ಗಂಗಾವತಿಯಲ್ಲಿ ಗಣಿ ರೆಡ್ಡಿ ಸ್ಪರ್ಧೆ ಬಗ್ಗೆ ಸಂಚಲನ ಬಿಜೆಪಿ ನಿದ್ರೆಗೆಡಿಸಿದ ಮಾಜಿ ಸಚಿವ ಬಿಜೆಪಿ ಟಿಕೆಟ್‌ ಸಿಗದಿದ್ದರೆ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ? ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ- ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ಟಿಕೆಟ್‌ ವಂಚಿತರು ಜೆಡಿಎಸ್‌ನಿಂದ ಕಣಕ್ಕೆ?

ಟಿಕೆಟ್‌ ಫೈಟ್‌- ಕೊಪ್ಪಳ ಜಿಲ್ಲೆ

ಸೋಮರಡ್ಡಿ ಅಳವಂಡಿ

 ಕೊಪ್ಪಳ (ಡಿ.17) : ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಮೂರು ಅವಧಿಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ‘ಕಮಲ’ ಅರಳಿ ಭದ್ರವಾಗಿ ನೆಲೆಯೂರಿದೆ. ಮೊದ ಮೊದಲು ಜೆಡಿಎಸ್‌ ಪ್ರಭಾವ ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಜೆಡಿಎಸ್‌ ತನ್ನ ಪ್ರಭಾವ ಕಳೆದುಕೊಂಡಿದೆಯಾದರೂ ಇನ್ನೂ ಒಂದಷ್ಟುಮತ ಬ್ಯಾಂಕ್‌ ಉಳಿಸಿಕೊಂಡಿದೆ. ಪ್ರಭಾವಿ ಮುಖಂಡರಿಲ್ಲದೆ ಬಿಜೆಪಿ-ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಕೊಪ್ಪಳ ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದರಲ್ಲಿ ಒಂದು ಎಸ್ಸಿ ಮೀಸಲು ಕ್ಷೇತ್ರ. ಉಳಿದವು ಸಾಮಾನ್ಯ ಕ್ಷೇತ್ರಗಳು. ಎಸ್ಸಿ, ಎಸ್ಟಿ, ಕುರುಬರು, ಅಲ್ಪಸಂಖ್ಯಾತರು, ಬಣಜಿಗರು, ಪಂಚಮಸಾಲಿ, ರಡ್ಡಿ, ಗಾಣಿಗರು ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿಯೂ ಮೇಲ್ಪಂಕ್ತಿಯಲ್ಲಿದ್ದಾರೆ.

Ticket Fight: ಹಾಲಿಗಳಿಗೆ ವಯೋಮಿತಿ, ಹೊಸ ಮುಖ ಅಡ್ಡಿ

1.ಕೊಪ್ಪಳ: ಹಿಟ್ನಾಳ- ಸಂಸದ ಕರಡಿ ಫೈಟ್‌?

ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ. ಈಗಾಗಲೇ ಎರಡು ಬಾರಿ ಗೆದ್ದಿರುವ ಅವರು ಈ ಬಾರಿಯೂ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಿಂದ ಹಿಟ್ನಾಳ ಮತ್ತೊಮ್ಮೆ ಸ್ಪರ್ಧಿಸುವುದು ಪಕ್ಕಾ ಎಂಬಂತಾಗಿದೆ. ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಅವರು ಕ್ಷೇತ್ರದಿಂದ ಸ್ಪರ್ಧಿಸುವ ಉತ್ಸಾಹ ತೋರಿದ್ದು, ವರಿಷ್ಠರ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಈ ದಿಸೆಯಲ್ಲಿ ತಯಾರಿಯನ್ನೂ ನಡೆಸಿದ್ದಾರೆ. ಇನ್ನು ಕಳೆದ ಬಾರಿ ಪರಾಭವಗೊಂಡಿರುವ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ಮತ್ತೆ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ತಂದೆಗೆ ಸಿಗದಿದ್ದರೆ ನನಗೇ ಕೊಡಿ ಎನ್ನುತ್ತಿದ್ದಾರೆ. ಕಳೆದ ಬಾರಿ ಕೊನೇ ಕ್ಷಣದಲ್ಲಿ ಟಿಕೆಟ್‌ ತಪ್ಪಿಸಿಕೊಂಡಿದ್ದ ಸಿ.ವಿ.ಚಂದ್ರಶೇಖರ ಅವರು ಕೂಡ ಆಕಾಂಕ್ಷಿ. ಜೆಡಿಎಸ್‌ನಿಂದ ವೀರೇಶ ಮಹಾಂತಯ್ಯನಮಠ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಆದರೆ, ಕೊನೇ ಕ್ಷಣದಲ್ಲಿ ಬಿಜೆಪಿ ಟಿಕೆಟ್‌ ತಪ್ಪಿಸಿಕೊಂಡವರು ಜೆಡಿಎಸ್‌ನಿಂದ ಅಖಾಡಕ್ಕಿಳಿಯುವ ಸಾಧ್ಯತೆಯೂ ಇಲ್ಲದಿಲ್ಲ.

