Asianet Suvarna News Asianet Suvarna News

ಬಿಜೆಪಿ ಸಂಘಟನಾ ಯಾತ್ರೆ ಸಿಎಂ ಬೊಮ್ಮಾಯಿಗೆ ಭೂಮಿಕೆ ಆಗುವುದೇ?

ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಸಂಘಟನಾ ಯಾತ್ರೆ ಹೊರಟಿದ್ದಾರೆ. ರಾಜ್ಯದಲ್ಲ ತಮ್ಮ ನೇತೃತ್ವದ ಪ್ರಭಾವವನ್ನು ಜನರ ಮುಂದೆ ಪ್ರದರ್ಶಿಸುವ ಅನಿವಾರ್ಯತೆ ಅವರ ಮುಂದಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಲ್ಲದು? 

Basavaraj Bommai become Chief Minister of Karnataka the way like Narendra Modi in Gujarat Can he develop charm like PM ckm
Author
First Published Sep 29, 2022, 7:33 PM IST

Ravi Shivaram
Political Reporter, Asianet Suvarna News

ಆಗಿನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್  ಯಡಿಯೂರಪ್ಪ ಕೆಳಗೆ ಇಳಿದಿರಲಿಲ್ಲ. ಆದರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ವದಂತಿ ಅವರ ಪದತ್ಯಾಗಕ್ಕಿಂತ ಎರಡು ಮೂರು ತಿಂಗಳ ಮೊದಲೇ ಬಲವಾಗಿ ಕೇಳಿ ಬಂದಿತ್ತು. ಆ ಸಮಯದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿಯವರಿಗೆ, ಸರ್ ನೀವೇ ನೆಕ್ಸ್ಟ್ ಸಿಎಂ ಎಂದು ಪತ್ರಕರ್ತ ಸ್ನೇಹಿತರು ಕಿಚಾಯಿಸುವ ರೀತಿ ಪ್ರಶ್ನೆ ಮಾಡಿದಾಗ, ಏ ಸುಮ್ನೆ ಇರಪ್ಪ, ಎಂದು ಬೊಮ್ಮಾಯಿ ಸಾಹೇಬರು ಮಾಧ್ಯಮದವರ ಪ್ರಶ್ನೆಗೆ ಏನು ಉತ್ತರ ನೀಡದೆ ನಗುತ್ತಲೇ ಎದ್ದು ಹೋಗುತ್ತಿದ್ದರು. ಸೀನ್ ಕಟ್ ಮಾಡಿದರೆ ಅದೇ ಎರಡು ತಿಂಗಳ ಬಳಿಕ ಬಸವರಾಜ್ ಬೊಮ್ಮಾಯಿಯವರು ನಿರಾಯಾಸವಾಗಿ ಮುಖ್ಯಮಂತ್ರಿ ಪಟ್ಟ ಏರಿಬಿಟ್ಟಿದ್ದರು. ಆರಾಮಾಗಿ ಮುಖ್ಯಮಂತ್ರಿ ಗಾದಿಗೆ ಏರಿರುವ ಬಸವರಾಜ್ ಬೊಮ್ಮಾಯಿಗೆ ಈಗ ಪರೀಕ್ಷೆಯ ಸಮಯ. ಚುನಾವಣಾ ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಪಡೆಯಬೇಕು ಎಂದರೆ ಸಿದ್ಧತೆ ಮಾಡಬೇಕು. ಆ ಸಿದ್ಧತೆಯನ್ನು ಈಗ ಬೊಮ್ಮಾಯಿ ಆರಂಭಿಸಿದ್ದಾರೆ. ಪ್ರಿಲಿಮಿನರಿ ಪರೀಕ್ಷೆ  ಮಾರ್ಕ್ಸ್ ನೋಡಿದರೆ, ಬೊಮ್ಮಾಯಿ ಮೇಲೆ ನಾಟ್ ರೀಚೆಬಲ್ ಆರೋಪ ಇದೆ. ಈ ಆರೋಪದ ಮಧ್ಯೆಯೇ ಬೊಮ್ಮಾಯಿ ಈಗ ಸ್ವತಃ ಜನರ ಬಳಿ ಹೋಗಲು‌ ನಿರ್ಧರಿಸಿದ್ದಾರೆ!

