ವಿಜಯಪುರ, (ಮಾ.14): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿ.ಡಿ. ಕೇಸ್‌ಗೆ ಸಂಬಂಧಿಸಿದಂತೆ ಯುವತಿ ಅಜ್ಞಾತ ಸ್ಥಳದಿಂದ 34 ಸೆಕೆಂಡ್​ನ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾಳೆ. ಆದ್ರೆ, ಈ ವಿಡಿಯೋ ಹಾಗೂ ಮೊದಲ ವಾಟ್ಸಪ್ ಕಾಲ್‌ನಲ್ಲಿನ ಮಾತಿನಲ್ಲಿ ವ್ಯತ್ಯಾಸ ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ವಿವಾದದ ಸಂತ್ರಸ್ತ ಯುವತಿ ವಿಡಿಯೋದಲ್ಲಿ ಸಾಕಷ್ಟು ಅನುಮಾನಗಳಿವೆ. ಯುವತಿಯ ಮೊದಲಿನ ಭಾಷೆಗೂ, ನಿನ್ನೆಯ ಭಾಷೆಗೂ ವ್ಯತ್ಯಾಸವಿದೆ ಎಂದಿದ್ದಾರೆ.

ಜಾರಕಿಹೊಳಿ CD ಕೇಸ್: ಸಾರ್ವಜನಿಕವಾಗಿ ಕಾಣಿಸಿಕೊಂಡ ಯುವತಿ

ಯುವತಿ ಮೊದಲಿನ ವಿಡಿಯೋದಲ್ಲಿ ಬೀದರ್ ಭಾಷೆ ಬಳಕೆಯಾಗಿದೆ. ನಿನ್ನೆ (ಶನಿವಾರ) ಬಿಡುಗಡೆಯಾಗಿರೋ ವಿಡಿಯೊದಲ್ಲಿ ಬೆಂಗಳೂರು ಭಾಷೆ ಇದೆ. ಅದನ್ನ ಕಾಂಗ್ರೆಸ್ ಉನ್ನತ ನಾಯಕರು ಹೇಳಿಸಿದ್ದಾರೋ? ಬಿಜೆಪಿ ಉನ್ನತ ನಾಯಕರು ಹೇಳಿಸಿದ್ದಾರೋ ಗೊತ್ತಿಲ್ಲ. ಹೀಗಾಗಿ, ಅದರ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು, ಅಂದಾಗ ಸತ್ಯ ಹೊರಬರಲಿದೆ ಎಂದು ಅಭಿಪ್ರಾಯಪಟ್ಟರು.

ಅಜ್ಞಾತ ಸ್ಥಳದಿಂದ 34 ಸೆಕೆಂಡ್​ನ ವಿಡಿಯೋ ಮಾಡಿ ಹರಿ ಬಿಟ್ಟಿರುವ ಯುವತಿ, 'ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ನನ್ನ ಮನೆ ಹತ್ತಿರ ಬಂದು ಯಾರೋರೊ ಏನೇನೋ ಹೇಳಿದ್ದಾರೆ. ನನ್ನ ತಂದೆ ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು' ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಳು.