ನೀವು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಮರ್ಪಕವಾಗಿ ಕೆಲಸ ಮಾಡಿಲ್ಲ: ಸೋಲಿಗೆ ನೀವೇ ಕಾರಣ ಎನ್ನುವ ದೂರು ಬಂದಿದೆ' ಎಂಬ ಅಗರ್‌ವಾಲ್ ಪ್ರಸ್ತಾಪದಿಂದ ಸಿಡಿಮಿಡಿಗೊಂಡ ಶ್ರೀರಾಮುಲು, ಸೋಲಿಗೆ ನಾನೇ ಕಾರಣ ಎಂಬುದನ್ನು ಸಾಬೀತುಪಡಿಸಿ ಎಂದು ಆಗ್ರಹಿಸಿದರು.
ಬೆಂಗಳೂರು(ಜ.23): ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸೋಲಿನ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಕೋರ್ ಕಮಿಟಿ ಸಭೆಯಲ್ಲಿ ಜಟಾಪಟಿಯೇ ನಡೆದಿದೆ.
"ನೀವು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಮರ್ಪಕವಾಗಿ ಕೆಲಸ ಮಾಡಿಲ್ಲ: ಸೋಲಿಗೆ ನೀವೇ ಕಾರಣ ಎನ್ನುವ ದೂರು ಬಂದಿದೆ' ಎಂಬ ಅಗರ್‌ವಾಲ್ ಪ್ರಸ್ತಾಪದಿಂದ ಸಿಡಿಮಿಡಿಗೊಂಡ ಶ್ರೀರಾಮುಲು, ಸೋಲಿಗೆ ನಾನೇ ಕಾರಣ ಎಂಬುದನ್ನು ಸಾಬೀತುಪಡಿಸಿ ಎಂದು ಆಗ್ರಹಿಸಿದರು ಎನ್ನಲಾಗಿದೆ.
ಮಿತ್ರ ಜನಾರ್ದನ ರೆಡ್ಡಿ ವಿರುದ್ಧ ತಿರುಗಿಬಿದ್ದ ಶ್ರೀರಾಮುಲು!
ಒಂದು ಹಂತದಲ್ಲಿ, ಬೇಕಾದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆಯೇ ಹೊರತು ಪಕ್ಷದೊಳಗೆ ಇದ್ದುಕೊಂಡು ಸೋಲಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಏರಿದ ಧ್ವನಿಯಲ್ಲಿ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ. ಮಂಗಳವಾರ ರಾತ್ರಿ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಇತರ ವಿಷಯಗಳ ಚರ್ಚೆ ನಡುವೆ ಉಪಚುನಾವಣೆಯ ಸೋಲಿನ ವಿಷಯ ಪ್ರಸ್ತಾಪವಾಗಿದೆ.ಚುನಾವಣೆಯ ಫಲಿತಾಂಶ ಹೊರಬಿದ್ದ
ಬಳಿಕ ಅಭ್ಯರ್ಥಿಯಾಗಿದ್ದ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಬಂಗಾರು ಅವರು ಪಕ್ಷದ ನಾಯಕರಿಗೆ ದೂರು ನೀಡಿದ್ದರು. ಹೀಗಾಗಿ, ಉಸ್ತುವಾರಿ ಅಗರ್‌ವಾಲ್ ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಸೋಲಿನ ಕುರಿತ ದೂರನ್ನು ಉಲ್ಲೇಖಿಸಿ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದು ಕಾರಣವಾಯಿತು. ಜಟಾಪಟಿಗೆ ನೀವು ಸರಿಯಾಗಿ ಕೆಲಸಮಾಡದೇ ಇದ್ದುದರಿಂದ ಆ ಕ್ಷೇತ್ರದಲ್ಲಿ ಸೋಲುಂಟಾಯಿತು. ಇಲ್ಲದಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಸೋಲಿಗೆ ನೀವೇ ಕಾರಣ ಎಂಬರ್ಥದಲ್ಲಿ ಅಗರ್‌ವಾಲ್ ಆರೋಪದ ಧಾಟಿಯಲ್ಲಿ ಮಾತನಾಡುತ್ತಿದ್ದಂತೆಯೇ ಕೆರಳಿದ ಶ್ರೀರಾಮುಲು, ಇದನ್ನು ನೀವು ಸಾಬೀತುಪಡಿಸಬೇಕು. ಅಭ್ಯರ್ಥಿ ದೂರು ನೀಡಿದ್ದನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಶ್ರಮ ಹಾಕಿದ್ದೇನೆ. ನನ್ನ ವಿರುದ್ಧ ಸುಖಾಸುಮ್ಮನೆ ದೂರು ನೀಡಿದ್ದಾರೆ. ಇದು