2023ಕ್ಕೆ ಬಿಜೆಪಿ ಪ್ರಚಂಡ ಜಯಭೇರಿ: ಬಾಬುರಾವ್‌ ಚಿಂಚನಸೂರ್‌ 

ಬೆಂಗಳೂರು(ಆ.06): ವಿಧಾನಪರಿಷತ್‌ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಚಿಂಚನಸೂರ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ವಿರೋಧವಾಗಿ ಆಯ್ಕೆಯಾಗಿದ್ದು, ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನ ಪರಿಷತ್‌ನ ಸಭಾಪತಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಅವರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಧಾನ ಪರಿಷತ್‌ ಕಾರ್ಯದರ್ಶಿ ವಿಶಾಲಾಕ್ಷಿ, ಬಿಜೆಪಿ ಮುಖಂಡರು, ಚಿಂಚನಸೂರ್‌ ಬೆಂಬಲಿಗರು ಈ ಸಂದರ್ಭದಲ್ಲಿ ಹಾಜರಿದ್ದರು. ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚಿಂಚನಸೂರ್‌ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದೆ ಇದ್ದುದರಿಂದ ಅವಿರೋಧ ಆಯ್ಕೆ ಸಾಧ್ಯವಾಯಿತು.

ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ ಬಿಜೆಪಿ ಪಾಲು, ಚಿಂಚನಸೂರ್ ಅವಿರೋಧ ಆಯ್ಕೆ

ಬಿಜೆಪಿ ಪ್ರಚಂಡ ಜಯಭೇರಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಂಚನಸೂರ್‌, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.40 ರಷ್ಟುಕೋಲಿ ಸಮಾಜದವರಿದ್ದು ಪ್ರಾತಿನಿಧ್ಯ ನೀಡಲು ನನ್ನನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಇದರಿಂದ ಈ ಭಾಗದಲ್ಲಿ ಬಿಜೆಪಿಗೆ ಪ್ರಬಲ ಶಕ್ತಿ ಬಂದಿದ್ದು, 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಎಐಸಿಸಿ ಕಾರ್ಯದರ್ಶಿ ಆಗಿದ್ದೆ. ನಾನು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಕೋಲಿ ಸಮುದಾಯದ ಹಲವು ಮುಖಂಡರೂ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್‌ನ ಹಲವು ಸ್ನೇಹಿತರೂ ಬಿಜೆಪಿಗೆ ಬರಲು ತಯಾರಾಗಿದ್ದಾರೆ. ನನ್ನ ಶಕ್ತಿಯನ್ನು ಗುರುತಿಸಿ ಬಿಜೆಪಿ ಸ್ಥಾನ ನೀಡಿದೆ. ನನಗೆ ತೆರೆದ ಇತಿಹಾಸವಿದ್ದು ಹೈದರಾಬಾದ್‌ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಪ್ರಬಲ ಶಕ್ತಿ ಬಂದಿದೆ ಎಂದು ಬಣ್ಣಿಸಿದರು.

ಸಿ.ಎಂ.ಇಬ್ರಾಹಿಂ ಸ್ಥಾನಕ್ಕೆ ಬೈ ಎಲೆಕ್ಷನ್, ಹಿಂದೂಳಿದ ವರ್ಗಕ್ಕೆ ಮಣೆ ಹಾಕಿದ ಬಿಜೆಪಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಉಮೇಶ್‌ ಜಾಧವ್‌ ಮತ್ತಿತರರು ಗುರುತಿಸಿ ಅವಕಾಶ ನೀಡಲು ಅಭ್ಯರ್ಥಿಯನ್ನಾಗಿ ಮಾಡಿದ್ದರು. ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಪರಿಷತ್‌ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಮತ್ತಿತರರು ಹಾಜರಿದ್ದರು.