ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಹಾಗೂ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಅವರು ಶುಕ್ರವಾರ ವಿಧಾನಸೌಧದಲ್ಲಿ ವಿಧಾನಸಭೆ ಪ್ರ​ತಿ​ಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಬೆಂಗಳೂರು (ಫೆ.18): ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಹಾಗೂ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಅವರು ಶುಕ್ರವಾರ ವಿಧಾನಸೌಧದಲ್ಲಿ ವಿಧಾನಸಭೆ ಪ್ರ​ತಿ​ಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್‌ ಪಕ್ಷವು ಅರಸೀಕೆರೆಯಲ್ಲಿ ಬೇರೊಬ್ಬರಿಗೆ ಟಿಕೆಟ್‌ ನೀಡಲು ನಿಶ್ಚಯಿಸಿರುವುದರಿಂದ ಕಾಂಗ್ರೆಸ್‌ ಕದ ತಟ್ಟಿರುವ ಶಿವಲಿಂಗೇಗೌಡ ಅವರು ಶುಕ್ರವಾರ ಸಿದ್ದರಾಮಯ್ಯ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. 

ಮೂಲಗಳ ಪ್ರಕಾರ ಅಧಿವೇಶನದ ಬಳಿಕ ಬೃಹತ್‌ ಸಾರ್ವಜನಿಕ ಸಮಾವೇಶ ನಡೆಸಿ ಶಿವಲಿಂಗೇಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೊಳ್ಳೇಗಾಲದಲ್ಲಿ ಎರಡು ದಶಕಗಳ ಹಿಂದೆ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಹಾಗೂ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಜಿ.ಎನ್‌.ನಂಜುಂಡಸ್ವಾಮಿ ಅವರೂ ಕಾಂಗ್ರೆಸ್‌ ಟಿಕೆಟ್‌ ಕೇಳಿಕೊಂಡು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಕಳೆದ ಬಾರಿ ಕೊಳ್ಳೆಗಾಲದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ನಂಜುಂಡಸ್ವಾಮಿ ಮೂರನೇ ಸ್ಥಾನ ಗಳಿಸಿದ್ದರು. 

ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್‌: ಸಿದ್ದರಾಮಯ್ಯ

ಬಿಎಸ್‌ಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಎನ್‌.ಮಹೇಶ್‌ ಪ್ರಸ್ತುತ ಬಿಜೆಪಿ ಸೇರಿರುವುದರಿಂದ ಟಿಕೆಟ್‌ ವಂಚಿತರಾಗುವ ಆತಂಕದಲ್ಲಿ ನಂಜುಂಡಸ್ವಾಮಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಎ.ಆರ್‌.ಕೃಷ್ಣ ಮೂರ್ತಿ ಇನ್ನೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಕೃಷ್ಣಮೂರ್ತಿ ಅವರಿಗೆ ತಪ್ಪಿಸಿ ನಂಜುಂಡಸ್ವಾಮಿ ಅವರಿಗೆ ಟಿಕೆಟ್‌ ನೀಡುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಪಕ್ಕಾ: ಜೆಡಿಎಸ್‌ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಖಚಿತ. 100ಕ್ಕೆ 100ರಷ್ಟುಅವರು ಕಾಂಗ್ರೆಸ್‌ಗೆ ಬರುತ್ತಾರೆ. ಅಧಿವೇಶನ ಮುಗಿದ ಬಳಿಕ ಯಾವಾಗ ಬೇಕಾದರೂ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವಿಶ್ವಾಸ ವ್ಯಕ್ತಪಡಿಸಿದರು. ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಡಿಸಿಸಿ ಬ್ಯಾಂಕ್‌ ಹಗರಣದ ಪಿತಾಮಹ ಸಿದ್ದರಾಮಯ್ಯ’ ಎಂಬ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿಕೆಗೆ ಕಿಡಿ ಕಾರಿದ ಅವರು, ಇಂತಹ ಚಿಲ್ಲರೆ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. 

ಆತ ಈ ಹಿಂದೆ ನನ್ನ ಅಭಿಮಾನಿಯಾಗಿದ್ದ. ಈಗ ವಿರೋಧಿಯಾಗಿದ್ದಾನೆ. ರಾಜಕೀಯದಲ್ಲಿ ಯಾರು ಶಾಶ್ವತ ಮಿತ್ರರು ಅಲ್ಲ, ಶತ್ರುಗಳು ಅಲ್ಲ ಎಂದು ಹೇಳಿದರು. ಬಳಿಕ, ವಿಜಯಪುರದಲ್ಲಿ ಮಾತನಾಡಿ, ಟಿಪ್ಪು ಸುಲ್ತಾನ್‌ ಆರಾಧನೆ ಮಾಡುವವರಿಗೆ ಮತ ಹಾಕಬೇಡಿ ಎಂಬ ಅಮಿತ್‌ ಶಾ ಮಾತಿಗೆ ತಿರುಗೇಟು ನೀಡಿದರು. ನಾಥೋರಾಮ್‌ ಗೋಡ್ಸೆ ಮತ್ತು ಸಾವರ್ಕರ್‌ ಪೂಜೆ ಮಾಡುವವರು ನಮಗೇನು ಪಾಠ ಹೇಳಿಕೊಡುತ್ತಾರೆ?. ರಾಷ್ಟ್ರಪಿತ ಮಹಾತ್ಮಾ ಗಾಂಧಿ ​ಅವರನ್ನು ಕೊಂದವರನ್ನು ಪೂಜಿಸುವ ಪಕ್ಷದ ಬಗ್ಗೆ ಏನು ಮಾತನಾಡಬೇಕು? 

ಅಶ್ವತ್ಥ್‌ ಹೇಳಿಕೆ ಸರಿಯೆಂದು ಮೋದಿ, ಶಾ ಹೇಳಲಿ: ಸಿದ್ದರಾಮಯ್ಯ

ಸಾವರ್ಕರ್‌, ಬ್ರಿಟಿಷ್‌ ಸರ್ಕಾರದಲ್ಲಿ ಪೆನ್ಷನ್‌ ತೆಗೆದುಕೊಳ್ಳುತ್ತಿದ್ದರು. ಅವರನ್ನು ಇವರು ಪೂಜಿಸುತ್ತಾರೆ. ಅವರ ಬಗ್ಗೆ ನಾವು ಮಾತನಾಡಲು ಆಗುತ್ತಾ ಎಂದು ಪ್ರಶ್ನಿಸಿದರು. ಟಿಪ್ಪು, ಓರ್ವ ದೇಶಪ್ರೇಮಿ ಎಂದು ನಂಬಿಕೆ ಇಟ್ಟುಕೊಂಡಿದ್ದೇವೆ. ಅವರ ಜೊತೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೇಬಾಯಿ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಎಲ್ಲರೂ ದೇಶಪ್ರೇಮಿ ಆಗಿದ್ದಾರೆ. ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ನಾವು ಶ್ರದ್ಧೆಯಿಂದ, ಭಕ್ತಿಯಿಂದ ಗೌರವಿಸುತ್ತೇವೆ. ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿ ಮಾಡಿದವನು ನಾನು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾ​ಧಿಕಾರ ರಚಿಸಿ .262 ಕೋಟಿ ನೀಡಿದವನು ನಾನು ಎಂದರು.