ಮುಂದಿನ ಮುಖ್ಯಮಂತ್ರಿ ಯತ್ನಾಳ್: ಭವಿಷ್ಯ ನುಡಿದ ಕಾಂಗ್ರೆಸ್ ನಾಯಕ
* ಮುಂದಿನ ಮುಖ್ಯಮಂತ್ರಿ ಯತ್ನಾಳ್ ಎಂದು ಭವಿಷ್ಯ ನುಡಿದ ಕಾಂಗ್ರೆಸ್ ನಾಯಕ
* ಹಾವೇರಿ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಹೇಳಿಕೆ
* ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಭವಿಷ್ಯ
ಹಾವೇರಿ, (ಸೆ.04):ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.
ಇದರ ಮಧ್ಯೆ ಮುಂದಿನ ಮುಖ್ಯಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಭವಿಷ್ಯ ನುಡಿದಿದ್ದಾರೆ.
ಮತ್ತೊಮ್ಮೆ ಕ್ರಾಂತಿ ಎಚ್ಚರಿಕೆ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಇಂದು (ಸೆ.04) ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಭವಿಷ್ಯ ನುಡಿಯುತ್ತೇನೆ ಮುಂದಿನ ಮುಖ್ಯಮಂತ್ರಿ ನಮ್ಮ ಬಸನಗೌಡ ಪಾಟೀಲ್ ಯತ್ನಾಳ್. ಆ ಶಕ್ತಿ ಸಾಮರ್ಥ್ಯ ಅವರಲ್ಲಿದೆ ಎಂದರು.
ಶಾಸಕ ಯತ್ನಾಳ್ ಮಂತ್ರಿ ಆಗ್ತಾರೆ, ಮುಖ್ಯಮಂತ್ರಿ ಆಗ್ತಾರೆ ಎಂದು ಅನೇಕರು ಹೊಟ್ಟೆಕಿಚ್ಚು ಪಟ್ಟರು. ನಾವು ಮನಸ್ಸು ಮಾಡಿದ್ದರೆ ಯತ್ನಾಳ್ ಮುಖ್ಯಮಂತ್ರಿ ಆಗಬಹುದಿತ್ತು. ನಮ್ಮ ಸಮಾಜಕ್ಕೆ ಮೊದಲು ಮೀಸಲಾತಿ ಕೊಡಿ, ಆಮೇಲೆ ಮಂತ್ರಿ, ಮುಖ್ಯಮಂತ್ರಿ ಎಂದು ಯತ್ನಾಳ್ ಹೇಳಿದ್ದಾರೆ ಅಂತ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಹಾನಗಲ್ ನಲ್ಲಿ ಮುಂದಿನ ಶಾಸಕರು ಯಾರು ಅಂದ್ರೆ ಅದು ಪಂಚಮಸಾಲಿ ಸಮಾಜದವರು ಆಗಿರಬೇಕು. ನೀವು ಮನಸ್ಸು ಮಾಡಿದ್ರೆ ಇಲ್ಲಿಂದ ನಮ್ಮವರು ಒಬ್ಬರು ಶಾಸಕರು ಆಗ್ತಾರೆ ಎಂದರು.
ನಮ್ಮ ಜೀವ ಹೋದರೂ ಪರವಾಗಿಲ್ಲ, ಸಮಾಜಕ್ಕೆ ಮೀಸಲಾತಿ ಸಿಗಬೇಕು. ಕೆಲವರು ಇದ್ದಾರೆ. ಅವರು ಮಂತ್ರಿ, ಮುಖ್ಯಮಂತ್ರಿ ಆಗಬೇಕಂತೆ. ಅದಕ್ಕಾಗಿ ಮೂರನೇ ಒಕ್ಕೂಟ ಮಾಡುವುದಕ್ಕೆ ಹೊರಟಿದ್ದಾರೆ. ಸಿದ್ದಲಿಂಗ ಸ್ವಾಮಿಗಳು ಸೇರಿದಂತೆ ಕೆಲವು ಸ್ವಾಮೀಜಿಗಳೆ ನೀವು ದಯವಿಟ್ಟು ಸಮಾಜ ಒಡೆಯೋ ಕೆಲಸ ಮಾಡಬೇಡಿ. ಸಮಾಜ ಒಗ್ಗಟ್ಟಾಗಿದೆ, ಸಮಾಜಕ್ಕೆ ಮೀಸಲಾತಿ ಬೇಕಾಗಿದೆ. ಅದು ಹೇಗೆ ನೀವು ಮತ್ತೊಂದು ಪೀಠ ಮಾಡುತ್ತೀರಿ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದರು.