ಪೋಸ್ಟ್ ಅಂಟಿಸೋದು ಶೌರ‍್ಯ ಅಲ್ಲ, ಹೇಡಿಗಳ ಕೆಲಸ: ಸಿಎಂ ಬೊಮ್ಮಾಯಿ
ಟೀಕೆಗಳೇ ನನಗೆ ಟಾನಿಕ್ ಇದ್ದಂತೆ, ಅವುಗಳನ್ನು ನಾನು ಸ್ವಾಗತಿಸುತ್ತೇನೆ. ಟೀಕೆಗಳು ಆತ್ಮಸ್ಥೈರ್ಯ ಹಾಗೂ ಸಂಕಲ್ಪವನ್ನು ಹೆಚ್ಚಿಸುತ್ತದೆ. ಅವುಗಳನ್ನು ಮೆಟ್ಟಿಲು ಮಾಡಿಕೊಂಡು ಗುರಿಯ ಕಡೆಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರು (ಸೆ.26): ಟೀಕೆಗಳೇ ನನಗೆ ಟಾನಿಕ್ ಇದ್ದಂತೆ, ಅವುಗಳನ್ನು ನಾನು ಸ್ವಾಗತಿಸುತ್ತೇನೆ. ಟೀಕೆಗಳು ಆತ್ಮಸ್ಥೈರ್ಯ ಹಾಗೂ ಸಂಕಲ್ಪವನ್ನು ಹೆಚ್ಚಿಸುತ್ತದೆ. ಅವುಗಳನ್ನು ಮೆಟ್ಟಿಲು ಮಾಡಿಕೊಂಡು ಗುರಿಯ ಕಡೆಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನ ಬಳಿಯ ಉದ್ಯಾನವನದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಆಯೋಜಿಸಿದ್ದ ಒಂಬತ್ತು ದಿನಗಳ ಮೋದಿ ಯುಗ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರಿಗೆ ಒಳ್ಳೆಯದು ಮಾಡಲು ಶಾಸಕ ಎಸ್.ಎ.ರಾಮದಾಸ್ ಮತ್ತು ಎಲ್. ನಾಗೇಂದ್ರ ಅವರು ಪೈಪೋಟಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದು ಅಭಿವೃದ್ಧಿ ರಾಜಕಾರಣದ ಕಾಲ. ಅವಕಾಶ ಇದ್ದಾಗ ಏನನ್ನೂ ಮಾಡದಿದ್ದವರು ಇಂದು ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಜನರ ಬೆಂಬಲ ಇರುವುದು ಅಭಿವೃದ್ಧಿಗೋ ಅಥವಾ ಕ್ಷುಲ್ಲಕ ಕೀಳು ರಾಜಕಾರಣಕ್ಕೋ ಎಂಬುದನ್ನು ಜನರೇ ನಿರ್ಧರಿಸಲಿ ಎಂದರು. ಸದನದಲ್ಲಿ ಸರಿಯಾಗಿ ಚರ್ಚಿಸದೆ ಗೋಡೆಯ ಮೇಲೆ ಪೋಸ್ಟರ್ ಅಂಟಿಸುವುದು ಯಾವ ಶೂರತನದ ಕೆಲಸ? ಹೇಡಿಗಳ ಕೆಲಸಕ್ಕೆ ನಾನು ಹೆದರುವುದಿಲ್ಲ. ಮನುಷ್ಯನಲ್ಲಿ ಒಳ್ಳೆಯ ಗುಣದಂತೆ ದುಷ್ಟಗುಣಗಳೂ ಇರುತ್ತವೆ.
ಸಾಲ ಕಟ್ಟದ ರೈತರ ಆಸ್ತಿಗಳ ಜಪ್ತಿ ತಡೆಗೆ ಕಾಯ್ದೆ: ಸಿಎಂ ಬೊಮ್ಮಾಯಿ
ಅವು ನಮ್ಮೊಳಗಿನ ಮಹಿಷಾಸುರನಂತೆ, ಅವುಗಳನ್ನು ಕೊಂದುಕೊಳ್ಳೋಣ. ಎಲ್ಲವೂ ನಮ್ಮಿಂದಲೇ ಎಂಬ ಭ್ರಮೆಗಳಿಂದ ಹೊರಗೆ ಬರೋಣ ಎಂದು ಅವರು ಕಿವಿಮಾತು ಹೇಳಿದರು. ಅಭಿವೃದ್ಧಿಯ ವಿಷಯದಲ್ಲಿ ಕೆಲವರು ಪೈಪೋಟಿ ನೀಡುತ್ತಾರೆ. ಮತ್ತೆ ಕೆಲವರು ತನ್ನ ಅವಧಿಯಲ್ಲಂತೂ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಬೇರೆಯವರಾದರೂ ಮಾಡಲಿ ಎನ್ನದೆ ಕಾಲು ಎಳೆಯುವರು ಇರುತ್ತಾರೆ. ಇಂಥವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಮೊದಲಿಸಿದರು.
