ಸಿದ್ದರಾಮಯ್ಯ ವಿರುದ್ಧ ಸಾಮಾನ್ಯ ಕಾರ‍್ಯಕರ್ತನ ನಿಲ್ಸಿ ಗೆಲ್ಲಿಸುತ್ತೇವೆ: ಕೆ.ಎಸ್.ಈಶ್ವರಪ್ಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಜ.03): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅಲೆಮಾರಿಯಂತೆ ಕ್ಷೇತ್ರಗಳನ್ನು ಹುಡುಕುತ್ತಾ ಹೋಗುತ್ತಿದ್ದಾರೆ. ಇವತ್ತಿಗೂ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ಮುಂದೆ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ದಿನ ಬರಬಹುದು.
ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದೇ ಗೊತ್ತಿಲ್ಲದ ವ್ಯಕ್ತಿ ರಾಜ್ಯ ಆಳುತ್ತಾರಾ? ಎಂದು ಕುಟುಕಿದರು. ನಂದಿನಿ ಸಂಸ್ಥೆಯನ್ನು ಅಮುಲ್ ಸಂಸ್ಥೆಯ ಜೊತೆ ಸೇರ್ಪಡೆ ಮಾಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಇದನ್ನೇ ಹೇಳಿದ್ದಾರೆ. ಟೀಕಿಸುವುದಕ್ಕಾಗಿ ಏನೇನೋ ಹೇಳಬಾರದು. ಡಿ.ಕೆ.ಶಿವಕುಮಾರ್‌ಗೆ ಏನು ಮಾತನಾಡಬೇಕೆಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ ಎಂದು ಹೇಳುತ್ತಾರೆ. ಇವರ ನಿರ್ಣಯವೇ ಮುಖ್ಯ ಅಲ್ಲ ಎಂದರು.
ಬಸವಪ್ರಭು ಶ್ರೀಗಳೇ ಸಿದ್ದರಾಮಯ್ಯರನ್ನು ಸಿಎಂ ಮಾಡಲಿ: ಕೆ.ಎಸ್.ಈಶ್ವರಪ್ಪ
ಬಿಜೆಪಿಗೆ ಸಂಘಟನೆ, ಕಾರ್ಯಕರ್ತರೇ ಬಲ: ಬಿಜೆಪಿ ಪಕ್ಷಕ್ಕೆ ಹಿಂದೆಲ್ಲ ಬೆರಳೆಣಿಕೆ ಕ್ಷೇತ್ರಗಳಲ್ಲಿ ಜಯ ಸಿಗುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ, ರಾಜ್ಯದ 224 ಕ್ಷೇತ್ರದಲ್ಲೂ ಪಕ್ಷದ ಸಂಘಟನೆ ಬಲಿಷ್ಠವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಮಲ್ಲೇಶ್ವರ ನಗರದಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬೂತ್‌ವಿಜಯ್ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ಹಿಂದೆ ಜನಸಂಘ ನಂತರ ಬಿಜೆಪಿ ಪ್ರಾರಂಭಿಸಿದಾಗ ಅಭ್ಯರ್ಥಿಗಳೆ ಸಿಗುತ್ತಿರಲಿಲ್ಲ. ನಾನು 1994ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ರಾಜ್ಯದ 220 ಸ್ಥಾನಗಳಲ್ಲಿ ಕೇವಲ 116 ಜನ ನಿಲ್ಲಿಸಿದ್ದೆವು.
