Asianet Suvarna News Asianet Suvarna News

Rajasthan Political Crisis: ಗೆಹ್ಲೋಟ್‌ಗೆ ವೀಕ್ಷಕರ ಕ್ಲೀನ್‌ಚಿಟ್‌; 3 ನಿಷ್ಠರಿಗೆ ಶೋಕಾಸ್‌ ನೋಟಿಸ್‌

ರಾಜಸ್ಥಾನ ರಾಜಕೀಯ ದಿನಕ್ಕೊಂದು ಟ್ವಿಸ್ಟ್‌ ತೆಗೆದುಕೊಳ್ಳುತ್ತಿದ್ದು, ಅಶೋಕ್‌ ಗೆಹ್ಲೋಟ್‌ ನಿಷ್ಠರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಗೆಹ್ಲೋಟ್‌ ಅವರ 3 ನಿಷ್ಠರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದ್ದರೂ, ಗೆಹ್ಲೋಟ್‌ ಮೇಲೆ ಹೊಣೆ ಹೊರಿಸಲು ಆಗದು ಎಂದು ಸೋನಿಯಾ ಗಾಂಧಿಗೆ ನೀಡಿರುವ ವರದಿಯಲ್ಲಿ ವೀಕ್ಷಕ ಖರ್ಗೆ, ಮಾಕನ್‌ ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ashok gehlot gets clean chit in written report to sonia gandhi show cause notice to his loyalists ash
Author
First Published Sep 28, 2022, 10:04 AM IST

ಜೈಪುರ/ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಪಕ್ಷದ ವೀಕ್ಷಕರು ಮಂಗಳವಾರ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ, ಬಂಡಾಯದ ನೇತೃತ್ವ ವಹಿಸಿದ್ದ ಅಶೋಕ್‌ ಗೆಹ್ಲೋಟ್‌ಗೆ ಕ್ಲೀನ್‌ಚಿಟ್‌ ನೀಡಲಾಗಿದ್ದು, ಅವರ ಮೂವರು ನಿಷ್ಠರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಹಾಗೂ 10 ದಿನದಲ್ಲಿ ಉತ್ತರಿಸುವಂತೆ ನೋಟಿಸ್‌ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ ಮಾಕನ್‌ ಸಲ್ಲಿಸಿರುವ ವರದಿಯಲ್ಲಿ ಅಶೋಕ್‌ ಗೆಹ್ಲೋಟ್‌ಗೆ ಕ್ಲೀನ್‌ಚಿಟ್‌ ನೀಡಿರುವುದು, ಅವರನ್ನೂ ಈಗಲೂ ಪಕ್ಷ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಂಧಾನ ಸೂತ್ರದ ಭಾಗವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಎ.ಕೆ. ಆ್ಯಂಟನಿ, ಸುಶೀಲ್‌ ಕುಮಾರ್‌ ಶಿಂಧೆ ಮುಂತಾದ ನಾಯಕರ ಜತೆ ಮಾತುಕತೆ ನಡೆಸಿದ್ದು, ರಾಜಸ್ಥಾನ ಬಿಕ್ಕಟ್ಟು ಬಗೆಹರಿಸಲು ಅವರನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪಕ್ಷದ ವೀಕ್ಷಕರು ಸೋನಿಯಾಗೆ ಸಲ್ಲಿಸಿದ ವರದಿಯಲ್ಲಿ, ಅಶೋಕ್‌ ಗೆಹ್ಲೋಟ್‌ ಆಪ್ತರಾದ ಸಚಿವ ಶಾಂತಿ ಧಾರಿವಾಲ್‌, ಮುಖ್ಯ ವಿಪ್‌ ಮಹೇಶ್‌ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಹಾಗೂ ಇದರ ಬೆನ್ನಲ್ಲೇ ಅವರಿಗೆ ಪಕ್ಷವು ನೋಟಿಸ್‌ ಜಾರಿ ಮಾಡಿದೆ. ಶಾಸಕಾಂಗ ಪಕ್ಷದ ಸಭೆಗೆ ಪರ್ಯಾಯವಾಗಿ ಸಭೆ ಆಯೋಜಿಸುವ ಮೂಲಕ, ಈ ಮೂವರು ನಾಯಕರು ಗಂಭೀರ ಲೋಪ ಎಸಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಸಭೆಯು ಅಶೋಕ್‌ ಗೆಹ್ಲೋಟ್‌ ಅವರಿಗೆ ಅರಿವಿದ್ದೇ ನಡೆದಿದೆ ಎಂದು ವರದಿಯಲ್ಲಿ ಹೇಳಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಶಿಫಾರಸು ಮಾಡಿಲ್ಲ.

