ಇಂದು ಮಗ ಸಿಎಂ, ಅಂದು ಅಪ್ಪನ ಸರ್ಕಾರ ವಜಾ ಮಾಡಲಾಗಿತ್ತು!
* ಬಸವರಾಜ ಬೊಮ್ಮಾಯಿ ನೂತನ ಸಿಎಂ
* ಎಸ್ ಆರ್ ಬೊಮ್ಮಾಯಿ ಸರ್ಕಾರ ಉರುಳಿದ್ದ ಕತೆ
* ಕಾನೂನು ಹೋರಾಟ ನಡೆದಿದ್ದ ಪ್ರಕರಣ
ಬೆಂಗಳೂರು(ಜು. 27) ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಬುಧವಾರ ಪ್ರಮಾಣ ವಚನಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ತಿಂಗಳುಗಳಿಂದ ಸಿಎಂ ರೇಸ್ ನಲ್ಲಿ ಅನೇಕರ ಹೆಸರುಗಳು ಕೇಳಿ ಬರುತ್ತಿದ್ದವು. ಪ್ರಹ್ಲಾದ್ ಜೋಶಿ, ಉದಾಸಿ, ಬೆಲ್ಲದ್, ಸಿಟಿ ರವಿ, ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಹೆಸರುಗಳು ಓಡಾಡುತ್ತಿದ್ದು ಅಂತಿಮವಾಗಿ ಸಿಎಂ ಗಾದಿ ಬೊಮ್ಮಾಯಿ ಪಾಲಾಯಿತು.
ಹಾಗೆ ಒಂದು ಚೂರು ಇತಿಹಾಸವನ್ನು ನೋಡಿಕೊಂಡು ಬರಬೇಕಾಗುತ್ತದೆ. ಎಸ್ ಆರ್ ಬೊಮ್ಮಾಯಿ ಸರ್ಕಾವನ್ನು 32 ವರ್ಷದ ಹಿಂದೆ ವಜಾ ಮಾಡಲಾಗಿತ್ತು. ಇತಿಹಾಸದಲ್ಲಿ ಬೊಮ್ಮಾಯಿ ಪ್ರಕರಣ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ.
ಈಗ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ ಆರ್,ಬೊಮ್ಮಾಯಿ ಅವರು ಆಗಸ್ಟ್ 13, 1988 ಮತ್ತು ಏಪ್ರಿಲ್ 21, 1989 ರ ನಡುವೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಂದಿನ ಜನತಾದಳ ಸರ್ಕಾರವನ್ನು ಏಪ್ರಿಲ್ 21, 1989 ರಂದು ಸಂವಿಧಾನದ 356 ನೇ ವಿಧಿ ಅಡಿಯಲ್ಲಿ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಯಿತು.
ಹಲವಾರು ಪ್ರಮುಖ ನಾಯಕರು ಪಕ್ಷಾಂತರ ಮಾಡಿದ್ದರಿಂದಾಗಿ ಸರ್ಕಾರವು ವಿಶ್ವಾಸಮತವನ್ನು ಕಳೆದುಕೊಂಡಿದೆ ಎನ್ನುವ ನೆಪವೊಡ್ಡಿ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಲಾಯಿತು. ಆಗಿನ ರಾಜ್ಯಪಾಲರಾದ ಪಿ.ವೆಂಕಟಸುಬ್ಬಯ್ಯನವರು ಬೊಮ್ಮಾಯಿ ಸರ್ಕಾರಕ್ಕೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ಅವಕಾಶ ನೀಡಲು ನಿರಾಕರಿಸಿ ನೇರವಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು.
ಉಳಿದವರನ್ನೆಲ್ಲ ಬಿಟ್ಟು ಬೊಮ್ಮಾಯಿ ಆಯ್ಕೆಗೆ ಕಾರಣವಾದ 4 ಪ್ಲಸ್ ಪಾಯಿಂಟ್‌ಗಳು
ಈ ನಿರ್ಧಾರವನ್ನು ಪ್ರಶ್ನಿಸಿದ ಬೊಮ್ಮಾಯಿ ಮೊದಲು ಕರ್ನಾಟಕ ಹೈಕೋರ್ಟ್ ನ ಮೊರೆಹೋದರು, ಆದರೆ ಅವರ ರಿಟ್ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ಇದರಿಂದಾಗಿ ಅವರು ಮುಂದೆ ಸುಪ್ರಿಂಕೋರ್ಟ್ ಗೆ ಮೊರೆಹೋದರು. ಆದರೆ ಈ ಪ್ರಕರಣವು ಬೇಗನೆ ಇತ್ಯರ್ಥವಾಗದೇ ಐದು ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡಿತು. ಕೊನೆಗೆ ಮಾರ್ಚ್ 11,1994 ರಂದು, ಸುಪ್ರೀಂಕೋರ್ಟ್ ಪೀಠವು ಐತಿಹಾಸಿಕ ಆದೇಶವನ್ನು ಹೊರಡಿಸಿ 356 ನೇ ವಿಧಿ ಅಡಿಯಲ್ಲಿ ಕೇಂದ್ರ ಸರ್ಕಾರವು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವಂತಿಲ್ಲ ಎನ್ನುವ ತೀರ್ಪು ನೀಡಿತು. ಆದರೆ ಅಲ್ಲಿಗೆ ರಾಜಕಾರಣದ ವಾತಾವರಣ ಬದಲಾಗಿ ಹೋಗಿತ್ತು. ಬೊಮ್ಮಾಯಿ ಅಧಿಕಾರ ಕಳೆದುಕೊಂಡು ಆಗಿತ್ತು.
ಜ್ಯ ಸರ್ಕಾರವನ್ನು ವಜಾಗೊಳಿಸುವ ರಾಷ್ಟ್ರಪತಿಗಳ ಅಧಿಕಾರವು ಸಂಪೂರ್ಣವಲ್ಲ, ಸಂಸತ್ತಿನ ಉಭಯ ಸದನಗಳಿಂದ ಘೋಷಣೆ ಅಂಗೀಕರಿಸಲ್ಪಟ್ಟ ನಂತರವೇ ರಾಷ್ಟ್ರಪತಿಗಳು ಅಧಿಕಾರವನ್ನು ಚಲಾಯಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಇದೆ ವೇಳೆ ಆರ್ಟಿಕಲ್ 356 ರ ಅಡಿಯಲ್ಲಿ ರಾಷ್ಟ್ರಪತಿ ಘೋಷಣೆ ಸಹಿತ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಈಗ ಅದೆ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಮೂರು ದಶಕಗಳು ಕಳೆದಿವೆ. ಪಕ್ಷ ಬದಲಾಗಿದೆ. ಆಡಳಿತ ಬದಲಾಗಿದೆ. ಅದೆಷ್ಟೋ ರಾಜಕಾರಣದ ನೀರು ಹರಿದು ಹೋಗಿದೆ.