ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ತಮ್ಮ ವಿರುದ್ಧ ಕಳೆದ ಎರಡು ತಿಂಗಳಿಂದ ವ್ಯವಸ್ಥಿತ ರಾಜಕೀಯ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ. ಡಿಸಿಸಿ ಬ್ಯಾಂಕ್ ಅಧಿಕಾರಿಯಾಗಿದ್ದ ತಮ್ಮ ಸಂಬಂಧಿಕನ ವರ್ಗಾವಣೆ ಹಿಂದೆ ಷಡ್ಯಂತ್ರವಿದೆ ಎಂದು ಹೇಳುವ ಮೂಲಕ, ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ವಾಗ್ದಾಳಿ
ಚಿಕ್ಕೋಡಿ (ಜ.3): ಕಳೆದ ಕೆಲವು ತಿಂಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಸಂಚುಗಳ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಇಂದು ಜಿಲ್ಲೆಯ ಅಥಣಿಯಲ್ಲಿ ಇಂದು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸವದಿ ಜಾರಕಿಹೊಳಿ ಸಹೋದರರ ವಿರುದ್ಧ ಗಂಭೀರ ಆರೋಪ ಮಾಡಿರುವುದು ಜಿಲ್ಲಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಳೆದ ಎರಡು ತಿಂಗಳಿಂದ ವ್ಯವಸ್ಥಿತ ಷಡ್ಯಂತ್ರ
ಕಳೆದ ಎರಡು ತಿಂಗಳಿಂದ ನನ್ನ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರಗಳು ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದ ಮೇಲೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಈ ಬಗ್ಗೆ ನಾನು ಇದುವರೆಗೆ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದರೆ ಈಗ ನನ್ನ ಮತ್ತು ರೈತರ ನಡುವೆ ಇರುವ ಬಾಂಧವ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿಕನ ವರ್ಗಾವಣೆ: ಅಧಿಕಾರಿಯ ಮೂಲಕ ಹಣ ಸಂದಾ?
ಅಥಣಿ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ತಮ್ಮ ಸಂಬಂಧಿಕ ಶಂಕರ್ ನಂದೇಶ್ವರ ಅವರ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, 'ನಂದೇಶ್ವರ ಅವರ ವಿರುದ್ಧ ಮೇಲ್ಮಟ್ಟದಲ್ಲಿ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ. ನಾನು ರೈತರ ಕಷ್ಟಗಳಿಗೆ ಸ್ಪಂದಿಸಿ ಸಹಕಾರಿ ಸಂಘಕ್ಕೆ ಹಣ ತುಂಬುತ್ತಿದ್ದೆ. ಆದರೆ ಆ ಅಧಿಕಾರಿಯೇ (ಸಂಬಂಧಿಕ) ಸವದಿಗೆ ಹಣ ತುಂಬಲು ಸಹಾಯ ಮಾಡುತ್ತಿದ್ದಾನೆ ಎಂಬ ಸುಳ್ಳು ಆರೋಪ ಹೊರಿಸಿ ಅವರನ್ನು ವರ್ಗಾವಣೆ ಮಾಡಿಸಲಾಗಿದೆ. ಸರ್ಕಾರಿ ನೌಕರರು ಎಲ್ಲಿಗಾದರೂ ವರ್ಗಾವಣೆಯಾಗಲಿ, ನಮಗೇನೂ ವ್ಯತ್ಯಾಸವಾಗಲ್ಲ ಎಂದು ಸವಾಲು ಹಾಕಿದರು.
ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷ ವಾಗ್ದಾಳಿ
ತಮ್ಮ ಭಾಷಣದ ಉದ್ದಕ್ಕೂ ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದ ಸವದಿ, ವ್ಯವಸ್ಥಿತವಾಗಿ ಪ್ಲಾನ್ ಮಾಡಿ ತಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಹರಿಹಾಯ್ದರು. ವ್ಯವಸ್ಥಿತವಾದ ಚಟುವಟಿಕೆಗಳು ನಡೆದಿವೆ ಎನ್ನುವ ಮೂಲಕ ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಕಿಡಿಕಾರಿದರು. ವರ್ಗಾವಣೆಯಂತಹ ರಾಜಕೀಯ ತಂತ್ರಗಳಿಂದ ರೈತರ ಮತ್ತು ತಮ್ಮ ನಡುವಿನ ಪ್ರೀತಿ-ವಿಶ್ವಾಸವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