ಇದನ್ನು ಓದಿ: Rajasthan CLP Meet: ತುರ್ತು ಸಭೆ ಕರೆದ ಕಾಂಗ್ರೆಸ್‌; ಇಂದು ರಾಜಸ್ಥಾನ ನೂತನ ಸಿಎಂ ಆಯ್ಕೆ..?

ಸೋನಿಯಾ ಗಾಂಧಿಗೆ ಕರೆ:
ಈ ನಡುವೆ ಅಶೋಕ್‌ ಗೆಹ್ಲೋಟ್‌ ಮಂಗಳವಾರ ಜೈಪುರದಲ್ಲಿ ತಮ್ಮ ಕೆಲ ಆಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿವರ ಹೊರಬಿದ್ದಿಲ್ಲವಾದರೂ, ಆಪ್ತರ ವಿರುದ್ಧ ಶಿಸ್ತು ಕ್ರಮ ಜಾರಿಯಾದರೆ ಮುಂದಿನ ನಡೆ ಸೇರಿದಂತೆ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯ ಬಳಿಕ ಗೆಹ್ಲೋಟ್‌, ಸ್ವತಃ ಸೋನಿಯಾ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಹಾಗೂ ಈ ವಿಷಯದಲ್ಲಿ ತಮ್ಮ ತಪ್ಪಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ತಾವು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಚಿನ್‌ ಪೈಲಟ್‌ ದಿಲ್ಲಿಗೆ:
ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸಿಎಂ ಸ್ಥಾನದ ಆಕಾಂಕ್ಷಿ ಸಚಿನ್‌ ಪೈಲಟ್‌ ದೆಹಲಿಗೆ ಆಗಮಿಸಿದ್ದಾರೆ. ಯಾವುದೇ ಹಿರಿಯ ನಾಯಕರೊಂದಿಗೆ ಅವರ ಸಭೆ ನಿಗದಿಯಾಗಿಲ್ಲವಾದರೂ ದಿಢೀರ್‌ ದಿಲ್ಲಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ನಡುವೆ ಗೆಹ್ಲೋಟ್‌ ವಿರುದ್ಧ ತಾವು ದೂರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಲೂ ಗೆಹ್ಲೋಟ್‌ ಅಧ್ಯಕ್ಷ ರೇಸಲ್ಲಿ..?
ಬಂಡಾಯದ ಕಾರಣ ಗಾಂಧಿ ಕುಟುಂಬದ ಅಸಮಾಧಾನಕ್ಕೆ ತುತ್ತಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಾಂಗ್ರೆಸ್‌ ಅಧ್ಯಕ್ಷ ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ ಎಂಬುದು ನಿರಾಧಾರ. ಅವರು ಈಗಲೂ ಕಣದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ಬಿಕ್ಕಟ್ಟು ಸೃಷ್ಟಿಸಿರುವ 90 ಶಾಸಕರು ಗೆಹ್ಲೋಟ್‌ ಬೆಂಬಲಿಗರಾದ್ದರಿಂದ, ಕಾಂಗ್ರೆಸ್‌ ಹೈಕಮಾಂಡ್‌ ಗೆಹ್ಲೋಟ್‌ ವಿರುದ್ಧ ತಿರುಗಿ ಬಿದ್ದಿದೆ. ಅವರನ್ನು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲ್ಲ ಎಂದು ಸುದ್ದಿಯಾಗಿತ್ತು.

ಇದನ್ನೂ ಓದಿ: ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲ್ಲ: ಗೆಹ್ಲೋಟ್‌ಗೆ ರಾಗಾ ಸ್ಪಷ್ಟನೆ

ಆದರೆ, ಗೆಹ್ಲೋಟ್‌ ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ಖಚಿತಪಡಿಸಿವೆ ಎಂದು ಟಿವಿ ಚಾನೆಲ್‌ ಒಂದು ವರದಿ ಮಾಡಿದೆ. ಬಿಕ್ಕಟ್ಟಿನ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಗೆಹ್ಲೋಟ್‌ ಫೋನ್‌ನಲ್ಲಿ ಚರ್ಚೆ ನಡೆಸಿದ್ದಾರೆ.

Follow Us:
Download App:
  • android
  • ios