ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿದೆ. ಈ ಸ್ಥಾನವನ್ನು ಆಮ್ ಆದ್ಮಿ ಪಾರ್ಟಿ ಆಕ್ರಮಿಸಿಕೊಳ್ಳುತ್ತಿದೆ. ಗುಜರಾತ್ ಚುನಾವಣೆಯಲ್ಲಿ ಆಪ್ ಅದ್ವಿತೀಯ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಬಡ್ತಿ ಪಡೆದಿದೆ.

ನವದೆಹಲಿ(ಡಿ.08): ದೇಶದ ಅತ್ಯಂತ ಹಳೆ ರಾಜಕೀಯ ಪಕ್ಷ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆಯಾ? ಈ ಚರ್ಚೆ ಪ್ರತಿ ಚುನಾವಣೆಯಲ್ಲೂ ಕೇಳಿಬರುತ್ತಿದೆ. ಈ ಬಾರಿಯ ಎರಡು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಮತ್ತೆ ಚರ್ಚೆ ಶುರುವಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಆದರೂ ಕಾಂಗ್ರೆಸ್ ಆತಂಕ ಕಡಿಮೆಯಾಗಿಲ್ಲ. ಇದೀಗ ಕಾಂಗ್ರೆಸ್ ಸ್ಥಾನವನ್ನು ಆಮ್ ಆದ್ಮಿ ಪಾರ್ಟಿ ಆಕ್ರಮಿಸಿಕೊಳ್ಳುತ್ತಿದೆ. 2012ರಲ್ಲಿ ಆರಂಭಗೊಂಡ ಆಮ್ ಆದ್ಮಿ ಪಾರ್ಟಿ 10 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಸ್ಥಾನ ಪಡೆದಿದೆ. ಗುಜರಾತ್ ಚುನಾವಣೆ ಫಲಿತಾಂಶ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 5 ಸ್ಥಾನ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಸ್ಪರ್ಧಿಸಿದ ಆಪ್ 5 ಸ್ಥಾನ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದೆ. ಇದರೊಂದಿಗೆ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಬಡ್ತಿ ಪಡೆದಿದೆ.

ಭಾರತದಲ್ಲಿ ರಾಷ್ಟ್ರೀಯ ಪಕ್ಷ(National party) ಸ್ಥಾನ ಪಡೆಯಲು ಕನಿಷ್ಠ 3 ರಾಜ್ಯಗಳ ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ ಶೇಕಡಾ 2 ರಷ್ಟು ಸ್ಥಾನ ಗೆದ್ದಿರಬೇಕು. ಅಂದರೆ ಲೋಕಸಭೆಯಲ್ಲಿ ಕನಿಷ್ಠ 11 ಸ್ಥಾನ ಗೆದ್ದಿರಬೇಕು. ಆದರೆ ಆಮ್ ಆದ್ಮಿ ಪಾರ್ಟಿ(AAP) ಸಂಸತ್ತಿನಲ್ಲಿ ಎರಡು ರಾಜ್ಯಸಭಾ ಸದಸ್ಯರನ್ನು ಹೊಂದಿದೆ. ಈ ವಿಭಾಗದಲ್ಲಿ ಆಪ್ ಪಕ್ಷ ರಾಷ್ಟ್ರೀಯ ಸ್ಥಾನಮಾನ ಪಡೆಯಲು ಸಾಧ್ಯವಾಗಿಲ್ಲ. ಎರಡನೇ ವಿಭಾಗದಲ್ಲಿ ಅಂದರೆ ಒಂದು ರಾಜಕೀಯ ಪಕ್ಷ ನಾಲ್ಕು ರಾಜ್ಯಗಳಲ್ಲಿ ಅಸ್ತಿತ್ವ ಕಾಣಬೇಕು. ನಾಲ್ಕು ರಾಜ್ಯಗಳಲ್ಲಿ ಕನಿಷ್ಠ 6 ಶೇಕಡಾ ಮತಗಳನ್ನು ಗಳಿಸಬೇಕು. ಅಥವಾ ನಾಲ್ಕು ರಾಜ್ಯಗಳ ಪೈಕಿ ಪ್ರತಿ ರಾಜ್ಯದಲ್ಲಿ ಕನಿಷ್ಠ ಎರಡೆರಡು ಸ್ಥಾನ ಗೆಲ್ಲಬೇಕು. ಆದರೆ ವೋಟ್ ಶೇರ ಶೇಕಡಾ 6ಕ್ಕಿಂತ ಕಡಿಮೆ ಇದ್ದರೆ ಮೂರು ಸ್ಥಾನ ಗೆಲ್ಲಬೇಕು.

'ಪೇಪರ್‌ನಲ್ಲಿ ಬರ್ದು ಕೊಡ್ತಿನಿ, ಈ ಮೂರ್‌ ಜನ ಗೆಲ್ತಾರೆ' ಎಂದಿದ್ದ ಕೇಜ್ರಿವಾಲ್‌, ಅವರ ರಿಸಲ್ಟ್‌ ನೋಡಿದ್ರಾ?

ಆಮ್ ಆದ್ಮಿ ಪಾರ್ಟಿ ದೆಹಲಿ ಹಾಗೂ ಪಂಜಾಬ್‌ನಲ್ಲಿ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಗೋವಾದಲ್ಲಿ ಖಾತೆ ತೆರೆದಿದೆ. ಇದೀಗ ಗುಜರಾತ್‌ನಲ್ಲಿ(Gujarat Assemby Election Result) 5 ಸ್ಥಾನ ಗೆದ್ದುಕೊಂಡಿದೆ. ಈ ಮೂಲಕ ನಾಲ್ಕು ರಾಜ್ಯಗಳಲ್ಲಿ ಆಮ್ ಆದ್ಮಿ ಪಾರ್ಟಿ ತನ್ನ ಪತಾಕೆ ಹಾರಿಸಿದೆ. ಈ ಮೂಲಕ ಇದೀಗ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.

2012ರಲ್ಲಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಆರಂಭಿಸಿದರು. ಈ ವೇಳೆ ತೆರಿಗೆ ಇಲಾಖೆಯ ಉದ್ಯೋಗಿಗೆ ರಾಜಕೀಯ ಅನುಭವ ಇಲ್ಲ,, ಆರ್‌ಟಿಐ ಕಾರ್ಯಕರ್ತನ ಪ್ರಯತ್ನ ಠುಸ್ ಆಗಲಿದೆ ಎಂದು ಹೀಯಾಳಿಸಿದ್ದರು ಆದರೆ ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರ ಬಂದಿದೆ. ಇತ್ತ ಪಂಜಾಬ್‌ನಲ್ಲಿ ಅಧಿಕಾರದಲ್ಲಿದೆ. ಇದೀಗ ದೆಹಲಿ ಮಹಾನಗರ ಪಾಲಿಕೆ ಗೆದ್ದುಕೊಂಡಿದೆ. ಗೋವಾ ಹಾಗೂ ಗುಜರಾತ್‌ನಲ್ಲೂ ಖಾತೆ ತೆರೆದಿದೆ. ಅರವಿಂದ್ ಕೇಜ್ರಿವಾಲ್ ಇದೀಗ 2023ರ ಲೋಕಸಭಾ ಚುನಾವಣೆ ಮೇಲೂ ಕಣ್ಣಿಟ್ಟಿದ್ದಾರೆ.