Asianet Suvarna News Asianet Suvarna News

ಅಭಿವೃದ್ಧಿಗಾಗಿ ಶೀಘ್ರ ಬಿಬಿಎಂಪಿ ಚುನಾವಣೆ: ಸಿಎಂ ಬೊಮ್ಮಾಯಿ

ಅಭಿವೃದ್ಧಿಗಾಗಿ ಪಾಲಿಕೆ ಚುನಾವಣೆ ಶೀಘ್ರವಾಗಿ ನಡೆಸಲಾಗುವುದು. ಅಭಿವೃದ್ಧಿ ನಿರಂತರವಾಗಿರಲು ಪ್ರತಿ ವಾರ್ಡ್‌ನಲ್ಲಿಯೂ ಜನಪ್ರತಿನಿಧಿ ಅಗತ್ಯ

ಹಾಗಾಗಿ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

BBMP elections held soon says cm Basavaraj Bommai gow
Author
Bengaluru, First Published Jul 18, 2022, 11:02 AM IST

ಬೆಂಗಳೂರು (ಜು.18): ಶೀಘ್ರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆ ನಡೆಸಲಾಗುವುದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭಾನುವಾರ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಿಬಿಎಂಪಿಯ ಪ್ರತಿ ವಾರ್ಡ್‌ನಲ್ಲಿ ಜನ ಪ್ರತಿನಿಧಿಗಳು ಇರಬೇಕು. ಆಗ ಹೆಚ್ಚಿನ ಕೆಲಸಗಳಾಗುತ್ತವೆ. ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಲಾಗುತ್ತಿದೆ. ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಪ್ರತಿ ವಾರ್ಡ್‌ನಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಮುಂದಿನ ತಿಂಗಳಿನಿಂದ ಬಿಬಿಎಂಪಿ 243 ವಾರ್ಡ್‌ಗಳಲ್ಲಿಯೂ ನಮ್ಮ ಕ್ಲಿನಿಕ್‌ ಕಾರ್ಯಾರಂಭಗೊಳ್ಳಲಿವೆ ಎಂದರು. ನಗರದ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, 20 ಸರ್ಕಾರಿ ಪಬ್ಲಿಕ್‌ ಶಾಲೆ ಆರಂಭಿಸುವುದಕ್ಕೆ ಅನುಮೋದನೆ ನೀಡಲಾಗಿದೆ. ಅಮೃತ್‌ ನಗರೋತ್ಥಾನ ಯೋಜನೆಯಡಿ ನಗರದ 75 ಅಭಿವೃದ್ಧಿ ಮಾಡಲಾಗುತ್ತಿದೆ. .1,600 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ನೀಡಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬರೋಬ್ಬರಿ .6 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಹಲವು ಯೋಜನೆ ಆರಂಭ: ಬೆಂಗಳೂರಿನ ಮೂಲ ಸೌಕರ್ಯಕ್ಕೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮೆಟ್ರೋ 2ನೇ ಹಂತದ ಕಾಮಗಾರಿ 2025ರ ಬದಲಾಗಿ 2024ರಲ್ಲೇ ಪೂರ್ಣಗೊಳಿಸಲಾಗುವುದು. ಬೆಂಗಳೂರು ನಗರದ ಹೊರ ವಲಯವನ್ನು ಸಂಪರ್ಕಿಸುವ 3ನೇ ಹಂತದ ಮೆಟ್ರೋ ಕಾರ್ಯವನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು. ತಲಾ .15 ಸಾವಿರ ಕೋಟಿ ವೆಚ್ಚದಲ್ಲಿ ಸಬ್‌ಅರ್ಬನ್‌ ರೈಲ್ವೆ ಯೋಜನೆ ಹಾಗೂ ಪೆರಿಫೆರಲ್‌ ರಿಂಗ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಯನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕೆಂದು ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಶೇ.40 ವಾಹನ ದಟ್ಟಣೆ ಕಡಿಮೆ: ಕುರುಬರಹಳ್ಳಿ ಮಾರ್ಗವಾಗಿ ರಿಂಗ್‌ ರಸ್ತೆಗೆ ಸಂಪರ್ಕಿಸುವ 384 ಮೀಟರ್‌ ಉದ್ದದ ಫ್ಲೈಓವರ್‌ ನಿರ್ಮಾಣದಿಂದ ಶೇ.40ರಷ್ಟುಸಂಚಾರಿ ದಟ್ಟಣೆ ಕಡಿಮೆಯಾಗಲಿದೆ. .55 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ರಾಜಾಜಿ ನಗರ, ಮಲ್ಲೇಶ್ವರ, ಬಸವೇಶ್ವರ ನಗರ, ಯಶವಂತಪುರ, ಆರ್‌.ಆರ್‌. ನಗರ ಹಾಗೂ ಮಹಾಲಕ್ಷ್ಮಿ ಲೇಔಟ್‌ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಈ ವೇಳೆ ಸಚಿವರಾದ ಕೆ. ಗೋಪಾಲಯ್ಯ, ಮುನಿರತ್ನ, ಭೈರತಿ ಬಸವರಾಜ್‌, ವಿಧಾನ ಪರಿಷತ್‌ ಸದಸ್ಯ ಆ.ದೇವೇಗೌಡ, ಮಾಜಿ ಶಾಸಕ ನೆಲ ನರೇಂದ್ರ ಬಾಬು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ವಿಶೇಷ ಆಯುಕ್ತ ಡಾ. ದೀಪಕ್‌ ಇದ್ದರು.

