ಗಾಂಧಿ ಕುಟುಂಬದಿಂದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲ್ಲ: ಗೆಹ್ಲೋಟ್‌ಗೆ ರಾಗಾ ಸ್ಪಷ್ಟನೆ
Congress National Presidential Election: ಕಾಂಗ್ರೆಸ್ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಚರ್ಚೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಡೆಯ ಕ್ಷಣದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುತ್ತಾರೆ ಎಂಬ ಊಹಾಪೋಹಗಳಿಗೆ ಅಶೋಕ್ ಗೆಹ್ಲೋಟ್ ಸ್ಪಷ್ಟನೆ ನೀಡಿದ್ದಾರೆ. ಗಾಂಧಿ ಕುಟುಂಬದ ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯಾಧ್ಯಕ್ಷರ ಚುನಾವಣಾ ದಿನಾಂಕ ಇನ್ನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದ್ದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಜತೆಗೆ ಗಾಂಧಿ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂದು ಗೆಹ್ಲೋಟ್ ರಾಹುಲ್ ಗಾಂಧಿ ಮಾತುಕತೆಯ ನಂತರ ಸ್ಪಷ್ಟಪಡಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವ ಇರಾದೆ ಅಶೋಕ್ ಗೆಹ್ಲೋಟ್‌ಗೆ ಇತ್ತಾದರೂ ಒಂದು ವ್ಯಕ್ತಿಗೆ ಒಂದೇ ಹುದ್ದೆ ಎಂಬುದನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದ ನಂತರ ಗೆಹ್ಲೋಟ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಹಲವು ವರ್ಷಗಳಿಂದ ಈ ಅವಕಾಶಕ್ಕಾಗಿ ಕಾಯುತ್ತಿರುವ ಸಚಿನ್ ಪೈಲಟ್ ಇದೀಗ ಕೇಂದ್ರ ಕಾಂಗ್ರೆಸ್ ನಾಯಕರ ಜತೆ ಸಂಪರ್ಕದಲ್ಲಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಅಶೋಕ್ ಗೆಹ್ಲೋಟ್ ಎದುರು ಶಶಿ ತರೂರ್ ಕೂಡ ನಿಲ್ಲುವ ಸಾಧ್ಯತೆಯಿದೆ. ಈ ಬಗ್ಗೆ ಪರೋಕ್ಷವಾಗಿ ತರೂರ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಗಾಂಧಿ ಕುಟುಂಬ ಸ್ಪರ್ಧಿಸಲ್ಲ:
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ. ಕಡೇ ಕ್ಷಣದಲ್ಲಿ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಅವರೇ ಚುನಾವಣೆಗೆ ನಿಲ್ಲಲಿದ್ದಾರ ಎಂಬ ಸಂಶಯಗಳು ಈ ಹಿಂದೆ ಮೂಡಿದ್ದವು. ಇದೀಗ ಊಹಾಪೋಹಗಳಿಗೆ ಅಂತ್ಯ ಹಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಾಂಧಿ ಕುಟುಂಬದ ಸದಸ್ಯರ್ಯಾರೂ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗುವುದಿಲ್ಲ ಎಂದಿದ್ದಾರೆ. "ನಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪದೇ ಪದೇ ರಾಹುಲ್ ಗಾಂಧಿಯವರನ್ನು ಮನವಿ ಮಾಡಿದ್ದೆ. ಆದರೆ ಅವರು ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿಲ್ಲ. ಗಾಂಧಿ ಕುಟುಂಬದ ಯಾವ ಸದಸ್ಯರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಮುಂದಿನ ಅಧ್ಯಕ್ಷರಾಗುವುದಿಲ್ಲ," ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಅಶೋಕ್ ಗೆಹ್ಲೋಟ್ ಮಾಹಿತಿ ನೀಡಿದ್ಧಾರೆ.
