Irrigation Politics: ಎಂ.ಬಿ. ಪಾಟೀಲ್ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
* ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏನೂ ಕೆಲಸ ಮಾಡದಿ ಪಾಟೀಲ್
* ಆಲಗೂರ, ಕಾಶಪ್ಪನವರಗೆ ನೈತಿಕತೆ ಇಲ್ಲ
* ಹನಿ ನೀರಾವರಿ ಯೋಜನೆ ತನಿಖೆಯಾಗಲಿ
ಬಾಗಲಕೋಟೆ(ಜ.15): ಜಿಲ್ಲೆಯ ನೀರಾವರಿ ಕ್ಷೇತ್ರವನ್ನು ವಿಸ್ತರಿಸುವ ಹಾಗೂ ಪ್ರಮುಖ ಯೋಜನೆಗೆ ಚಾಲನೆ ನೀಡಲು ಮುಂದಾಗಿರುವ ಸಚಿವ ಗೋವಿಂದ ಕಾರಜೋಳ(Govind Karjol) ಅವರ ವಿರುದ್ಧ ಮಾತನಾಡುವ ಮೊದಲು ಕಾಂಗ್ರೆಸ್ ನಾಯಕರು(Congress Leaders) ಹಾಗೂ ಮಾಜಿ ಜಲಸಂಪನ್ಮೂಲ ಸಚಿವರಾದ ಎಂ.ಬಿ.ಪಾಟೀಲರು(MB Patil) ವಾಸ್ತವಿಕ ಸ್ಥಿತಿ ಅರಿತು ಮಾತನಾಡಲಿ ಎಂದು ಬಿಜೆಪಿ ಮುಖಂಡರು(BJP Leaders) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜ ಯಡಹಳ್ಳಿ, ಪದಾಧಿಕಾರಿಗಳಾದ ರಾಜು ನಾಯ್ಕರ, ನಾಗಪ್ಪ ಅಂಬಿ, ಸತ್ಯನಾರಾಯಣ ಹೇಮಾದ್ರಿ, ರವಿ ನಂದಗಾಂವ, ಹಣಮಂತ ತುಳಸಿಗೇರಿ, ನರೇಂದ್ರ ಕುಪ್ಪಸ್ತ ಅವರು ಜಿಲ್ಲೆಗೆ ಸಚಿವ ಕಾರಜೋಳ ಅವರ ನೀರಾವರಿ ಕ್ಷೇತ್ರದ ಕೊಡುಗೆಯನ್ನು ವಿವರಿಸಿದರು.
Mekedatu Politics: ಕಾರಜೋಳ ಸುಳ್ಳು ಮಾಹಿತಿ ತೋರಿಸಿ ದಾರಿ ತಪ್ಪಿಸುತ್ತಿದ್ದಾರೆ: ಎಂಬಿಪಾ
ಬಾಗಲಕೋಟೆ(Bagalkot) ಜಿಲ್ಲೆಯ ಸಸಾಲಟ್ಟಿ ಏತ ನೀರಾವರಿ ಹಾಗೂ ಮುಧೋಳ ತಾಲೂಕಿನ ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗಾಗಿ ಹಲವಾರು ವರ್ಷಗಳಿಂದ ಅಲ್ಲಿನ ರೈತರು(Farmers) ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಆದರೂ ಅದರ ಫಲವಾಗಿ ಬೆಳಗಾವಿಯಲ್ಲಿ(Belagavi) ನಡೆದ ಸಚಿವ ಸಂಪುಟದಲ್ಲಿ ಎರಡು ಯೋಜನೆಗಳು ಅನುಮೋದನೆಗೊಂಡು ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ 266 ಕೋಟಿ ವೆಚ್ಚದಲ್ಲಿ 22918.57 ಹೆಕ್ಟೇರ್ ಜಮೀನಿಗೆ ನೀರಾವರಿ(Irrigation) ಸೌಲಭ್ಯ ಬಳಕೆಯಾಗುವ ನೀರಿನ ಪ್ರಮಾಣ 4.03 ಟಿಎಂಸಿ ನೀರನ್ನು ಹಾಗೂ ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ 228 ಕೋಟಿ ವೆಚ್ಚದಲ್ಲಿ 12007.14 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಬಳಕೆಯಾಗುವ ನೀರಿನ ಪ್ರಮಾಣ 2.06 ಟಿಎಂಸಿ ಹೀಗೆ ಎರಡು ಯೋಜನೆ ಸೇರಿ ಒಟ್ಟು .494 ಕೋಟಿ ವೆಚ್ಚದಲ್ಲಿ ಸುಮಾರು 1 ಲಕ್ಷ ಎಕರೆ ನೀರಾವರಿ ಸೌಲಭ್ಯ ಒದಗಿಸಿಕೊಡಲಿರುವ ಬೃಹತ್ ಯೋಜನೆಗೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು(Upper Bhadra Project) ರಾಷ್ಟ್ರೀಯ ಯೋಜನೆಯೆಂದು ಘೋಷಿಸಲಾಗಿದೆ. ಕೃಷ್ಣಾ ಮೇಲ್ದಂಡೆಯ ಯೋಜನೆಯ ಆಲಮಟ್ಟಿ ಅಣೆಕಟ್ಟೆಯನ್ನು(Almatti Dam) 524 ಮೀಟರ್ ಎತ್ತರಿಸುವ ಕೆಲಸವನ್ನು