ಬೊಮ್ಮಾಯಿಗೆ ಭೂಮಿಕೆ
ಬೊಮ್ಮಾಯಿಯವರು, ಕಲ್ಯಾಣ ಕರ್ನಾಟಕ ಜಿಲ್ಲೆಯಾದ ರಾಯಚೂರಿನಿಂದ ಯಾತ್ರೆ ಹೊರಡಲು ಸಜ್ಜಾಗಿದ್ದಾರೆ.  ಅಕ್ಟೋಬರ್ ಮೊದಲ ವಾರದಿಂದ ಪ್ರವಾಸ ಆರಂಭಿಸಿ, ಮೊದಲ ರೌಂಡ್ಸ್ ನಲ್ಲಿ ಒಟ್ಟು 52 ಕ್ಷೇತ್ರಗಳ ಪ್ರದಕ್ಷಿಣೆ ಹಾಕಲು ಟೀಮನ್ನು ಸಜ್ಜುಗೊಳಿಸಿದ್ದಾರೆ.  ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿ ಪ್ರತಿ ಜಿಲ್ಲೆಯಿಂದ ಎರಡು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬೊಮ್ಮಾಯಿ ನೇತೃತ್ವದ ಯಾತ್ರೆ ಜನರ ಮುಂದೆ ಹೋಗಲಿದೆ. ಆ ತಂಡಕ್ಕೆ ಸ್ವತಃ ಬೊಮ್ಮಾಯಿ ಅವರೇ ಲೀಡರ್. ವಿಶೇಷವೆಂದರೆ ಬೊಮ್ಮಾಯಿಯವರ ತಂಡದಲ್ಲಿಯೇ ಯಡಿಯೂರಪ್ಪ ಕೂಡ ಇದ್ದಾರೆ. ಈ ಹಿಂದೆ ಬಿಜೆಪಿ ಜನಾಶೀರ್ವಾದ ಯಾತ್ರೆ ಮಾಡಿದ್ದಾಗ, ನಾಲ್ಕು ತಂಡಗಳಾಗಿ ಪ್ರವಾಸ ಕೈಗೊಂಡಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ, ಹೊರಟಿರುವ ಈ ಸಂಘಟನಾ ಯಾತ್ರೆಗೆ ಕೇವಲ ಎರಡು ತಂಡವನ್ನಷ್ಟೇ ರಚಿಸಿರುವುದು ವಿಶೇಷ. ಅಧ್ಯಕ್ಷ ಕಟೀಲ್ ನೇತೃತ್ವವಿದ್ದರೆ, ಮತ್ತೊಂದು ಟೀಮಿಗೆ ಬೊಮ್ಮಾಯಿ ಅವರದ್ದೇ ಲೀಡರ್‌ಶಿಪ್. ಯಾಕೆ ಹಾಗೆ? ಸ್ವಲ್ಪ ಆಳಕ್ಕೆ ಹೋಗಿ ನೋಡಿದರೆ ,ಬೊಮ್ಮಾಯಿ ಅವರನ್ನು ಮುಖ್ಯ ಭೂಮಿಕೆ ತರಲು ಇದೊಂದು ಯತ್ನ ಎಂಬುವುದು ಸ್ಪಷ್ಟವಾಗುತ್ತದೆ. 

Karnataka Politics: ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿಯೇ ಸಂಜೀವಿನಿ!

ಬಸವರಾಜ್ ಬೊಮ್ಮಾಯಿದ್ದೇ ನೇತೃತ್ವ!
ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ದಾವಣಗೆರೆಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಬಾರಿ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಘೋಷಿಸಿದ್ದರು. ಆದರೆ ಅದ್ಯಾಕೋ ಬರ ಬರುತ್ತಾ ಬೊಮ್ಮಾಯಿ ಅವರನ್ನೂ ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಗುಸು ಗುಸು ಸಹ ಪಕ್ಷದ ಒಳಗೂ, ಹೊರಗೂ ಕೇಳಿ ಬರಲು ಶುರುವಾಯಿತು. ಈ ಸುದ್ದಿಯನ್ನು ಪಕ್ಷದವರೇ ಹಬ್ಬಿಸಿದ್ರೊ ಅಥವಾ ವಿಪಕ್ಷಗಳ ರಾಜಕೀಯ ತಂತ್ರವೊ ಎನ್ನುವ ಚರ್ಚೆ ಈಗ ಬೇಡ. ಆದರೆ ಹಬ್ಬಿದ್ದ ವದಂತಿ ರಾಜ್ಯ ಬಿಜೆಪಿಗೆ ಕಸಿವಿಸಿ ಉಂಟು ಮಾಡಿದ್ದು ಮಾತ್ರ ಸುಳ್ಳಲ್ಲ. ಸಿಎಂ ಬದಲಾವಣೆ ಇಲ್ಲ ಇಲ್ಲವೆಂದು ಬೊಮ್ಮಾಯಿ ಸಂಪುಟದ ಸಚಿವರು, ಪಕ್ಷದ ನಾಯಕರು ಹೇಳಿಕೆ ನೀಡಿ, ನೀಡಿ ಸುಸ್ತಾಗಿಬಿಟ್ಟಿದ್ದರು. ಈಗ ಆ ವದಂತಿಗೇನೋ ತೆರೆ ಬಿದ್ದಿದೆ. ಮುಂದಿನ ಚುನಾವಣೆಗೂ ಬೊಮ್ಮಾಯಿಯವರದ್ದೇ ನೇತೃತ್ವ ಎಂಬುದನ್ನು ಬಿಜೆಪಿ ಹೈಲೈಟ್ ಮಾಡುತ್ತಿದೆ. ಅಲ್ಲದೇ ವಿಪಕ್ಷ ಕಾಂಗ್ರೆಸ್ ಮಾಡಿರುವ 40% ಆರೋಪಕ್ಕೂ ಸೂಕ್ತ ಉತ್ತರ ನೀಡುವ ಹೊಣೆ ಸಿಎಂ ಮೇಲಿದೆ.

