ಎಲ್ಲ ಬೆಲೆ ಏರಿಸಿ ಕಾಂಗ್ರೆಸ್ ಸರ್ಕಾರದಿಂದ ಲೂಟಿ: ಟ್ರ್ಯಾಕ್ಟರ್ ಎಳೆದು ಆಕ್ರೋಶ ವ್ಯಕ್ತಪಡಿಸಿದ ಬೊಮ್ಮಾಯಿ
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಡೀಸೆಲ್ ಖಾಲಿಯಾಗಿದ್ದ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಜನರಿಗೆ ಆರ್ಥಿಕ ಹೊರೆ ಜೊತೆಗೆ ಬೆಲೆ ಏರಿಕೆ ಬರೆ ಹಾಕಲು ಹೊರಟಿದೆ ಎಂದು ಖಂಡಿಸಿ ಘೋಷಣೆ ಕೂಗಿದರು.
ದಾವಣಗೆರೆ (ಜೂ.21): ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರನ್ನು ಲೂಟಿ ಮಾಡುತ್ತಿದೆ. ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಗಾಯದ ಮೇಲೆ ಬರೆ ಹಾಕುತ್ತಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕವು ಹಾವೇರಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೈಗಳಲ್ಲಿ ಖಾಲಿ ಚಿಪ್ಪುಗಳನ್ನು ಹಿಡಿದು ಹಾಗೂ ಡೀಸೆಲ್ ಇಲ್ಲದ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪ್ರತಿಭಟಿಸಲಾಯಿತು. ನಗರದ ಕೆ.ಬಿ. ಬಡಾವಣೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು.
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಡೀಸೆಲ್ ಖಾಲಿಯಾಗಿದ್ದ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಜನರಿಗೆ ಆರ್ಥಿಕ ಹೊರೆ ಜೊತೆಗೆ ಬೆಲೆ ಏರಿಕೆ ಬರೆ ಹಾಕಲು ಹೊರಟಿದೆ ಎಂದು ಖಂಡಿಸಿ ಘೋಷಣೆ ಕೂಗಿದರು. ಬಸವರಾಜ ಬೊಮ್ಮಾಯಿ ಅವರು ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ, ಜನಪರ ಕೆಲಸಕ್ಕೆ ಅನುದಾನ ನೀಡಲಾಗದ ಕಾಂಗ್ರೆಸ್ ಸರ್ಕಾರವು ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಜನ ಸಾಮಾನ್ಯರಿಗೆ ಮೋಸ ಮಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದರು.
ಕಾಫಿನಾಡ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ: ಕಾರಣವೇನು?
ಅಭಿವೃದ್ಧಿಗೆ ಅನುದಾನ ನೀಡಿಲ್ಲ: ಕಾಂಗ್ರೆಸ್ ಅಧಿಕಾರದಲ್ಲಿ ರಾಜ್ಯದ ಜನತೆ ತಲೆ ಮೇಲೆ ₹1.5 ಲಕ್ಷ ಕೋಟಿ ಸಾಲ ಹೇರಲಾಗಿದೆ. ತೆರಿಗೆ ಹೆಚ್ಚಳ, ಬೆಲೆ ಏರಿಕೆ, ಮದ್ಯದ ದರ 2 ಸಲ ಹೆಚ್ಚಳ, ವಿದ್ಯುತ್ ದರ ನಾಲ್ಕು ಸಲ ಹೆಚ್ಚಳ, ಹಾಲಿನ ದರ ಏರಿಕೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ ಈಗ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಕ್ರಮವಾಗಿ ₹3, ₹3.50 ಹೆಚ್ಚಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ವಿಪಕ್ಷ ಶಾಸಕರ ಕ್ಷೇತ್ರ ಬೇಡ, ಸ್ವಪಕ್ಷ ಕಾಂಗ್ರೆಸ್ಸಿನ ಶಾಸಕರ ಕ್ಷೇತ್ರಕ್ಕೇ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕಾಂಗ್ರೆಸ್ ವಿರುದ್ಧ ಅದೇ ಪಕ್ಷದ ಶಾಸಕರು ತಿರುಗಿಬಿದ್ದಿದ್ದಾರೆ ಎಂದು ಟೀಕಿಸಿದರು.
ಸಿಎಂ ರಾಜೀನಾಮೆಗೆ ಆಗ್ರಹ: ಬೆಂಗಳೂರು ಸುತ್ತಮುತ್ತಲಿನ ಜಮೀನನ್ನು ನಗದೀಕರ ಮಾಡುವ ಹುನ್ನಾರ ನಡೆಸಲಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾದ ಜೊತೆಗೆ ಡೀಲ್ ಮಾಡಿಕೊಂಡಿದೆ. ರಾಜ್ಯದ ಪಿತ್ರಾರ್ಜಿತ ಆಸ್ತಿಯನ್ನು ಮಾರುವ ಡೀಲ್‌ಗೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ಇಂಥದ್ದೊಂದು ಹುನ್ನಾರ ನಡೆಸಿದ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ತಕ್ಷಣವೇ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ತಾಕೀತು ಮಾಡಿದರು.