ಸರಿಯಲ್ಲ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯೇ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ನಾನು ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸೋತರೂ ಪಕ್ಷದ ಕೆಲಸ ನಿಲ್ಲಿಸಿಲ್ಲ. ಕೇವಲ ಸಂಡೂರು ವಿಧಾನಸಭಾ ಕ್ಷೇತ್ರದ ಸೋಲಿನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೀರಿ. ಇನ್ನುಳಿದ ಎರಡು ಕ್ಷೇತ್ರಗಳಲ್ಲಿನ ಸೋಲಿನ ಬಗ್ಗೆಯೂ ಚರ್ಚೆ ಮಾಡಬೇಕಲ್ಲವೇ? ನಾನು ಕೂಡ ಎರಡು ಚುನಾವಣೆಗಳನ್ನು ಸೋತಿದ್ದೇನೆ. ಯಾರ ವಿರುದ್ದವೂ ದೂರು ನೀಡಿಲ್ಲ. ಈಗ ಬಂಗಾರು ಹನುಮಂತು ನನ್ನ ವಿರುದ್ದ ಯಾಕೆ ದೂರು ನೀಡಿದ್ದಾರೆ, ಅವರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ನನಗೆ ಪಕ್ಷದ ವಿರುದ್ಧ ಕೆಲಸ ಮಾಡುವ ಸಂದರ್ಭ ಬಂದರೆ ನಾನು ಈ ಪಕ್ಷದಲ್ಲೇ ಇರುವುದಿಲ್ಲ ಎಂದು ತೀಕ್ಷವಾಗಿ ಹೇಳಿದರು ಎಂದು ತಿಳಿದು ಬಂದಿದೆ.
ಶ್ರೀರಾಮುಲು ಅವರ ಈ ಪ್ರತಿಕ್ರಿಯೆ ಬಳಿಕ ಉಸ್ತುವಾರಿ ಅಗರ್‌ವಾಲ್ ಅವರು ಸುಮ್ಮನಾದರು. ಶ್ರೀರಾಮುಲು ಅವರನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತಿತರರು ಸಮಾಧಾನ ಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ?: ಶ್ರೀರಾಮುಲು ಹೇಳಿದ್ದಿಷ್ಟು
ಸಂತೋಷ್‌ಗೆ ದೂರು?
ಕೋರ್‌ಕಮಿಟಿ ಸಭೆ ಬಳಿಕ ಶ್ರೀರಾಮುಲು ಅವರು ಪಕ್ಷದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ವಿರುದ್ಧ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ದೂರವಾಣಿ ಮೂಲಕ ದೂರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಶ್ರೀರಾಮುಲು ಅವರನ್ನು ಸಂಪರ್ಕಿಸಲು ವಿಫಲ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
1 ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲು ರಾಜ್ಯ ಉಸ್ತುವಾರಿ 1 ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಸಭೆ
2 ನೀವು ಬೈಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲವೆಂದು ರಾಮುಲುಗೆ ಹೇಳಿದ ಅಗರವಾಲ್
3 ಸಿಡಿಮಿಡಿಗೊಂಡ ಶ್ರೀರಾಮುಲು, ಸೋಲಿಗೆ ನಾನೇ ಕಾರಣ ಎಂಬುದನ್ನು ಸಾಬೀತುಪಡಿಸಿ ಎಂದು ಆಗ್ರಹ
4 ಪಕ್ಷ ಬಿಡುವೆನೇ ಹೊರತು ಪಕ್ಷದೊಳಗಿದ್ದು ಸೋಲಿಸುವ ಪ್ರಯತ್ನ ಮಾಡಲ್ಲ ಎಂದ ಆಕ್ರೋಶ
5 ಅಭ್ಯರ್ಥಿ ದೂರು ಮುಂದಿಟ್ಟು ಆರೋಪ ಸರಿಯಲ್ಲ. ಅವರ ಹಿಂದೆ ಯಾರಿದ್ದಾರೆಂದು ಗೊತ್ತೆಂದ ರಾಮುಲು
6 ಪಕ್ಷ ಬಿಡುವ ಮಾತಾಡಿದ ಶ್ರೀರಾಮುಲು ಸಮಾಧಾನ ಮಾಡಿದ ವಿಜಯೇಂದ್ರ, ಮತ್ತಿತರರು
7 ಸಭೆ ಬಳಿಕ ರಾಧಾಮೋಹನ್ ವಿರುದ್ಧ ಸಂಘಟನಾ ಕಾರ್ ದರ್ಶಿ ಬಿ.ಎಲ್.ಸಂತೋಷ್ ಗೆ ರಾಮುಲು ದೂರು
