ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ನೆಮ್ಮದಿ: ಲಕ್ಷ್ಮಣ ಸವದಿ
ಕೇಂದ್ರದ ಬಿಜೆಪಿ ಸರ್ಕಾರ ಸಾಲಮನ್ನಾ ಸೇರಿ ಬಡವರ ಪರ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಕೇಲವ ಸುಳ್ಳು ಆಶ್ವಾಸನೆ ನೀಡುತ್ತ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಅಥಣಿ ಶಾಸಕ ಲಕ್ಷ್ಮಣ ಸವದಿ
ಕಾಗವಾಡ(ಅ.11): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನತೆಗೆ ನೆಮ್ಮದಿಯ ಜೀವನ ನಡೆಸುವ ಭರವಸೆ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮದಬಾವಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಂದ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಸಾಲಮನ್ನಾ ಸೇರಿ ಬಡವರ ಪರ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಕೇಲವ ಸುಳ್ಳು ಆಶ್ವಾಸನೆ ನೀಡುತ್ತ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ತಪ್ಪು ನೀತಿಯಿಂದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದೆ. ನಾನು ಹಾಗೂ ರಾಜು ಕಾಗೆ ಸೇರಿ ಶೀಘ್ರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಈ ಭಾಗಕ್ಕೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಧಮ್ಮು ತಾಕತ್ತಿದ್ದರೆ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ಬೊಮ್ಮಾಯಿಗೆ ಶಶಿಕಾಂತ ಪಡಸಲಗಿ ಸವಾಲ್
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇವಲ ಜಾತಿ-ಧರ್ಮದ ವಿಷಯಗಳನ್ನು ಪ್ರಸ್ತಾಪಿಸಿ ಜನರ ನೆಮ್ಮದಿ ಹಾಳು ಮಾಡುತ್ತಿತ್ತು. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ನೀಡಿತ್ತು. ಅವುಗಳನ್ನು ಈಡೇರಿಸುತ್ತ ಹೆಜ್ಜೆ ಹಾಕಿದ್ದು, ಇಂದು ರಾಜ್ಯದ ಜನ ನೆಮ್ಮದಿಯ ಜೀವನ ನಡೆಸುವಂತಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ ಎಂದ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 25 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದರು.
ಶೈಲಜಾ ಪಾಟೀಲ, ವಿನಾಯಕ ಬಾಗಡಿ, ರವೀಂದ್ರ ಪೂಜಾರಿ, ಶಿವಾನಂದ ಮಗದುಮ್ಮ, ದಿಗ್ವಿಜಯ ಪವಾರ ದೇಸಾಯಿ, ಚಂದ್ರಕಾಂತ ಇಮ್ಮಡಿ, ಸಂಜಯ ತಳವಲಕರ, ವಿಲಾಸ ಟೋಣೆ, ಸಂಜಯ ಅದಾಟೆ, ಅಶೋಕ ಪುಜಾರಿ, ಮೋಹನ ಬಾಗಡಿ, ಸುಧೀರ ಗೊಂಧಳಿ, ಸಂಭಾಜಿ ವಾಘಮೋಡೆ, ರಾಜೇಂದ್ರ ಪಾಟೀಲ, ಬಂಡು ಜಾಧವ ಇತರರು ಇದ್ದರು.