ಮುನಿರತ್ನ ಸ್ವಲ್ಪ ಕಿಲಾಡಿ!: ಸಚಿವ ಮುನಿರತ್ನ ಸ್ವಲ್ಪ ಕಿಲಾಡಿ ಇದ್ದಾನೆ. ಆದರೆ, ಗೋಪಾಲಯ್ಯ ರಾಷ್ಟ್ರೀಯ ಹೆದ್ದಾರಿ ಇದ್ದಂತೆ. ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಗೊಳ್ಳುವ ಎಲ್ಲ ರಸ್ತೆಗಳು ಮುನಿರತ್ನ ಅವರದ್ದು, ರಸ್ತೆ ಎಲ್ಲಿಂದ ಶುರು ಮಾಡುತ್ತಾನೋ, ಎಲ್ಲಿಗೆ ಮುಗಿಸುತ್ತಾನೋ ಎಂಬುದು ಎಂಜಿನಿಯರ್‌ಗಳಿಗೂ ಅರ್ಥವಾಗುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಮುನ್ನಿರತ್ನ ಅವರನ್ನು ಕಿಚಾಯಿಸಿದರು.

ಭಾನುವಾರ ಮುಖ್ಯಮಂತ್ರಿ ಚಾಲನೆ ನೀಡಿದ ಯೋಜನೆಗಳಿವು

ಡಾ ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನ: ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ .7 ಕೋಟಿ ವೆಚ್ಚದಲ್ಲಿ 3,978 ಚ.ಅಡಿ ವಿಸ್ತೀರ್ಣದ ಸಮುದಾಯ ಭವನ ನಿರ್ಮಿಸಲಾಗಿದೆ. ನೆಲ ಮಹಡಿ ಸೇರಿ ಒತ್ತು ಐದು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ.

 ಬಸವಧಾಮ ಉದ್ಯಾನವನ: ಡಾ.ರಾಜ್‌ಕುಮಾರ್‌ ರಸ್ತೆಯ ಮೈಸೂರು ಸ್ಯಾಂಡರ್‌ ಸೋಪ್‌ ಫ್ಯಾಕ್ಟರಿ ವೃತ್ತದಲ್ಲಿ .4.80 ಕೋಟಿ ವೆಚ್ಚದಲ್ಲಿ ಬಸವಧಾಮ ಉದ್ಯಾನವನ ನಿರ್ಮಿಸಲಾಗಿದೆ. ಉದ್ಯಾನವನದಲ್ಲಿ ಬಸವಣ್ಣ ಪುತ್ಥಳಿ ಹಾಗೂ ಸಿದ್ಧಗಂಗಾ ಶ್ರೀ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ಸ್ಥಾಪಿಸಲಾಗಿದೆ.

ಕುರುಬರಹಳ್ಳಿ ಫ್ಲೈಓವರ್‌: ರಾಜಾಜಿ ನಗರದಿಂದ ಕುರುಬರಹಳ್ಳಿ ಮಾರ್ಗವಾಗಿ ರಿಂಗ್‌ ರಸ್ತೆಗೆ ಸಂಪರ್ಕಿಸುವ 384 ಮೀಟರ್‌ ಉದ್ದದ 4 ಪಥದ ಫ್ಲೈಓವರ್‌ ನಿರ್ಮಾಣಕ್ಕೆ ಸಿಎಂ ಚಾಲನೆ ನೀಡಿದರು. ಒಟ್ಟು .55 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

 

 ಬಿಬಿಎಂಪಿ 243 ವಾರ್ಡ್ ಅಂತಿಮ, 24 ವಾರ್ಡ್‌ ಹೆಸರು ಬದಲಿಸಿ ಸರ್ಕಾರ ಆದೇಶ

 ನಾಗಪುರ ಧೋಬಿ ಫಾಟ್‌ ಆಧುನಿಕರಣ: ಒಟ್ಟು .6 ಕೋಟಿ ವೆಚ್ಚದಲ್ಲಿ ಇಸ್ಕಾನ್‌ ದೇವಸ್ಥಾನದ ಪಕ್ಕದಲ್ಲಿರುವ ಧೋಬಿ ಘಾಟ್‌ನ ಅತ್ಯಾಧುನಿಕ ಸ್ವಯಂ ಚಾಲಿತ ಬಟ್ಟೆತೊಳೆಯುವ 4 ಯಂತ್ರ ಹಾಗೂ 2 ಬಾಯ್ಲರ್‌ ಅಳವಡಿಕೆ ಮಾಡಲಾಗಿದೆ.

 ಡಾ.ಬಾಲಗಂಗಾಧರನಾಥ ಶ್ರೀ ಉದ್ಯಾನವನ: ವೃಷಭಾವತಿ ವಾರ್ಡ್‌ನಲ್ಲಿ .3.92 ಕೋಟಿ ವೆಚ್ಚದಲ್ಲಿ ಡಾ.ಬಾಲಗಂಗಾಧರನಾಥ ಶ್ರೀ ಉದ್ಯಾನವನವನ್ನು ಆಧುನೀಕರಣ ಮಾಡಲಾಗಿದೆ.

 ಹಕ್ಕುಪತ್ರ ವಿತರಣೆ: ನಾಗಪುರ ವಾರ್ಡ್‌ನ ಭೋವಿಪಾಳ್ಯ ಕೊಳಗೇರಿ ಪ್ರದೇಶದಲ್ಲಿ 1.2 ಎಕರೆಯಲ್ಲಿ ಬಿಬಿಎಂಪಿಯ ಒಂಟಿ ಮನೆ ಯೋಜನೆಯಡಿ ನಿರ್ಮಿಸಲಾದ ಮನೆಗಳ ಹಕ್ಕುಪತ್ರಗಳನ್ನು 135 ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.

ಮೇಲ್ಸೇತುವೆಗೆ ಪುನೀತ್‌ ಹೆಸರು?: ಕುರುಬರಹಳ್ಳಿಯ ಮೇಲ್ಸೇತುವೆಗೆ ಡಾ.ಪುನೀತ್‌ ರಾಜ್‌ ಕುಮಾರ್‌ ಅಥವಾ ಡಾ.ರಾಜ್‌ಕುಮಾರ್‌ ಹೆಸರನ್ನು ನಾಮಕರಣ ಮಾಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಗೋಪಾಲಯ್ಯ ಅವರೊಂದಿಗೆ ಚರ್ಚೆ ಮಾಡಲಾಗಿದೆ.

-ಮುನಿರತ್ನ, ತೋಟಗಾರಿಕೆ ಸಚಿವ.

ಕುರುಬರ ಹಳ್ಳಿ ಮೇಲ್ಸೇತುವೆ ನಿರ್ಮಾಣದಿಂದ ಅಕ್ಕಪಕ್ಕದಲ್ಲಿರುವ ಯಾವುದೇ ಖಾಸಗಿ ಆಸ್ತಿ ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ.

-ಗೋಪಾಲಯ್ಯ, ಅಬಕಾರಿ ಸಚಿವ.

Follow Us:
Download App:
  • android
  • ios