ಸಿದ್ದರಾಮಯ್ಯನವರು ಅನಿವಾರ್ಯ ಅಲ್ಲ ಎನ್ನುವುದನ್ನು ನಾನು ಕೇಳಿಲ್ಲ. ಕಾಂಗ್ರೆಸ್ ಪಕ್ಷದ ಶಕ್ತಿಯೇ ನಾಯಕತ್ವ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಮಡಿಕೇರಿ (ನ.01): ಕಾಂಗ್ರೆಸ್ ಪಕ್ಷದ ಶಕ್ತಿಯೇ ನಾಯಕತ್ವ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಅಥವಾ ಅಲ್ಲ ಎನ್ನುವ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಚರ್ಚೆಯನ್ನು ನಾನೆಲ್ಲೂ ಕೇಳಿಲ್ಲ. ಸಿದ್ದರಾಮಯ್ಯನವರು ಅನಿವಾರ್ಯ ಅಲ್ಲ ಎನ್ನುವುದನ್ನು ನಾನು ಕೇಳಿಲ್ಲ ಎಂದು ಹೇಳುವ ಮೂಲಕ ಪೊನ್ನಣ್ಣ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಎಂಬ ಸಂದೇಶ ರವಾನಿಸಿದರು.
ಡಿ.ಕೆ. ಶಿವಕುಮಾರ್, ಪರಮೇಶ್ವರ್ ಮತ್ತು ಜಾರಕಿಹೊಳಿ ಎಲ್ಲರೂ ಮುಖ್ಯವೇ. ಕಾಂಗ್ರೆಸ್ ಪಕ್ಷದ ಶಕ್ತಿಯೇ ನಮ್ಮ ನಾಯಕತ್ವ. ಅವರೆಲ್ಲರಿಂದಾಗಿಯೇ ಕಾಂಗ್ರೆಸ್ ಭದ್ರವಾಗಿದೆ. ಎಲ್ಲ ವರ್ಗಗಳಿಂದ ಉತ್ತಮ ನಾಯಕರನ್ನು ಕಾಣುವುದಕ್ಕೆ ಸಾಧ್ಯವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಮುಂದೆಯೂ ಕೂಡ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು. ನವೆಂಬರ್ ಕ್ರಾಂತಿ ಆಗುತ್ತದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಜನರಿಗೆ ಕೊಟ್ಟ ಆಶ್ವಾಸನೆಗಳ ಜಾರಿಮಾಡುತ್ತಿದೆ. ಸಿದ್ದರಾಮಯ್ಯನವರು ಸರ್ಕಾರವನ್ನು ಚೆನ್ನಾಗಿ ನಡೆಸುತ್ತಿದ್ದಾರೆ.
ಆದರೆ ಸಚಿವ ಸಂಪುಟ ಪುನರ್ ರಚನೆ ಆಗುತ್ತದೆ. ಬಹುಶಃ ಇದನ್ನೇ ನವೆಂಬರ್ ಕ್ರಾಂತಿ ಎನ್ನುತ್ತಿರಬಹುದು ಎಂದು ಹೇಳಿದರು. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಬದಲಾಗುತ್ತಾರಾ ಅಥವಾ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆ ಅಪ್ರಸ್ತುತ. ಒಮ್ಮೆ ಶಾಸಕಾಂಗ ಸಭೆಯಲ್ಲಿ ನಿರ್ಧಾರ ಆದ ಮೇಲೆ ಆಯಿತಲ್ವಾ. ಮತ್ತೆ ಶಾಸಕಾಂಗ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದರೆ ಆಗ ಈ ಚರ್ಚೆ ಆಗಬಹುದು ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡ ನೆಡುವ ಕಾರ್ಯಕ್ರಮದ ಮೂಲಕ ನೆಲ ಜಲ ಸಂರಕ್ಷಣೆಗೆ ಚೇನಂಡ ಕುಟುಂಬಸ್ಥರು ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಇಲ್ಲಿಗೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ಕೊಕೇರಿ ಗ್ರಾಮದ ಚೇನಂಡ ಕುಟುಂಬದವರು ಮುಂಬರುವ ಚೇನಂಡ ಕಪ್ ಕೊಡವ ಹಾಕಿ ಪಂದ್ಯಾವಳಿಯ ಪ್ರತಿಯೊಂದು ಗೋಲಿಗೂ ಒಂದು ಗಿಡ ನೆಡುವ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡಗಿನಲ್ಲಿ ಹಾಕಿ ಉತ್ಸವ ಗಿನ್ನಿಸ್ ದಾಖಲೆ ಮಾಡಿದೆ. ಹಾಕಿ ಕ್ರೀಡೆ ಉತ್ತೇಜನದೊಂದಿಗೆ ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು. ಈ ಬಾರಿಯ ಹಾಕಿ ಉತ್ಸವ ವಿನೂತನ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಮತ್ತಷ್ಟು ದಾಖಲೆಗಳೊಂದಿಗೆ ಹೊರಹೊಮ್ಮಲಿದೆ. ನ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಗೋ ಬಿಡುಗಡೆ ಮಾಡುವರು ಎಂದ ಅವರು, ಕ್ರೀಡಾಕೂಟಕ್ಕೆ ಅಗತ್ಯ ನೆರವನ್ನು ನೀಡುವುದಾಗಿ ಹೇಳಿದರು. ಕ್ರೀಡಾ ಸಮಿತಿಯ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಶಾಸಕರೊಂದಿಗೆ ಮಾಹಿತಿ ಹಂಚಿಕೊಂಡರು.
