Asianet Suvarna News Asianet Suvarna News

Karnataka Politics ಕಾಂಗ್ರೆಸ್ಸಿಗರ ಗೂಂಡಾಗಿರಿಗೆ ಖಂಡನೆ, ಅಶ್ವತ್ಥನಾರಾಯಣ ವಾಗ್ದಾಳಿ

* ರಾಮನಗರದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಕಿತ್ತಾಟ
* ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಗಲಾಟೆ
* ಕಾಂಗ್ರೆಸ್ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ವಾಗ್ದಾಳಿ

Ashwath narayan Reacts On Ramanagara incident Infront of CM Bommai rbj
Author
Bengaluru, First Published Jan 3, 2022, 9:49 PM IST

ಚಿಕ್ಕಕಲ್ಯ (ಮಾಗಡಿ), ಜ.03): ರಾಮನಗರದಲ್ಲಿ(Ramanagara) ಸೋಮವಾರದಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರಕಾರದ ವತಿಯಿಂದ ಏರ್ಪಡಿಸಿದ್ದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿ, ಗೂಂಡಾಗಿರಿ ಪ್ರದರ್ಶಿಸಿದ್ದು ಖಂಡನೀಯ ಕೃತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr CN Ashwath Narayan) ಹೇಳಿದ್ದಾರೆ. 

ರಾಮನಗರದ ಕಾರ್ಯಕ್ರಮದಲ್ಲಿ ಸೃಷ್ಟಿಯಾದ ಗೊಂದಲ, ಗದ್ದಲಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಿದ ಅವರು, `ರಾಮನಗರ ಜಿಲ್ಲೆಗೆ ದೊಡ್ಡ ಇತಿಹಾಸವಿದೆ. ನಾಡಪ್ರಭು ಕೆಂಪೇಗೌಡ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾನಾಥ ಸ್ವಾಮೀಜಿಗಳು ಈ ಜಿಲ್ಲೆಯಲ್ಲೇ ಜನಿಸಿದ ಪುಣ್ಯಪುರುಷರು. ಜೊತೆಗೆ ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರು ಜಿಲ್ಲೆಯನ್ನು ಪ್ರತಿನಿಧಿಸಿರುವ ಪರಂಪರೆ ಇದೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ದುರುದ್ದೇಶಪೂರ್ವಕವಾಗಿಯೇ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಮೂಲಕ ಜಿಲ್ಲೆಯ ಸಂಸ್ಕೃತಿಗೆ ಮಸಿ ಬಳಿದಿದ್ದಾರೆ’ ಎಂದು ಹರಿಹಾಯ್ದರು. 

Political Fight: ಮುಖ್ಯಮಂತ್ರಿ ಎದುರೇ ಹೊಡೆದಾಟಕ್ಕೆ ಮುಂದಾದ ಸಂಸದ-ಮಿನಿಸ್ಟರ್

`ಮುಖ್ಯಮಂತ್ರಿಗಳು ಬಂದಾಗ ಪಕ್ಷಾತೀತವಾಗಿ ಗೌರವಿಸಬೇಕು. ಇಷ್ಟಕ್ಕೂ ನಾವು ಆಯೋಜಿಸಿದ್ದು ಸರಕಾರದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಶುರುವಿನಿಂದಲೂ ಅಡ್ಡಿಪಡಿಸಬೇಕು ಎನ್ನುವ ಪಿತೂರಿ ಕಾಂಗ್ರೆಸ್ ಕಾರ್ಯಕರ್ತರದಾಗಿತ್ತು. ಇವರ ಈ ವರ್ತನೆಯಿಂದ ರಾಮನಗರ ಜಿಲ್ಲೆಯ ಜನ ರಾಜ್ಯದ ಮುಂದೆ ತಲೆ ತಗ್ಗಿಸುವಂತಾಯಿತು. ಈ ಕೃತ್ಯದಿಂದ ತಮಗೆ ಅತೀವ ನೋವಾಗಿರುವುದು ನಿಜ. ಆದರೆ, ಇಂತಹ ಕಿಡಿಗೇಡಿತನವನ್ನು ಮಟ್ಟ ಹಾಕಲಾಗುವುದು’ ಎಂದು ಅವರು ಖಡಕ್ಕಾಗಿ ಎಚ್ಚರಿಸಿದರು. 

`ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕಾಂಗ್ರೆಸ್ಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಮುಖ್ಯಮಂತ್ರಿಗಳಿಗೇ ಆಗಲಿ, ಸಚಿವರಿಗೇ ಆಗಲಿ, ಹೀಗೆಯೇ ಮಾತನಾಡಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಇಂತಹ ಅನಾಗರಿಕತೆಯನ್ನು ನಾವು ಎಳ್ಳಷ್ಟೂ ಸಹಿಸಿಕೊಳ್ಳುವುದಿಲ್ಲ,’ ಎಂದು ಅಶ್ವತ್ಥನಾರಾಯಣ ಗರಂ ಆದರು. 

ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಸಂಸ್ಕೃತಿಗೆ ಕಳಂಕ ಮೆತ್ತಿದ್ದಾರೆ. ಇದಕ್ಕಾಗಿ ಅವರು ಜನತೆಯ ಕ್ಷಮೆ ಕೋರಬೇಕು. ಇದು ಕಾಂಗ್ರೆಸ್ಸಿನ ಸಂಸ್ಕೃತಿ ಎಷ್ಟು ಕೀಳು ಮಟ್ಟದ್ದು ಎನ್ನುವುದನ್ನು ತೋರಿಸುತ್ತದೆ. ಇಂಥವರಿಗೆ ಹೇಗೆ ಪಾಠ ಕಲಿಸಬೇಕೆನ್ನುವುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಅವರು ಹೇಳಿದರು.

ಸಿಎಂ ಹೇಳಿದ್ದೇನು?
ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಈ ಘಟನೆಗಳು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ 1 ತಿಂಗಳಿರುವಾಗ ರಾಜಕಾರಣ ಮಾಡೋಣ ಎಂದು ರಾಮನಗರದಲ್ಲಿ ವೇದಿಕೆಯಲ್ಲಿ ಅಶ್ವತ್ಥ ನಾರಾಯಣ, ಡಿಕೆ ಸುರೇಶ್, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಕರ್ನಾಟಕಕ್ಕೆ ಮಾದರಿಯಾಗುವ ಜಿಲ್ಲೆ. ಅಭಿಮಾನ, ಸಂತಸದಿಂದ ರಾಮನಗರಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಚುನಾವಣೆಯ 1 ತಿಂಗಳು ಮಾತ್ರ ರಾಜಕಾರಣ ಮಾಡೋಣ. ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ. ರಾಮನಗರ ಜಿಲ್ಲೆಗೆ ಕೊಡುಗೆ ಕೊಡಲು ಇಲ್ಲಿಗೆ ಬಂದಿದ್ದೇನೆ. ಹಲವಾರು ವಿಚಾರಗಳು ನನೆಗುದಿಗೆ ಬಿದ್ದಿರುವುದು ಗೊತ್ತಿದೆ. ಜನರು ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಜನರು ರಾಜಕಾರಣ ಮಾಡಿದರೆ ನಮ್ಮನ್ನು ಕೈಬಿಡುವುದಿಲ್ಲ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಜಿಲ್ಲೆ ಇದು. ರಾಮನಗರ ಜಿಲ್ಲೆಯ ಜೊತೆ ಹಳೆಯ ಸಂಬಂಧವಿದೆ. ಕೆಂಗಲ್ ಹನುಮಂತಯ್ಯ ಅಖಂಡ ಕರ್ನಾಟಕದ ಸಿಎಂ ಆಗಿದ್ರು. ಕೆಂಗಲ್ ಹನುಮಂತಯ್ಯನವರು ಸುಸಂಸ್ಕೃತ ಆಡಳಿತ ನೀಡಿದ್ರು. ಇಂದಿರಾ ಗಾಂಧಿಯವರ ಜತೆ ಅತ್ಯಂತ ಒಡನಾಟ ಹೊಂದಿದ್ದರು. ಪ್ರಧಾನಿ ಜತೆ ಹೆಚ್.ಡಿ. ದೇವೇಗೌಡರಿಗೆ ಅನ್ಯೋನ್ಯ ಸಂಬಂಧವಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Follow Us:
Download App:
  • android
  • ios