ಪೂರ್ಣಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಜೊತೆಗೂಡಿ ತುರ್ತಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಇಡೀ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಹಗಲು ರಾತ್ರಿ ಎನ್ನದೆ ಸ್ಪಂದಿಸುತ್ತಿರುವುದು ರಾಜ್ಯದ ಜನರಿಗೆ ಹಾಗೂ ರೈತರಿಗೆ ಖುಷಿ ತಂದಿರುವ ವಿಷಯ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ(Congress Government) ಅವಧಿಯಲ್ಲಿ ಏನೂ ಕೆಲಸ ಮಾಡದಿರುವ ಎಂ.ಬಿ.ಪಾಟೀಲರು ಮೆಚ್ಚುಗೆ ಪಡುವುದನ್ನು ಬಿಟ್ಟು ಮೇಕೆದಾಟು ವಿಷಯವನ್ನು ತೆಗೆದುಕೊಂಡು ಬರೀ ರಾಜಕಾರಣವನ್ನು ಮಾಡಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯಾದ್ಯಂತ(Karnataka) ಅಭಿವೃದ್ಧಿ ಕೆಲಸ ಮಾಡುತ್ತಿರುವ ಕಾರಜೋಳರನ್ನು ಕಂಡರೆ ಭೂತದ ಬಾಯಲ್ಲಿ ಬೆಂಕಿ ಕಂಡಂತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಹಿಂದಿನ ಜಲಸಂಪನ್ಮೂಲ ಸಚಿವರಾದ ಎಂ.ಬಿ.ಪಾಟೀಲರು 4 ವರ್ಷ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಈ ಭಾಗದ ಅಂದರೆ ಉತ್ತರ ಕರ್ನಾಟಕ(North Karnataka) ಭಾಗದ ರೈತರಿಗೆ ಏನೂ ನೀರಾವರಿ ಸೌಲಭ್ಯ ಒದಗಿಸಲಾರದೇ ಹತಾಶರಾಗಿದ್ದಾರೆ. ರಾಜಕಾರಣದಲ್ಲಿ ಟೀಕೆ, ಟಿಪ್ಪಣೆ ಸಹಜವಾದರೂ ದೊಡ್ಡವರಾಗಬೇಕೆಂದು ಹಗಲು ಕನಸು ಕಾಣುವುದನ್ನು ಮೊದಲು ಎಂ.ಬಿ.ಪಾಟೀಲ ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಎಚ್ಚರಿಸಿದರು.
ಆಲಗೂರ, ಕಾಶಪ್ಪನವರಗೆ ನೈತಿಕತೆ ಇಲ್ಲ
ಮುತ್ಸದ್ಧಿ ರಾಜಕಾಣಿಯಾಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಕುರಿತು ಉದ್ಧಟತನ ಹಾಗೂ ಬೇಜವಾಬ್ದಾರಿ ರೀತಿಯಿಂದ ಮಾತನಾಡಿರುವ ಮಾಜಿ ಶಾಸಕರಾದ ರಾಜು ಆಲಗೂರ(Raju Alagur) ಹಾಗೂ ವಿಜಯಾನಂದ ಕಾಶಪ್ಪನವರ(Vijayanand Kashappanavar) ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ರಾಜ್ಯ ಮಾದಿಗ ಮಹಾಸಭಾದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಬಿಜೆಪಿ ಎಸ್‌ಸಿ ಮೋರ್ಚಾದ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ಸರಳ ಹಾಗೂ ಸಜ್ಜನ ರಾಜಕಾರಣಿಯಾಗಿರುವ ಶೋಷಿತ ವರ್ಗದ ಗೋವಿಂದ ಕಾರಜೋಳ ವಿರುದ್ಧ ಮಾತನಾಡುವ ಮೂಲಕ ರಾಜಕೀಯವಾಗಿ ಬೆಳೆಯಲು ಹೊರಟಿರುವ ಈ ಉಭಯ ನಾಯಕರು ವಾಸ್ತವ ಸ್ಥಿತಿ ಅರಿತು ಮಾತನಾಡಿದರೆ ಒಳ್ಳೆಯದು ಎಂದಿದ್ದಾರೆ. ಪರಿಶಿಷ್ಟಜಾತಿ, ಪಂಗಡಗಳಲ್ಲಿನ ಎಲ್ಲ ಶೋಷಿತ ವರ್ಗಗಳನ್ನು ಗುತ್ತಿಗೆ ಪಡೆದವರಂತೆ ಮಾತನಾಡುವ ಮಾಜಿ ಶಾಸಕ ರಾಜು ಆಲಗೂರ ಅವರು ಕಾರಜೋಳ ಅವರ ಕುಟುಂಬದ ಸದಸ್ಯರ ಬಗ್ಗೆ ಮಾತನಾಡುವ ಮುನ್ನ ತಮ್ಮ ಕುಟುಂಬದ ನೈತಿಕತೆಯನ್ನು ಸಹ ಗಮನಿಸಿದ್ದರೆ ಸಾಕಿತ್ತು ಎಂದರು.
ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರನ್ನು ಓಲೈಸಲು ಹಾಗೂ ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ದಲಿತರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ಮರೆತು ಓಲೈಕೆ ರಾಜಕಾರಣ ಮಾಡುವ ರಾಜು ಆಲಗೂರ ಮೊದಲು ಈ ಹಿಂದೆ ಅಹಿಂದ ಮತ್ತು ಡಿಎಸ್‌ಎಸ್ ಸಂಘಟನೆಯನ್ನು ತಮ್ಮ ಅಧಿಕಾರಕ್ಕಾಗಿ ದುರ್ಬಳಕೆ ಮಾಡಿಕೊಂಡವರು ಯಾರು ಎಂಬುದನ್ನು ಅರಿತುಕೊಳ್ಳಲಿ. ನಂತರ ಶರಣ ಸಂಸ್ಕೃತಿಯ ಹಿನ್ನೆಲೆಯುಳ್ಳ ಸಚಿವ ಕಾರಜೋಳರ ಬಗ್ಗೆ ಮಾತನಾಡಲು ಯೋಚಿಸಲಿ ಎಂದಿದ್ದಾರೆ.
ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಮೇಲೆ ಹಿಡಿತ ಇರಲಿ: ಪಾಟೀಲ್ ವಿರುದ್ಧ ಕಾರಜೋಳ ಗರಂ
ಹನಿ ನೀರಾವರಿ ಯೋಜನೆ ತನಿಖೆಯಾಗಲಿ:
ವಿಜಯಾನಂದ ಕಾಶಪ್ಪನವರ ಹಾಗೂ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವಧಿಯಲ್ಲಿ ಹುನಗುಂದ ತಾಲೂಕಿನಲ್ಲಿ ನಡೆದ ಹನಿ ನೀರಾವರಿ ಯೋಜನೆಯ ಅವ್ಯವಹಾರದ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ ದಲಿತ ಮುಖಂಡರು, ಅದರಲ್ಲೂ ಸಿಬಿಐನಂತಹ(CBI) ಉನ್ನತ ಮಟ್ಟದ ತನಿಖೆಯಾಗಲಿ ಎಂದೂ ಆಗ್ರಹಿಸಿದರು.
ಕಾರಜೋಳರ ವಿರುದ್ಧ ಮಾತನಾಡುವ ಯಾವ ನೈತಿಕತೆ ವಿಜಯಾನಂದ ಕಾಶಪ್ಪನವರ ಬಳಿ ಇದೆ ಎಂದು ಪ್ರಶ್ನಿಸಿದ ಅವರು, ಕಳಪೆ ಕಾಮಗಾರಿಯಿಂದ ನೂರಾರು ಕೋಟಿ ಅವ್ಯವಹಾರವಾಗಿದ್ದು ಮೊದಲು ಆ ತನಿಖೆ ನಡೆಯಲಿ ಎಂದು ಕಾಶಪ್ಪನವರ ಅವರು ಆಗ್ರಹಿಸಲಿ ಎಂದು ಒತ್ತಾಯಿಸಿದರಲ್ಲದೆ ಆರೋಪ ಮಾಡುವ ಸಂದರ್ಭದಲ್ಲಿ ಸತ್ಯಾಸತ್ಯತೆ ತಿಳಿದು ಮಾತನಾಡಲಿ ಎಂದಿದ್ದಾರೆ. ದೊಡ್ಡ ಜನಾಂಗದಲ್ಲಿರುವ ನಿಮ್ಮನ್ನು ನಾವು ಗೌರವಿಸುತ್ತೇವೆ. ಆದರೆ ಊಳಿಗಮಾನ್ಯ ರೀತಿಯಲ್ಲಿ ನಡೆಸಿಕೊಳ್ಳುವ ಪ್ರಯತ್ನವನ್ನು ಕಾಶಪ್ಪನವರ ಬಿಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಸತೀಶ ಸೂಳಿಕೇರಿ, ಆನಂದ ಕಳ್ಳಿಮನಿ, ಮಹೇಶ ಮಾದರ, ಸದಾಶಿವ ಸಣ್ಣಕ್ಕಿ, ಕನಕಪ್ಪ ಪೂಜಾರಿ ಇದ್ದರು.