Asianet Suvarna News Asianet Suvarna News

Assembly election: ಇಂದು ಹಿಮಾಚಲ ಮತಸಮರ

  • ಇಂದು ಹಿಮಾಚಲ ಮತಸಮರ
  •  ರಾಜ್ಯದ 68 ವಿಧಾನಸಭಾ ಸ್ಥಾನಗಳಿಗೆ ಮತದಾನ
  •  ಸತತ 2ನೇ ಬಾರಿ ಗೆದ್ದು ಇತಿಹಾಸ ರಚನೆಯತ್ತ ಬಿಜೆಪಿ ದೃಷ್ಟಿ
  • 4 ದಶಕಗಳಿಂದ ಯಾವುದೇ ಸರ್ಕಾರ ಮರು ಆಯ್ಕೆ ಇಲ್ಲ
Assembly election in himachala pradesh today rav
Author
First Published Nov 12, 2022, 12:20 AM IST

ಶಿಮ್ಲಾ (ನ.12): ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳ ಪಾಲಿಗೆ ಮಹತ್ವದ್ದಾದ ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ನ.12ರ ಶನಿವಾರ ಮತದಾನ ನಡೆಯಲಿದೆ. 68 ಸ್ಥಾನಗಳಿಗೆ ಒಟ್ಟು 412 ಜನರು ಸ್ಪರ್ಧಿಸಿದ್ದು, 55 ಲಕ್ಷ ಮತದಾರರು, ರಾಜ್ಯ ವಿಧಾನಸಭೆಗೆ ಹೊಸ ಶಾಸಕರನ್ನು ಆಯ್ಕೆ ಮಾಡುವ ಹೊಣೆ ಹೊತ್ತಿದ್ದಾರೆ.

ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನೇರ ಸೆಣಸಿಗೆ ಸಾಕ್ಷಿಯಾಗುತ್ತಿದ್ದ ರಾಜ್ಯದಲ್ಲಿ ಈ ಬಾರಿ ಆಮ್‌ಆದ್ಮಿ ಪಕ್ಷದ ಪ್ರವೇಶದೊಂದಿಗೆ ತ್ರಿಪಕ್ಷೀಯ ಕದನದ ನಿರೀಕ್ಷಿಸಲಾಗಿದೆ. ಜೊತೆಗೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಈವರೆಗೂ ಸತತ 2ನೇ ಬಾರಿ ಗೆದ್ದು ಅಧಿಕಾರಕ್ಕೆ ಬಂದಿಲ್ಲ. ಇಂಥ ಸಂಪ್ರದಾಯ ರಾಜ್ಯದಲ್ಲಿ ಕಳೆದ 4 ದಶಕಗಳಿಂದ ಪಾಲನೆಯಾಗುತ್ತಾ ಬಂದಿದೆ. ಹೀಗಾಗಿ ಇದನ್ನು ಮುರಿಯುವ ಧಾವಂತದಲ್ಲಿ ಬಿಜೆಪಿ ಇದ್ದು, ಈ ಬಾರಿ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.

ಗುಜರಾತ್ ಹಿಮಾಚಲದಲ್ಲಿ ಮತ್ತೆ ಅರಳಲಿದೆ ಕಮಲ: ಚುನಾವಣಾ ಪೂರ್ವ ಸಮೀಕ್ಷೆ

ಕಳೆದ 5 ವರ್ಷಗಳ ರಾಜ್ಯದಲ್ಲಿನ ಆಡಳಿತ ಮತ್ತು ಕೇಂದ್ರದಲ್ಲಿನ ಮೋದಿ ಸರ್ಕಾರದ ಅಲೆಯಲ್ಲಿ ಮರಳಿ ಅಧಿಕಾರಕ್ಕೆ ಏರಿ ಸಂಪ್ರದಾಯ ಮುರಿಯುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಹೀಗಾಗಿಯೇ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ, ಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ಸೇರಿದಂತೆ ಬಿಜೆಪಿಯ ಗಣ್ಯರೇ ಸಾಲುಸಾಲಾಗಿ ಬಂದು ರಾಜ್ಯದಲ್ಲಿ ಪ್ರಚಾರ ನಡೆಸಿದ್ದಾರೆ.

ಮತ್ತೊಂದೆಡೆ ಸೋನಿಯಾ ಗಾಂಧಿ ಅನಾರೋಗ್ಯ, ಭಾರತ್‌ ಜೋಡೋ ಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ರಾಹುಲ್‌ ಗಾಂಧಿ ಅಲಭ್ಯರಾಗಿರುವ ಕಾರಣ, ಇಡೀ ಪ್ರಚಾರದ ಹೊಣೆ ಕೇವಲ ಪ್ರಿಯಾಂಕಾ ವಾದ್ರಾ ಮತ್ತು ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಮಾತ್ರವೇ ಬಿದ್ದಿತ್ತು.

ಕಳೆದ 2 ವರ್ಷಗಳಲ್ಲಿ ಕಾಂಗ್ರೆಸ್‌ 9 ರಾಜ್ಯಗಳನ್ನು ಕಳೆದುಕೊಂಡಿದೆ. ಇದೀಗ ಹಿಮಾಚಲ ಅದರ ಕೈಗೆ ಮರಳಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹುರುಪು ಸಿಗಲಿದೆ. ಇಲ್ಲದೇ ಹೋದಲ್ಲಿ ಪಕ್ಷ ಮತ್ತಷ್ಟುಹೊಡೆತ ಅನುಭವಿಸಬೇಕಾಗಿ ಬರಲಿದೆ.

ಮತ್ತೊಂದೆಡೆ ಆಮ್‌ಆದ್ಮಿ ಪಕ್ಷ ಪಕ್ಷದ ರಾಷ್ಟ್ರೀಯ ಸಂಚಾರಲಕ ಕೇಜ್ರಿವಾಲ್‌ ಅಲೆಯಲ್ಲಿ ಗೆದ್ದು ಬರುವ ವಿಶ್ವಾಸದಲ್ಲಿದೆ.

ಚುನಾವಣೆಗೂ ಮುನ್ನ 26 ಕಾಂಗ್ರೆಸ್‌ ನಾಯಕರು ಬಿಜೆಪಿಗೆ ಸೇರ್ಪಡೆ!

ಹಣದ ಹೊಳೆ:

ಪ್ರಚಾರದ ಅವಧಿಯಲ್ಲಿ ರಾಜ್ಯದಲ್ಲಿ 17.18 ಕೋಟಿ ರು. ನಗದು, 17.5 ಕೋಟಿ ಮೌಲ್ಯದ ಮದ್ಯ, 1.2 ಕೋಟಿ ಮೌಲ್ಯದ ಮಾದಕ ವಸ್ತು, ಮತದಾರರಿಗೆ ಹಂಚಲು ತರಲಾಗಿದ್ದ 41 ಲಕ್ಷ ರು.ಮೌಲ್ಯದ ಉಚಿತ ಉಡುಗೊರೆಯ ವಸ್ತು ಸೇರಿದಂತೆ 50 ಕೋಟಿ ರು. ಹಣ, ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾದ 9 ಕೋಟಿ ರು. ಹಣ, ವಸ್ತುಗಳಿಗೆ ಹೋಲಿಸಿದರೆ ಇದು ಭಾರೀ ಹೆಚ್ಚು.

Follow Us:
Download App:
  • android
  • ios