ಬೆಂಗಳೂರು(ಜ.22):  ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ಹಿರಿಯ ನಾಯಕರು ಮೂಗು ತೂರಿಸುವ ಘಟನೆಗಳು ರಾಜ್ಯವೂ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಲು ಹೈಕಮಾಂಡ್‌ ಮುಂದಾಗಿದೆ ಎಂಬ ದಟ್ಟವದಂತಿ ಹಬ್ಬಿದೆ.

ಆದರೆ, ಇದನ್ನು ಸ್ಪಷ್ಟವಾಗಿ ಅಲ್ಲಗಳೆಯುವ ಅಖಿಲ ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ ಕನ್ನಡಿಗ ಬಿ.ವಿ. ಶ್ರೀನಿವಾಸ್‌ ಅವರು ಇಂತಹ ಯಾವ ಚಿಂತನೆಯೂ ಹೈಕಮಾಂಡ್‌ ಮಟ್ಟದಲ್ಲಿ ಇಲ್ಲ ಎಂದು ಹೇಳುತ್ತಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದಿದ್ದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನ ಅಭ್ಯರ್ಥಿಗಳ ಪರ ಹಿರಿಯ ನಾಯಕರು ಪ್ರಚಾರದಲ್ಲಿ ತೊಡಗಬಾರದು ಎಂಬುದು ಚುನಾವಣೆಯ ನಿಯಮವಾಗಿತ್ತು. ಆದರೆ, ರಾಜ್ಯದಲ್ಲಿ ಕೆಲ ನಾಯಕರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು ಎಂದು ಆರೋಪಿಸಲಾಗಿದೆ.

ರೈಲು ನಿಲ್ಲಿಸುವ ತಾಕತ್ತು ಇಲ್ಲದ ಬಿಜೆಪಿ ಜನನಾಯಕರು: ಪ್ರಿಯಾಂಕ್‌ ಖರ್ಗೆ

ಈ ಬಗ್ಗೆ ಕೆಲ ಅಭ್ಯರ್ಥಿಗಳು ದೆಹಲಿಗೆ ತೆರಳಿ ರಾಜ್ಯ ನಾಯಕರ ಬಗ್ಗೆ ದೂರು ನೀಡಿದ್ದಾರೆ ಎಂದೂ ಹೇಳಲಾಗಿದೆ. ಇದೇ ರೀತಿಯ ಪ್ರಕರಣಗಳು ದೇಶದ ಇತರ ರಾಜ್ಯಗಳಲ್ಲೂ ನಡೆದಿವೆ. ಈ ಬಗ್ಗೆ ವ್ಯಾಪಕ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಚುನಾವಣೆ ಪ್ರಕ್ರಿಯೆಯನ್ನೇ ರದ್ದುಪಡಿಸಿ ಹೈಕಮಾಂಡ್‌ ಮೂಲಕ ನೇರ ನೇಮಕ ಪದ್ಧತಿ ಜಾರಿಗೆ ತರುವ ಮನಸ್ಸು ಮಾಡಿದೆ ಎಂದು ರಾಜ್ಯ ಯುವ ಕಾಂಗ್ರೆಸ್‌ ವಲಯದಲ್ಲಿ ಹಬ್ಬಿಸಲಾಗಿದೆ.

ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸುವ ಬಿ.ವಿ.ಶ್ರೀನಿವಾಸ್‌, ಯುವ ಕಾಂಗ್ರೆಸ್‌ನ ವಿವಿಧ ಹುದ್ದೆಗಳಿಗೆ ಚುನಾವಣೆ ಮೂಲಕವೇ ಸಮರ್ಥರು ಆಯ್ಕೆಯಾಗಬೇಕು ಎಂಬುದು ರಾಹುಲ್‌ ಗಾಂಧಿ ಅವರ ಆಕಾಂಕ್ಷೆ. ಚುನಾವಣೆಯಲ್ಲಿ ಕೆಲ ವ್ಯತ್ಯಾಸಗಳು ನಡೆಯುತ್ತವೆ ಎಂದು ಚುನಾವಣೆಯನ್ನು ರದ್ದುಪಡಿಸುವ ಮನಸ್ಥಿತಿ ಹೈಕಮಾಂಡ್‌ಗೆ ಇಲ್ಲ. ಸಾಧ್ಯವಾದಷ್ಟು ಪಾರದರ್ಶಕವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಆಯ್ಕೆ ನಡೆಯಬೇಕು ಎಂಬುದೇ ಹೈಕಮಾಂಡ್‌ನ ನಿಲುವು. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.