ಭಾರತ್ ಜೋಡೊ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರನ್ನು ಕೇರಳದಲ್ಲಿ ಅಶೋಕ್ ಗೆಹ್ಲೋಟ್ ಶುಕ್ರವಾರ ಭೇಟಿಯಾದರು. ಭೇಟಿಯ ಬಳಿಕ ಮಾತನಾಡಿದ ಅವರು, ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಸದೃಢ ವಿರೋಧ ಪಕ್ಷದ ಅಗತ್ಯವಿದೆ. ಪಕ್ಷವನ್ನು ಬಲಪಡಿಸಲು ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಶೀಘ್ರದಲ್ಲೇ ನಾಮಪತ್ರ ಸಲ್ಲಿಸುವುದಾಗಿ ಗೆಹ್ಲೋಟ್ ತಿಳಿಸಿದ್ದಾರೆ.
ಶಶಿ ತರೂರ್ ಮತ್ತು ಅಶೋಕ್ ಗೆಹ್ಲೋಟ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇವರನ್ನು ಹೊರತುಪಡಿಸಿ ಇನ್ಯಾವುದಾದರೂ ನಾಯಕರು ಚುನಾವಣೆಗೆ ನಿಲ್ಲುತ್ತಾರೆಯೇ ಎಂಬ ಮಾಹಿತಿ ಸದ್ಯಕ್ಕೆಲಭ್ಯವಾಗಿಲ್ಲ. ಬಿಜೆಪಿ ಸೇರಿದಂತೆ ಕಾಂಗ್ರೆಸ್ಸೇತರ ಪಕ್ಷಗಳು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ನಾಟಕ ಎಂದು ಕರೆದಿದೆ. ಗೆಹ್ಲೋಟ್ ಅಧ್ಯಕ್ಷರಾದರೂ ಪಕ್ಷ ಯಾರು ನಡೆಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಪರೋಕ್ಷವಾಗಿ ಗೆಹ್ಲೋಟ್ ನೆಪಮಾತ್ರಕ್ಕೆ ಎಂದು ಮೂದಲಿಸಿದ್ದಾರೆ. ರಾಹುಲ್ ಗಾಂಧಿಯವರ ಕೈಗೊಂಬೆಯಾಗಿ ಅಶೋಕ್ ಗೆಹ್ಲೋಟ್ ಇರಲಿದ್ದಾರೆ ಎಂದು ರಾಜಕೀಯ ಪಕ್ಷಗಳು ಚುನಾವಣೆಯನ್ನು ಹೀಯಾಳಿಸುತ್ತಿವೆ.
ಇದನ್ನೂ ಓದಿ: 2 ದಶಕದ ಬಳಿಕ Congress ಚುಕ್ಕಾಣಿ ಗಾಂಧಿಯೇತರಿಗೆ..? ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಗೆಹ್ಲೋಟ್ ಷರತ್ತು..!
ಉದಯ್‌ಪುರದಲ್ಲಿ ಮಂಥನ ಸಮಾವೇಶವಾದ ನಂತರ ಗಾಂಧಿಯೇತರ ಅಧ್ಯಕ್ಷ ಆಯ್ಕೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಜತೆಗೆ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಜವಾಬ್ದಾರಿ ಎಂಬ ನಿರ್ಧಾರ ಮಾಡಲಾಗಿತ್ತು. ಇದೇ ಕಾರಣವನ್ನು ನೀಡಿರುವ ರಾಹುಲ್ ಗಾಂಧಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಗೆಹ್ಲೋಟ್ ಅವರಿಗೆ ತಿಳಿಸಿದ್ದಾರೆ. ಪಕ್ಷ ಒಕ್ಕೊರಲಿನಿಂದತೆಗೆದುಕೊಂಡ ನಿರ್ಣಯವನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ. ಮುಖ್ಯಮಂತ್ರಿ ಸ್ಥಾನದಿಂದ ನೀವು ಕೆಳಗಿಳಿಯಲೇಬೇಕು ಎಂದು ರಾಹುಲ್ ಗಾಂಧಿ ಗೆಹ್ಲೋಟ್‌ಗೆ ಕೇರಳ ಭೇಟಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜೊತೆಗೆ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದಲ್ಲೂ ಮುಂದುವರೆಯುವ ಮಾತುಗಳನ್ನಾಡಿದ್ದರು.
ಇದನ್ನೂ ಓದಿ: ಅಶೋಕ್ ಗ್ಲೆಹೋಟ್ ಕಾಂಗ್ರೆಸ್ ಅಧ್ಯಕ್ಷರಾದಲ್ಲಿ, ಸಿಎಂ ಸ್ಥಾನಕ್ಕೆ ರಾಜೀನಾಮೆ?