ಕರ್ನಾಟಕ ರಾಜ್ಯ ಉಳಿಯಬೇಕಾದರೆ ರಾಜ್ಯವು ಮತ್ತೆ ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ಬರಬೇಕು. ಹಾಗೆ ಆಗಬೇಕೆಂದರೆ ಮೊದಲು ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನೇ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತೊಲಗಬೇಕು. ರಾಜ್ಯವನ್ನು, ರಾಜ್ಯದ ಜನರನ್ನು ಕೊಳ್ಳೆ ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಆಂದೋಲನ ನಡೆಸಿದೆ. ನಾನು ಸಿಎಂ ಇದ್ದಾಗ ತೈಲದ ಮೇಲಿನ ಸೆಸ್ ಕಡಿಮೆ ಮಾಡಿದ್ದೆ. ಆಗ ಬೊಬ್ಬೆ ಹಾಕಿದ್ದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಧ್ವನಿ ಈಗ ಎಲ್ಲಿ ಹೋಯಿತು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರೇ ಬೀದಿಗಿಳಿದು ಹೋರಾಟ ನಡೆಸಿ, ಈ ಸರ್ಕಾರವನ್ನು ಉರುಳಿಸುವ ದಿನಗಳೂ ದೂರವಿಲ್ಲ. ಇಂದಿನ ಕಷ್ಟ ದಿನಗಳಲ್ಲಿ ಜನರು ಆರ್ಥಿಕ ಹೊರೆಹೊರಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ತಪ್ಪು ನೀತಿ, ನಿರ್ಧಾರ, ನಿಲುವುಗಳಿಂದಾಗಿ ಜನರಿಗೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರೇ ನೀವು ಗ್ಯಾರಂಟಿಗಳನ್ನು ಕೊಡಿ. ಆದರೆ, ಅದಕ್ಕಾಗಿ ಆರ್ಥಿಕವಾಗಿ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಅದನ್ನು ಬಿಟ್ಟು, ಜನರು ಬೆವರು ಹರಿಸಿ, ಕಷ್ಟಪಟ್ಟು ದುಡಿದ ಹಣಕ್ಕೆ ಟ್ಯಾಕ್ಸ್ ರೂಪದಲ್ಲಿ ಕೈಹಾಕಿ, ವಸೂಲಿ ಮಾಡುವುದಲ್ಲ ಎಂದು ಅವರು ಹೇಳಿದರು.
ಒಬ್ಬರ ಜೇಬಿನಿಂದ ಕದ್ದು ಇನ್ನೊಬ್ಬರಿಗೆ ಗ್ಯಾರಂಟಿ ಕೊಟ್ಟಿದ್ದೇ ರಾಜ್ಯ ಸರ್ಕಾರದ ಸಾಧನೆ: ಬೊಮ್ಮಾಯಿ
ಮುಖ್ಯಮಂತ್ರಿ, ಕಾಂಗ್ರೆಸ್ ಸರ್ಕಾರಕ್ಕೆ ಜನರ ಬಗ್ಗೆ ನಿಜವಾದ ಕಾಳಜಿ, ಬದ್ಧತೆ ಇದ್ದರೆ ಹೆಚ್ಚುವರಿಯಾಗಿ ₹60 ಸಾವಿರ ಕೋಟಿ ಸಂಗ್ರಹ ಮಾಡಲಿ. ಆದರೆ, ಜನರು ದುಡಿದ ಹಣ ಅಭಿವೃದ್ಧಿಗಷ್ಟೇ ಬಳಕೆಯಾಗಬೇಕು. ಅದನ್ನು ಬಿಟ್ಟು, ನಿಮ್ಮ ಗ್ಯಾರಂಟಿಗಳಿಗಾಗಿ ಬಡವರು, ಜನಸಾಮಾನ್ಯರ ದುಡಿದ ಹಣಕ್ಕೆ ಕೈ ಹಾಕಬೇಡಿ. ನಿಮ್ಮ ಗ್ಯಾರಂಟಿ ಉಳಿಸಿಕೊಳ್ಳಲು ತೈಲ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ, ಜನರ ಬೇಡಿಕೆ ಕತ್ತರಿ ಹಾಕುವ ಕೆಲಸವನ್ನು ಮಾಡಬೇಡಿ. ಇಂತಹ ಕೆಲಸವನ್ನು ರಾಜ್ಯದ ಜನತೆಯೂ ಕ್ಷಮಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಚಾಟಿ ಬೀಸಿದರು.