2.ಗಂಗಾವತಿ: ಬಿಜೆಪಿಗೆ ರೆಡ್ಡಿಯದ್ದೇ ಚಿಂತೆ

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಅವರು ಹಾಲಿ ಶಾಸಕ. 2023ರ ಚುನಾವಣೆಯಲ್ಲೂ ಅವರು ಮತ್ತೊಮ್ಮೆ ಅಖಾಡಕ್ಕಿಳಿಯುವ ತಯಾರಿಯಲ್ಲಿದ್ದಾರೆ. ಪರಣ್ಣ ಅವರಲ್ಲದೆ ವಿರೂಪಾಕ್ಷಪ್ಪ ಸಿಂಗನಾಳ, ಚನ್ನಕೇಶವ, ನೆಕ್ಕಂಟಿ ಸೂರಿಬಾಬು ಅವರೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು. ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ತೀವ್ರ ಪೈಪೋಟಿಯಿದೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದ ಇಕ್ಬಾಲ್‌ ಅನ್ಸಾರಿ ಇದೀಗ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಟಿಕೆಟ್‌ಗಾಗಿ ಸ್ಪರ್ಧೆಯಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿ ಬಿರುಸಿನ ತಯಾರಿಯನ್ನೂ ನಡೆಸಿದ್ದಾರೆ. ಇವರ ಜತೆಗೆ ಮಲ್ಲಿಕಾರ್ಜುನ ನಾಗಪ್ಪ ಹಾಗೂ ಎಚ್‌.ಆರ್‌.ಶ್ರೀನಾಥ್‌ ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು. ಹೀಗಾಗಿ ಕ್ಷೇತ್ರದಲ್ಲಿ ಚುನಾವಣೆಗೂ ಮೊದಲು ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಫೈಟ್‌ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ ಟಿಕೆಟ್‌ ವಂಚಿತರು ಜೆಡಿಎಸ್‌ ಕಡೆ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ, ಈಗಾಗಲೇ ಗಂಗಾವತಿಯಲ್ಲಿ ಮನೆ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಶಾಸಕ ಪರಣ್ಣ ಅವರ ನಿದ್ದೆಗೆಡಿಸಿದೆ. ಒಂದು ವೇಳೆ ಬಿಜೆಪಿ ಟಿಕೆಟ್‌ ಸಿಗದೇ ಹೋದರೆ ಪ್ರತ್ಯೇಕ ಪಕ್ಷ ಅಥವಾ ವೈಎಸ್‌ಆರ್‌ ಪಕ್ಷದಿಂದ ಸ್ಪರ್ಧಿಸುವ ಮಾತುಗಳೂ ಓಡಾಡುತ್ತಿವೆ.

3.ಕನಕಗಿರಿ: ದಢೇಸೂಗೂರುಗೆ ಟಿಕೆಟ್‌ ಸಿಗುತ್ತಾ?

ಎಸ್ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿಯಲ್ಲಿ ಬಿಜೆಪಿಯ ಬಸವರಾಜ ದಢೇಸೂಗೂರು ಹಾಲಿ ಶಾಸಕ. 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿಯಲು ಸಿದ್ಧರಾಗಿರುವ ಅವರು ಆ ಸಂಬಂಧ ಈಗಾಗಲೇ ತಯಾರಿಯನ್ನೂ ನಡೆಸುತ್ತಿದ್ದಾರೆ. ಇತ್ತೀಚೆಗೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ದಢೇಸೂಗೂರು ಅವರಿಗೆ ಟಿಕೆಟ್‌ ತಪ್ಪಿದರೆ ಗಾಯತ್ರಿ ತಿಮ್ಮಾರಡ್ಡಿ, ಈಶಪ್ಪ ಹಿರೇಮನಿ, ಮಿತಿಲೇಶ್ವರ, ರಾಜಗೋಪಾಲ, ಧರ್ಮಣ್ಣ ಸ್ಪರ್ಧೆಗೆ ಸಿದ್ಧವಾಗಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಹೇಳಿಕೊಳ್ಳುವಂಥ ಪೈಪೋಟಿಯೇನೂ ಕಾಣುತ್ತಿಲ್ಲ. ಮಾಜಿ ಸಚಿವ ಶಿವರಾಜ ತಂಗಡಗಿ ಪಕ್ಷದಿಂದ ಅಖಾಡಕ್ಕಿಳಿಯುವುದು ಸದ್ಯಕ್ಕಂತೂ ಪಕ್ಕಾ ಆಗಿದೆ. ಈ ಮಧ್ಯೆ, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದರಿಂದ ಅವರ ಆಪ್ತ ಮುಕುಂದರಾವ್‌ ಭವಾನಿಮಠ ಅವರ ಹೆಸರೂ ಕ್ಷೇತ್ರದಲ್ಲಿ ಓಡಾಡುತ್ತಿದೆ. ಜೆಡಿಎಸ್‌ನಿಂದ ಅಶೋಕ ಉಮ್ಮಲೂಟಿ ಆಕಾಂಕ್ಷಿ ಎನ್ನುವುದು ಸ್ಪಷ್ಟವಾಗಿದೆ.

