನಾಡಿದರು.

ಬಿಜೆಪಿಗೆ ತಿರುಗೇಟು

ನಮಗೆ ಯಾರೂ ನಿರ್ದೇಶನ ನೀಡುವವರಿಲ್ಲ, ನಮ್ಮ ಮನಸ್ಸಿನಂತೆ ನಾವು ನಡೆಯುತ್ತೇವೆ. ಆದರೆ ಬಿಜೆಪಿಯವರಿಗೆ ನಿರ್ದೇಶನ ನೀಡುವವರು ಬೇರೆ ಇದ್ದಾರೆ, ಅವರು ಹೇಳಿದಂತೆ ಇವರು ಆಕ್ಟಿಂಗ್ ಮಾಡುತ್ತಾರೆ' ಎಂದು ಲೇವಡಿ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬರುವುದು ಕೇವಲ ಕನಸು ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. ಒಟ್ಟಾರೆಯಾಗಿ, ಅಧಿವೇಶನದ ಕಲಾಪವು ಅಭಿವೃದ್ಧಿ ಚರ್ಚೆಗಿಂತ ಸಿಎಂ ಕುರ್ಚಿ ಸುತ್ತಲಿನ ರಾಜಕೀಯ ಹಗ್ಗಜಗ್ಗಾಟಕ್ಕೇ ಹೆಚ್ಚು ಒತ್ತು ನೀಡಿದಂತಿದೆ.

ರಾಜಕೀಯ ನಿಶಕ್ತಿ ಇಲ್ಲ

ಇನ್ನು ಸಿಎಂ ಸಿದ್ದರಾಮಯ್ಯ ಅವರ ಸುದೀರ್ಘ ಭಾಷಣಕ್ಕೆ ಬಿಜೆಪಿಯವರು ಮಧ್ಯ ಪ್ರವೇಶ ಮಾಡಿದರು. ನೀವು ಪೀಠಿಕೆಯನ್ನೇ ಇಷ್ಟು ಹೊತ್ತು ಹಾಕಿದ್ರೆ ಹೇಗೆ..? ವಿಷಯಕ್ಕೆ ಬನ್ನಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸುನೀಲ್ ಕುಮಾರ್, ಏನು ಮುನ್ನಡೆ 25 ಪೇಜ್ ಆಯ್ತು ಅಂದರೆ, ಶಾರೀರಿಕವಾಗಿ ನಿಶಕ್ತಿಯೂ ಇಲ್ಲದಂತೆ ಆಯ್ತು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಶಾರೀರಿಕವಾಗಿ ನಿಶಕ್ತಿ ಇದೆ, ಆದರೆ ರಾಜಕೀಯ ನಿಶಕ್ತಿ ಇಲ್ಲ ಎಂದು ಮಾತು ಮುಂದುವರೆಸಿದರು.