ತುರುವನೂರು ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ದೌರ್ಜನ್ಯ
ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಅಭ್ಯರ್ಥಿ ರವೀಶ್ ಆರೋಪಿಸಿದರು.
ಚಿತ್ರದುರ್ಗ (ಫೆ.7) : ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಅಭ್ಯರ್ಥಿ ರವೀಶ್ ಆರೋಪಿಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಸ್‌ಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಇದನ್ನು ಸಹಿಸಲು ಸಾಧ್ಯವಾಗದ ಕಾಂಗ್ರೆಸ್ ಕಾರ್ಯಕರ್ತರು ಕಿರುಕುಳ ನೀಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ನಡೆ ಎಂದರು.
Prajadhwani yatre: ಡಬಲ್ ಇಂಜಿನ್ ಸರ್ಕಾರದಿಂದ ಅಚ್ಛೇದಿನ್ ಇಲ್ಲ: ಡಿಕೆಶಿ ವಾಗ್ದಾಳಿ
ತುರುವನೂರು ಗ್ರಾಮದಲ್ಲಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಎಲ್ಲ ಪಕ್ಷದವರು ಶುಭ ಕೋರಿ ಫ್ಲೆಕ್ಸ್ ಕಟ್ಟಿದ್ದಾರೆ. ಆದರೆ ಜೆಡಿಎಸ್ ಫ್ಲೆಕ್ಸ್‌ಗಳನ್ನು ರಾತ್ರೋರಾತ್ರಿ ಹರಿದು ಹಾಕಿ ದ್ವೇಷದ ವಾತಾವರಣ ಸೃಷ್ಟಿಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಗ್ರಾಮದ ಕಾಕಿ ಹನುಮಂತರೆಡ್ಡಿ ಅವರು ಜೆಡಿಎಸ್ ಕಾರ್ಯಕರ್ತರ ಮೇಲೆ ಹರಿಹಾಯುತ್ತಿದ್ದಾರೆ. ಶಾಸಕ ರಘುಮೂರ್ತಿ ತಮ್ಮ ಬೆಂಬಲಿಗರಿಗೆ ಸೌಹಾರ್ದತೆಯಿಂದ ಇರಲು ಹೇಳುವಂತೆ ರವೀಶ್ ಮನವಿ ಮಾಡಿದರು.
ಗದ್ದಲ, ಗಲಾಟೆಗಳ ಮಾಡುವ ಜಾಯಮಾನ ನಮ್ಮದಲ್ಲಿ. ಚುನಾವಣೆಯನ್ನು ಆದಷ್ಟೂಸೌಹಾರ್ದತೆ, ಶಾಂತಿಯಿಂದ ಆಡಬೇಕೆಂಬುದು ಜೆಡಿಎಸ್ ಆಶಯ. ಗದ್ದಲಗಳ ಮಾಡಿ ಜೆಡಿಎಸ್ ಕಾರ್ಯಕರ್ತಲ್ಲಿ ಭಯ ಮೂಡಿಸುವ ಆಲೋಚನೆನ್ನೇನಾದರೂ ಕಾಂಗ್ರೆಸ್ ಮಾಡಿದರೆ ತಕ್ಷಣವೇ ನಿಲುವು ಬದಲಾಯಿಸಿಕೊಳ್ಳಲಿ. ಕಾರ್ಯಕರ್ತರಿಗೆ ನೋವನ್ನುಂಟು ಮಾಡುವ ಕೆಲಸ ಯಾರೂ ಮಾಡಬಾರದೆಂದರು.
ಚಳ್ಳಕೆರೆ ತಾಲೂಕು ಜೆಡಿಎಸ್ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ತುರುವನೂರು ಹೋಬಳಿಯಲ್ಲಿ ಮಾತ್ರ ಕಾಂಗ್ರೆಸ್‌ನವರು ಈ ತರಹದ ಕೆಲಸ ಮಾಡುತ್ತಿದ್ದಾರೆ. ಹುಣಸೆಕಟ್ಟೆಗ್ರಾಮದಲ್ಲಿ ಮೂರ್ತಿ ಎಂಬುವರು ನಮ್ಮ ಕಾರ್ಯಕರ್ತರಿಗೆ ಅನಗತ್ಯವಾಗಿ ತೊಂದರೆ ಮಾಡುತ್ತಿದ್ದಾರೆ. ಯಾವುದೇ ಗಲಾಟೆಗಳ ಮಾಡಿಕೊಳ್ಳಬೇಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ವಿನಂತಿ ಮಾಡಿಕೊಂಡಿದ್ದೇವೆ. ಸಂಘರ್ಷಗಳು ಬೇಡ ಎಂಬುವ ಕಾರಣಕ್ಕೆ ಯಾವುದೇ ಬಗೆಯ ದೂರನ್ನು ಪೊಲೀಸರಿಗೆ ನೀಡಲು ಹೋಗಿಲ್ಲ. ಚುನಾವಣೆಗಳು ಸಮೀಪಿಸುತ್ತಿರುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದೌರ್ಜನ್ಯ ಹೆಚ್ಚು ಮಾಡುವ ಸಾಧ್ಯತೆಗಳಿವೆ. ಇಂತ ನಡವಳಿಕೆಗಳ ಕೈ ಬಿಡುವಂತೆ ಬಹಿರಂಗವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲರೂ ಮತಪಟ್ಟೆಗೆ ರಾಜಕಾರಣ ಮಾಡಬೇಕೇ ವಿನ ತೋಳ್ಬಲಗಳ ಪ್ರದರ್ಶನ ಅನಗತ್ಯವೆಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಚುನಾವಣೆ ವೇಳೆ ಕ್ಷುಲ್ಲಕ ಕಾರಣಗಳಿಗೆ ವಾತಾವರಣ ಹದಗೆಡಿಸುವ ಕೆಲಸ ಯಾರೂ ಮಾಡಬಾರದು. ಮತದಾರ ಮನವೊಲಿಸಲು ಆಯಾ ಪಕ್ಷಗಳು ತಮ್ಮದೇ ಆದ ತಂತ್ರಗಳ ನಡೆಸಲಿ. ಆದರೆ ಫ್ಲೆಕ್ಸ್ ಹರಿಯುವ, ವಾತಾವರಣ ಹದಗೆಡಿಸುವ ಕೆಲಸ ಬೇಡ ಎಂದರು.
Prajadhwani yatre: ಬಿಜೆಪಿಯಿಂದ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ: ಬಿ.ಕೆ ಹರಿಪ್ರಸಾದ್ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಂಚರತ್ನಯಾತ್ರೆ ಮುಂದಿನವಾರ ಚಿತ್ರದುರ್ಗ ಜಿಲ್ಲೆಗೆ ಬರುವ ಸಾಧ್ಯತೆ ಇದೆ. ಈ ಸಂಬಂಧ ಜಿಲ್ಲೆಯಾದ್ಯಂತ ಕಾರ್ಯಕರ್ತರ ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ, ಪ್ರಮೋದ್, ಅಶೋಕ್, ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.