ಸಿದ್ದರಾಮಯ್ಯರದ್ದು ಸಂಸ್ಕಾರವಿಲ್ಲದ ನಾಲಿಗೆ: ಶಾಂತಗೌಡ
ಕಳ್ಳರನ್ನು ನೋಡಿದಾಗ ನಾಯಿ ಸಹಜವಾಗಿ ಬೊಗಳುತ್ತದೆ. ಸಿದ್ದರಾಮಯ್ಯ ಅವರಂಥ ಭ್ರಷ್ಟರು, ರಾಷ್ಟ್ರದ್ರೋಹಿಗಳಿಗೆ ಬಿಜೆಪಿಯ ಆತಂಕ, ಭಯ ಕಾಡುತ್ತಲೇ ಇರುತ್ತದೆ. ಅವರ ಮಾತು, ಗುಣ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದೆ: ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ
ಬಾಗಲಕೋಟೆ(ಜ.08): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಬಿಜೆಪಿ ಜಿಲ್ಲಾ ಘಟಕ ತೀರ್ವವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ನಾಗರಿಕತೆ ಮರೆತಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಎಂದು ಕರೆದಿದ್ದಾರೆ. ನಮಗೆ ನಾಯಿ ಪದದ ಬಗ್ಗೆ ಗೌರವ ಇದೆ. ಅತ್ಯಂತ ಪ್ರಾಮಾಣಿಕ, ನಂಬಿಗಸ್ಥ ಜೀವಿಯಾಗಿ ಬದುಕುವ ಜೀವಿ ನಾಯಿ. ಬಿಜೆಪಿಗೆ ಅದು ಅನ್ವರ್ಥ. ಬಿಜೆಪಿ ಕೂಡ ಯಾವತ್ತೂ ದೇಶನಿಷ್ಠೆ, ಸಮಾಜನಿಷ್ಠೆ ಉಳ್ಳದ್ದಾಗಿದ್ದು, ನಾವು ಒಂದು ರೀತಿಯ ಸಮಾಜದ ನಾಯಿಗಳಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಾಮಾನ್ಯ ಕಾರ‍್ಯಕರ್ತನ ನಿಲ್ಸಿ ಗೆಲ್ಲಿಸುತ್ತೇವೆ: ಕೆ.ಎಸ್.ಈಶ್ವರಪ್ಪ
ಕಳ್ಳರನ್ನು ನೋಡಿದಾಗ ನಾಯಿ ಸಹಜವಾಗಿ ಬೊಗಳುತ್ತದೆ. ಸಿದ್ದರಾಮಯ್ಯ ಅವರಂಥ ಭ್ರಷ್ಟರು, ರಾಷ್ಟ್ರದ್ರೋಹಿಗಳಿಗೆ ಬಿಜೆಪಿಯ ಆತಂಕ, ಭಯ ಕಾಡುತ್ತಲೇ ಇರುತ್ತದೆ. ಅವರ ಮಾತು, ಗುಣ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದೆ. ಸುಳ್ಳು, ಕುಟಿಲತನ, ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕುವುದು ಸಿದ್ದರಾಮಯ್ಯ ಅವರ ಗುಣಗಳು. ಇವತ್ತು ಅವರು ಅವರನ್ನು ಬೆಂಬಲಿಸಿದ ರಾಜ್ಯದ ಜನತೆಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಅವರದ್ದು ಸಂಸ್ಕಾರ ಇಲ್ಲದ ನಾಲಿಗೆ ಮತ್ತು ವ್ಯಕ್ತಿತ್ವ. ಅವರ ಗುಣಧರ್ಮದಲ್ಲಿ ಅದು ಹಾಸುಹೊಕ್ಕಾಗಿದೆ. ಹಿಂದೂ ಧರ್ಮವನ್ನು ಒಡೆದು ಲಿಂಗಾಯತ ಮತ್ತು ವೀರಶೈವ ಎಂದು ವಿಭಜಿಸುವ ಕುಟಿಲ ನೀತಿ ಮಾಡಹೊರಟಿದ್ದರು. ಈ ಹಿಂದೆ ನರೇಂದ್ರ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದರು. ಅವರು ಸಂಸ್ಕಾರಹೀನ ಮನುಷ್ಯ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ತಿಳಿಸಿದರು.
ಅಸೆಂಬ್ಲಿ ಚುನಾವಣೆ ಮುನ್ನ ಸಿದ್ದರಾಮಯ್ಯ ಜೈಲಿಗೆ: ನಳಿನ್ ಕುಮಾರ್ ಕಟೀಲ್
ರಾಹುಲ್ ಗಾಂಧಿ ನಿರ್ದೇಶನದ ರೀತಿಯಲ್ಲಿ ಅಪ್ಪುಗೆ ರಾಜಕಾರಣ ಮಾಡುವ ಹಂತದ ನಿಕೃಷ್ಟರಾಜಕಾರಣಿ ಸಿದ್ದರಾಮಯ್ಯ. ಹಿಂದೆ ತುರ್ತು ಪರಿಸ್ಥಿತಿ ವಿರುದ್ಧ ಮಾತನಾಡಿದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸೇರಿದ ನಂತರ ಆ ಕುರಿತಂತೆ ಯಾವುದೇ ಮಾತಾಡುತ್ತಿಲ್ಲ. ಅಂದರೆ ಅವರ ಸಮಯಸಾಧಕತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಎಂದರು.
ಸಿಎಂ ರೇಸಿನಲ್ಲಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕರ ನಡುವಿನ ಸ್ಪರ್ಧೆ, ಕಾಲೆಳೆಯುವ ಪ್ರವೃತ್ತಿಯಿಂದ ಕಾಂಗ್ರೆಸ್ ರಾಜ್ಯದಲ್ಲಿ ನೆಲಕಚ್ಚಲಿದೆ. ಬಿಜೆಪಿ ಚುನಾವಣೆಗೆ ಸಿದ್ಧಗೊಂಡಿದ್ದು ಮತ್ತು ಜನಾಭಿಪ್ರಾಯ ಬಿಜೆಪಿ ಪರ ಇರುವುದನ್ನು ನೋಡಿ ಇವರ ಆತಂಕ ಹೆಚ್ಚಾಗಿದೆ. ಜನಮತ ಬಿಜೆಪಿ ಪರ ಇರುವುದನ್ನು ತಿಳಿದ ಸಿದ್ದರಾಮಯ್ಯ ಸ್ಥಿಮಿತ ಕಳಕೊಂಡಂತೆ ವರ್ತಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ರಾಜು ನಾಯ್ಕರ ಉಪಸ್ಥಿತರಿದ್ದರು