ಅನೇಕ ಯೋಜನೆಯ ಹಣವನ್ನು ಮಧ್ಯವರ್ತಿಗಳೇ ತಿಂದು ಹಾಕುತ್ತಿದ್ದರು. ದಿಲ್ಲಿಯಿಂದ ನೀಡಿದ 100 ರೂ. ಹಳ್ಳಿಗೆ ತಲುಪುವಷ್ಟರಲ್ಲಿ 15 ರು. ಆಗಿರುತ್ತದೆ ಎಂದು ಹಿಂದಿನ ಪ್ರಧಾನಿಗಳು ಪ್ರಾಮಾಣಿಕವಾಗಿ ಹೇಳಿದ್ದರು. ಇದಕ್ಕೆ ಕಾರಣ, ಅಂದಿನ ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆ ಇರಬಹುದು. ಮಧ್ಯವರ್ತಿಗಳಿರುವ ರಾಜಕೀಯ ವ್ಯವಸ್ಥೆ ಈಗಲೂ ಇದೆ. ಅದನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೇರ ನಗದು ವರ್ಗಾವಣೆ ಅಡಿ ಎಲ್ಲ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಇದರಿಂದಾಗಿ ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುತ್ತಿದ್ದಾರೆ ಎಂದರು.
ಘೋಷಣೆಯಿಂದ ಬಡತನ ನಿರ್ಮೂಲನೆ ಆಗುವುದಿಲ್ಲ. ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಬಡತನ ನಿರ್ಮೂಲನೆ ಘೋಷಣೆಯೊಂದಿಗೆ ಚುನಾವಣೆ ಎದುರಿಸಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದವರ ಬಡತನ ಹೋಯಿಯೇ ಹೊರತು, ಜನ ಸಾಮಾನ್ಯರು ಬಡವರಾಗಿಯೇ ಉಳಿದರು. ಆದರೆ ಈಗ ಜನರು ಜಾಗೃತರಾಗಿದದಾರೆ. ಎಲ್ಲ ಸಂದರ್ಭದಲ್ಲೂ ಎಲ್ಲರಿಗೂ ಮೋಸ ಮಾಡಲಾಗದು. ಜನ ರಾಜಕಾರಣ ಮಾಡಿದರೆ ಸಮಾಜಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಅರಿಯಬೇಕು ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಶಾಸಕ ಎಸ್.ಎ. ರಾಮದಾಸ್, ಇದುವರೆಗಿನ ಕಾರ್ಯಕ್ರಮಗಳು ಮತ್ತು ಮುಂದಿನ ಯೋಜನೆಗಳನ್ನು ಕುರಿತು ಮಾಹಿತಿ ನೀಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ 4 ಕೋಟಿ ರು. ವೆಚ್ಚದಲ್ಲಿ ದಿನದ 24 ಗಂಟೆಯೂ ತೆರೆದಿರುವ ಗ್ರಂಥಾಲಯ ನಿರ್ಮಾಣ ಕಾಮಗಾರಿ ಆರಂಭಿಸುತ್ತಿದ್ದು, ಇನ್ನೂ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಸಂಸದ ಪ್ರತಾಪ ಸಿಂಹ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ನಗರ ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್, ಬಿ.ವಿ. ಮಂಜುನಾಥ್, ನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಆಯುಕ್ತೆ ರೂಪಾ, ಎಂಡಿಎ ಆಯುಕ್ತ ದಿನೇಶ್ ಮೊದಲಾದವರು ಇದ್ದರು.
ನಾನು ಲಾ ಓದಿದ್ದೇನೆ, ಬೊಮ್ಮಾಯಿ ಲಾ ಓದಿಲ್ಲ, ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ
ರಾಮದಾಸ್‌ರನ್ನು ಹೊಗಳಿದ ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಎಸ್.ಎ. ರಾಮದಾಸ್ ಅವರನ್ನು ಹೊಗಳಿದರು. ದಿಟ್ಟ, ಧೀಮಂತ, ಧೀರ, ಬಡವರ ಬಂಧು ಎಂದು ಕೊಂಡಾಡಿದರು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಸೌಲಭ್ಯ ಕೊಡಿಸ್ತೀನಿ ಅಂತ ದುಡ್ಡು ಹೊಡೆಯುವ ಮಧ್ಯವರ್ತಿಗಳಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ನೇರವಾಗಿ 70 ಸಾವಿರ ಫಲಾನುಭವಿಗಳಿಗೆ ಸವಲತ್ತು ತಲುಪಿಸುತ್ತಿರುವುದು ದೇಶದಲ್ಲಿಯೇ ದಾಖಲೆಯ ಕೆಲಸ. ಈ ಕಾರ್ಯಕ್ರಮದಿಂದ ನಾನೂ ಸ್ಪೂರ್ತಿ ಹೊಂದಿದ್ದೇನೆ.