ಆಗ ಬಿಜೆಪಿಗೆ 40ಸೀಟ್ ಬಂತು. ಸಂಘಟನೆ ಗಟ್ಟಿಇದ್ದ ಕಡೆ ಬಿಜೆಪಿಗೆ ಗೆಲುವಾಯಿತು. ಇವತ್ತು ರಾಜ್ಯದ 224 ಕ್ಷೇತ್ರಗಳಲ್ಲೂ ಕೂಡ ಸ್ಪರ್ಧೆಗೆ ಪೈಪೋಟಿಯಿದೆ. ಅಷ್ಟರ ಮಟ್ಟಿಗೆ ಬಿಜೆಪಿ ರಾಜ್ಯದ ಮತ್ತು ದೇಶದ ಎಲ್ಲಾ ಕಡೆ ಬೆಳೆದಿದೆ. ಇದಕ್ಕೆ ಕಾರಣ ಬೂತ್ ಸಮಿತಿ, ಕಾರ್ಯಕರ್ತರು ಮತ್ತು ಪೇಜ್ ಪ್ರಮುಖರು ಎಂದರು. ಇದುವರೆಗಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಬೂತ್‌ನಲ್ಲಿ ವಿಜಯಗಳಿಸಿ ಸಂಪೂರ್ಣ ಬಹುಮತ ಪಡೆಯುವುದಕ್ಕಾಗಿ ಬೂತ್ ವಿಜಯ್ ಅಭಿಯಾನ ಕೈಗೊಂಡಿದ್ದೇವೆ. ಪಕ್ಷದ ವಿಚಾರಧಾರೆ ಮತ್ತು ಸಿದ್ಧಾಂತ, ಅಭಿವೃದ್ಧಿ ಮತ್ತು ನಾಯಕತ್ವ ಈ ಮೂರು ವಿಚಾರಗಳ ಬಗ್ಗೆ ಪಕ್ಷ ಗಮನಹರಿಸಿದೆ.
ವಿಪಕ್ಷಗಳ ಒಪ್ಪಿಗೆ ಮೇರೆಗೆ ಬೆಳಗಾವಿ ಅಧಿವೇಶನ ಮೊಟಕು: ಕೆ.ಎಸ್.ಈಶ್ವರಪ್ಪ
ಕಾಶ್ಮೀರ, ಕಾಶಿ, ಅಯೋಧ್ಯೆ, ಮಥುರಾ ಬಗ್ಗೆ ಪಕ್ಷ ಕೆಲಸ ಮಾಡಿದೆ. ಭಯೋತ್ಪಾದನೆ ನಿರ್ಮೂಲನಕ್ಕೆ ಪಣ ತೊಟ್ಟಿದೆ. ಭಾರತೀಯ ಸಂಸ್ಕೃತಿ ಜಾರಿಗೆ ತರಲು ಶ್ರಮಿಸುತ್ತಿದೆ. ‘ಅಲೆಗ್ಸಾಂಡರ್ ದಿ ಗ್ರೇಟ್’ ಎಂಬ ಪಠ್ಯವನ್ನು ತೆಗೆದು ರಾಮ,ಕೃಷ್ಣ,ಬುದ್ಧ, ಬಸವ ಮತ್ತು ನಮ್ಮ ದೇಶದ ಮಹಾನ್ ನಾಯಕರ ಜೀವನ ಸಂಸ್ಕೃತಿಯನ್ನು ಶಿಕ್ಷಣದಲ್ಲಿ ತಂದಿದ್ದೇವೆ. ವಿಶ್ವದ ಶ್ರೇಷ್ಟನಾಯಕನಾಗಿ ನರೇಂದ್ರ ಮೋದಿ ದೇಶವನ್ನು ಕೊಂಡೊಯ್ದಿದ್ದಾರೆ ಎಂದು ತಿಳಿಸಿದ ಅವರು, ಮತದಾರರ ಮನವೊಲಿಸಿ ಅವರ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುತ್ತಿದ್ದೇವೆ. ಬೂತ್ ವಿಜಯ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಎಲ್ಲಡೆ ಸಿಗುತ್ತಿದ್ದು, ಸಂಪೂರ್ಣ ಬಹುಮತ ಪಡೆಯುವುದೇ ಈ ಅಭಿಯಾನದ ಉದ್ದೇಶ ಎಂದು ಹೇಳಿದರು.