ಬೊಮ್ಮಾಯಿಗೆ ಅಗ್ನಿ ಪರೀಕ್ಷೆ
ಹೌದು. ಯಡಿಯೂರಪ್ಪ ನಂತರ ಸಿಎಂ ಸ್ಥಾನ ಅಲಂಕರಿಸಿರುವುದರಿಂದ ಆ ಜಾಗ ತುಂಬುವುದು ರಾಜಕೀಯವಾಗಿ ಬೊಮ್ಮಾಯಿಗೆ ಅಷ್ಟು ಸುಲಭವಲ್ಲ. ಅದಕ್ಕೊಂದಿಷ್ಟು ಸಮಯವೂ ಬೇಕು. ಆಡಳಿತ ವೈಖರಿ, ಕಾರ್ಯಕರ್ತರ ಜೊತೆ ಸಂಪರ್ಕ, ತೆಗೆದುಕೊಳ್ಳುವ ನಿರ್ಧಾರ, ರಾಜಕೀಯವಾಗಿ ನೀಡುವ ಹೇಳಿಕೆ, ಮಾತನಾಡುವ ಶೈಲಿ ಇವೆಲ್ಲವನ್ನೂ ಸೂಕ್ಷ್ಮವಾಗಿ ಹೋಲಿಸಿರುತ್ತಾರೆ. ಯಡಿಯೂರಪ್ಪನಿಗೆ ಇರುವ ಆ ಮಾಸ್ ಅಪಿಯರೆನ್ಸ್ ಬೊಮ್ಮಾಯಿಗೆ ಬರಬೇಕೆಂದರೆ, ಅವರ ನೇತೃತ್ವದಲ್ಲಿಯೇ ಚುನಾವಣೆ ಗೆಲ್ಲಬೇಕು. ಒಂದು ಪ್ರಬಲ ಸಮುದಾಯಕ್ಕೆ ಸೇರಿದವರು ಎನ್ನುವ ಮಾತ್ರಕ್ಕೆ ಯಾರು ಲೀಡರ್ ಆಗೋಕೆ ಸಾಧ್ಯವಿಲ್ಲ. ಮತ ಭೇಟೆ ದೃಷ್ಟಿಯಿಂದ ಪ್ರಬಲ ಸಮುದಾಯಕ್ಕೆ ಸೇರಿಲ್ಲದ ರಾಮಕೃಷ್ಣ ಹೆಗಡೆ, ಬಂಗಾರಪ್ಪ ಇವರೆಲ್ಲರೂ ಜನನಾಯಕರಾಗಿ ಹೊರಹೊಮ್ಮಿದ ಉದಾಹರಣೆಗಳಿವೆ. ಬಿಜೆಪಿಯ ಮತ ಬ್ಯಾಂಕ್ ಸಮುದಾಯ ಎಂದೇ ಸಾಬೀತಾಗಿರುವ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ, ಬೊಮ್ಮಾಯಿ ಸಿಎಂ ಆಗಿದ್ದಾರೆ. ಸಮುದಾಯದ ದೃಷ್ಟಿಯಿಂದ ಪ್ರಬಲವಾಗಿರಬಹುದು. ಆಡಳಿತ ದೃಷ್ಟಿಯಿಂದಲೂ ಅಷ್ಟೇ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸುವ ಹೊಣೆ ಇವರ ಮೇಲಿದೆ. ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಸಕ್ರಿಯ ರಾಜಕೀಯದಲ್ಲಿನ್ನೂ ಇರುವಾಗ ಬೊಮ್ಮಾಯಿಯವರನ್ನು ಆ ಸ್ಥಾನದಲ್ಲಿ ನೋಡೋದು ಪ್ರಾಕ್ಟಿಕಲಿ ಸದ್ಯಕ್ಕೆ ಅಸಾಧ್ಯ. ಮುಂದಿನ ಚುನಾವಣೆಯನ್ನು ಬೊಮ್ಮಾಯಿ ತಮ್ಮ ನೇತೃತ್ವದಲ್ಲಿ ಗೆದ್ದರೆ ಮಾತ್ರ, ಆಗ ಯಡಿಯೂರಪ್ಪರಿಗೆ ಪರ್ಯಾಯ ನಾಯಕ ಎಂದು ಗುರುತಿಸಿಕೊಳ್ಳಬಹುದೇ ಹೊರತು, ಇಲ್ಲವಾದರೆ ಬಿಜೆಪಿ ಮತ್ತೊಂದು ಹೊಸ ಮುಖ ಹುಡುಕಬೇಕಾಗುತ್ತದೆ.