4.ಕುಷ್ಟಗಿ: ಮತ್ತೆ ಬಯ್ಯಾಪುರ, ದೊಡ್ಡನಗೌಡರ ಜಿದ್ದಾಜಿದ್ದಿ

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಹಾಲಿ ಶಾಸಕರು. ಈ ಬಾರಿ ಮತ್ತೆ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ. ಕಳೆದ ಬಾರಿ ಬಯ್ಯಾಪುರ ಅವರೆದುರು ಪರಾಭವಗೊಂಡಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ ಈ ಬಾರಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿಯುವುದು ಖಚಿತ. ಬಹುತೇಕ ಈ ಬಾರಿಯ ಚುನಾವಣೆ ಬಯ್ಯಾಪುರ ಮತ್ತು ಪಾಟೀಲರ ನಡುವೆ ಮತ್ತೊಂದು ಜಿದ್ದಾಜಿದ್ದಿಗೆ ಸಾಕ್ಷಿಯಾಗುವುದು ಪಕ್ಕಾ ಆಗಿದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳಿಗೇನೂ ಕೊರತೆ ಇಲ್ಲ. ಕಾಂಗ್ರೆಸ್‌ನಿಂದ ಪ್ರಭಾಕರ ಚಿಣಿ, ಹಸನ್‌ಸಾಬ್‌ ದೋಟಿಹಾಳ ಅವರೂ ಆಕಾಂಕ್ಷಿಗಳಾಗಿದ್ದು, ಬಿಜೆಪಿಯಲ್ಲಿ ಶರಣು ತಳ್ಳಿಕೇರಿ, ಡಾ.ಕೆ.ಬಸವರಾಜ ಅವರ ಹೆಸರೂ ಕೇಳಿಬರುತ್ತಿವೆ. ಜೆಡಿಎಸ್‌ನಲ್ಲಿ ಮಾತ್ರ ಅಭ್ಯರ್ಥಿ ವಿಚಾರವಾಗಿ ಗೊಂದಲ ಮುಂದುವರಿದಿದೆ. ಸದ್ಯ ತುಕರಾಮ ಸುರ್ವೆ ಅವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

Ticket Fight: ಹಾಸನದಲ್ಲಿ ಪ್ರೀತಂಗೌಡ VS ಭವಾನಿ ರೇವಣ್ಣ?

5.ಯಲಬುರ್ಗಾ: ಹಾಲಪ್ಪ ಆಚಾರ್‌-ರಾಯರಡ್ಡಿ ಮಧ್ಯೆ ಫೈಟ್‌

ಈ ಬಾರಿ ಕೊಪ್ಪಳ ಜಿಲ್ಲೆಯಲ್ಲೇ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಕ್ಷೇತ್ರವಿದ್ದರೆ ಅದು ಯಲಬುರ್ಗಾ. ಕಳೆದ ಬಾರಿ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ಹಾಲಪ್ಪ ಆಚಾರ್‌ ಇದೀಗ ಬಿಜೆಪಿ ಸರ್ಕಾರದಲ್ಲಿ ಸಚಿವರು. ಇವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರಡ್ಡಿ ಮತ್ತೊಮ್ಮೆ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಬ್ಬರೂ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ಈ ಬಾರಿ ಜಿದ್ದಾಜಿದ್ದಿಯ ಸ್ಪರ್ಧೆಗೆ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಎರಡೂ ಪಕ್ಷಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳಿಲ್ಲವಾದರೂ ಬಿಜೆಪಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಗುಳಗಣ್ಣವರ ಅವರು ಅವಕಾಶ ಸಿಕ್ಕರೆ ಸ್ಪರ್ಧಿಸೋಣ ಎಂಬ ಉಮೇದಿನಲ್ಲಿದ್ದಾರೆ. ಜೆಡಿಎಸ್‌ನಿಂದ ಮಲ್ಲನಗೌಡ ಕೋನನಗೌಡ್ರ ಅವರು ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲೇಬೇಕು ಎಂದು ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಬಂದಿರುವ ಗುಂಗಾಡಿ ಶರಣಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.