ಬೊಮ್ಮಯಿ ಪ್ಲಸ್, ಮೈನಸ್
ಬೊಮ್ಮಾಯಿಗೆ ರಾಜಕೀಯ ಅನುಭವಿದೆ. ರಾಜಕೀಯ ‌ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು, ಮಾಜಿ ಸಿಎಂ ಎಸ್ ಅರ್ ಬೊಮ್ಮಾಯಿಯವರ ಮಗನಾಗಿ ಗುರುತಿಸಿಕೊಂಡು, ಎಚ್ ಡಿ ದೇವೆಗೌಡ, ಜೆ.ಎಚ್. ಪಟೇಲ್, ಯಡಿಯೂರಪ್ಪರಂಥ ಘಟಾನುಗಟಿ ನಾಯಕರ ಗರಡಿಯಲ್ಲಿ ಪಳಗಿದ್ದಾರೆ. ಬುದ್ಧಿವಂತ ರಾಜಕಾರಣಿ.  ಆಡಳಿತದಲ್ಲಿ ಜ್ಞಾನ, ಅನುಭವ, ಸಮಯ ಪ್ರಜ್ಞೆ ಎಲ್ಲವೂ ಇದೆ. ಮಾಸ್ ಅಪಿಯರೆನ್ಸ್ ಮಾತ್ರ ಇಲ್ಲ. ಅವರು ಹೇಳಿದ್ದು ಜನರಿಗೆ ರೀಚ್ ಆಗೋಲ್ಲ, ಎಂಬುವುದು ಬಿಜೆಪಿ ನಾಯಕರೂ ಹೇಳುತ್ತಾರೆ. 

ಬೊಮ್ಮಾಯಿಯವರಿಗೆ ಇನ್ನೂ ಅವಕಾಶ ಇದೆ. ಪಕ್ಷದ ನಾಯಕರ ಬೆಂಬಲವೂ ಇದೆ. ಇಂದಿನ ಬಿಜೆಪಿ ಹೈಕಮಾಂಡ್ ದೃಷ್ಟಿಯಲ್ಲಿ ಇಟ್ಟು ಹೇಳುವುದುದಾರೆ, ಸಿಎಂ ಆಗಿ ಬೊಮ್ಮಾಯಿ ಎಷ್ಟು ದಿನ ಆ ರೀತಿಯ ಬೆಂಬಲ ಹೈಕಮಾಂಡ್‌ನಿಂದ ಸಿಕ್ಕಿತು ಎಂದು ಕೇಳಿದರೆ, ಅವರು ನೀಡುವ ನಿಷ್ಪಕ್ಷಪಾತ ಆಡಳಿತ, ಸರ್ಕಾರದ ಕಾರ್ಯ ವೈಖರಿ, ಪಕ್ಷದ ವರ್ಚಸ್ಸು ಕಾರ್ಯಕರ್ತರ ದನಿ ಇವೆಲ್ಲವೂ ಒಬ್ಬ ನಾಯಕನಿಂದ ಎತ್ತರೆತ್ತರಕ್ಕೆ ಹೋಗುತ್ತಿದೆ ಎಂದು ಹೈಕಮಾಂಡ್‌ಗೆ ಎಲ್ಲಿಯ ತನಕ ಅನಿಸುತ್ತದೋ, ಅಲ್ಲಿಯ ತನಿಕ ಬೆಂಬಲವೂ ಹಾಗೆ ಇರುತ್ತದೆ. ಹೀಗಾಗಿ ಬೊಮ್ಮಾಯಿ ನೀಡುವ ಆಡಳಿತವೇ  ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಅವರ ವರ್ಚಸ್ಸು ಹೆಚ್ಚಿಸಿಕೊಳ್ಳುವ ಕೆಲಸವನ್ನು ಸ್ವತಃ ಬೊಮ್ಮಾಯಿಯೇ ಮಾಡಿಕೊಳ್ಳಬೇಕು. ಬಿಟ್ಟರೆ ಹೈಕಮಾಂಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈಗ ಹೊರಟು ನಿಂತಿರುವ ಯಾತ್ರೆ ಬೊಮ್ಮಾಯಿಗೆ ಭೂಮಿಕೆ ಆಗಬಲ್ಲದೇ?

Follow Us:
Download App:
  • android
  • ios