ಧರ್ಮದ ಆಧಾರದಲ್ಲಿ ವ್ಯಾಪಾರಕ್ಕೆ ಕಡಿವಾಣ ಹಾಕುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ತಾಕತ್ತಿದ್ದರೆ ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಲಿ. ಪೆಟ್ರೋಲ್, ಡೀಸೆಲ್ ಎಲ್ಲಿಂದ ಬರುತ್ತದೆ? ವಿಪ್ರೋ ಯಾರದ್ದು ಎಂದು ಹರಿಹಾಯ್ದರು.
ಬೆಂಗಳೂರು (ಮಾ.27): ಧರ್ಮದ ಆಧಾರದಲ್ಲಿ ವ್ಯಾಪಾರಕ್ಕೆ ಕಡಿವಾಣ ಹಾಕುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ (Priyank Kharge), ತಾಕತ್ತಿದ್ದರೆ ಮುಸ್ಲಿಂ ರಾಷ್ಟ್ರಗಳ (Islamic Countries) ಜೊತೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಲಿ. ಪೆಟ್ರೋಲ್, ಡೀಸೆಲ್ ಎಲ್ಲಿಂದ ಬರುತ್ತದೆ? ವಿಪ್ರೋ ಯಾರದ್ದು ಎಂದು ಹರಿಹಾಯ್ದರು. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕೋಮಿನವರ ವ್ಯಾಪಾರಕ್ಕೆ ಕಡಿವಾಣ ಹಾಕಲಾಗುತ್ತಿದೆ. ಜಾತಿ, ಧರ್ಮದ ರಾಜಕಾರಣ ಮಾಡುತ್ತಿದ್ದಾರೆ. ಹಸಿವಿಗೆ ಯಾವ ಜಾತಿ, ಧರ್ಮವಿದೆ?
ಪೆಟ್ರೋಲಿಯಂ ಉತ್ಪನ್ನಗಳನ್ನು ಇಸ್ಲಾಂ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವಿಪ್ರೋದಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ? ವಿಪ್ರೋ ಯಾರದ್ದು ಎಂದು ಪ್ರಶ್ನಿಸಿದರು. ಹಿಜಾಬ್, ಹಿಂದೂ-ಮುಸ್ಲಿಂ, ಭಗವದ್ಗೀತೆ ಹೆಸರಿನಲ್ಲಿ ರಾಜ್ಯದಲ್ಲಿ ಸೌಹಾರ್ದತೆ ಕದಡಿದ್ದಾರೆ. ಕರ್ನಾಟಕದಂತೆ ಆಗಬೇಕು ಎಂದು ಉತ್ತರ ಪ್ರದೇಶದವರು ಬಯಸುತ್ತಿದ್ದಾರೆ. ಅಲ್ಲಿನವರು ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಉತ್ತರ ಪ್ರದೇಶ ಮಾದರಿ ಮಾಡಲು ಹೊರಟಿದ್ದಾರೆ. ರಾಜ್ಯಕ್ಕೆ ಎರಡು ವರ್ಷದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹೀಗಾದರೆ ಯಾರು ಮುಂದೆ ಬರುತ್ತಾರೆ ಎಂದು ತರಾಟೆ ತೆಗೆದುಕೊಂಡರು.
ದಿ ಕಾಶ್ಮೀರ್ ಫೈಲ್ಸ್ ಬಿಜೆಪಿಯ ಟೂಲ್ ಕಿಟ್: ಖರ್ಗೆ ಗಂಭೀರ ಆರೋಪ
ಉದ್ಯೋಗ ಎಲ್ಲಿ ಸೃಷ್ಟಿಯಾಗಿದೆ: ಉದ್ಯಮಶೀಲತಾ ಯೋಜನೆಯಡಿ ಓರ್ವ ನರ್ಸ್, ವೈದ್ಯ, 16 ಜನ ಮನೆ ಕೆಲಸದವರನ್ನು ಅಬುಧಾಬಿಗೆ ಕಳುಹಿಸಲಾಗಿದೆ. ಇದಕ್ಕಾಗಿ 6.5 ಕೋಟಿ ರು. ಖರ್ಚು ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನೀಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಉದ್ಯೋಗ ಸೃಷ್ಟಿಬಗ್ಗೆ ಸರಿಯಾದ ಮಾಹಿತಿಯಿಲ್ಲ ಎಂದು ವ್ಯಂಗ್ಯವಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ಶಾಸಕರ ಮಕ್ಕಳು ಇಲ್ಲ. ಧರ್ಮ ಪ್ರಚಾರವನ್ನೂ ಮಾಡುತ್ತಿಲ್ಲ. ವಿದೇಶಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಬಡವರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಗೋ ರಕ್ಷಣೆ ಮಾಡಬೇಕಾ? ತಿಲಕ ಇಟ್ಟುಕೊಂಡು ಗಲಭೆ ಮಾಡಲು ಹೋಗಬೇಕಾ ಎಂದು ಖಂಡಿಸಿದರು. ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, 8.5 ಲಕ್ಷ ಜನ ಭಾರತದ ನಾಗರಿಕರಾಗಿ ಇರುವುದಿಲ್ಲ ಎಂದು ದೇಶ ತ್ಯಜಿಸಿದ್ದಾರೆ. ಭಾರತವು ದುಬೈ ಜೊತೆ 26.5 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತಿದೆ. ಕತಾರ್ ಜೊತೆ 11.5 ಬಿಲಿಯನ್ ಡಾಲರ್, ಜೋರ್ಡಾನ್ ಜೊತೆ 1.7 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತಿದೆ. ಇವೆಲ್ಲ ಏನು ಹಿಂದೂ ರಾಷ್ಟ್ರಗಳೇ ಎಂದು ವಾಗ್ದಾಳಿ ನಡೆಸಿದರು.
ಗಂಗಾಕಲ್ಯಾಣ ಯೋಜನೆಯಲ್ಲಿ 130 ಕೋಟಿ ಅಕ್ರಮ: ಕಾಶ್ಮೀರ ಫೈಲ್ಸ್ ಸಿನಿಮಾ ತೋರಿಸಿ ರಾಜ್ಯದಲ್ಲಿ ಆಗುತ್ತಿರುವ ಅಕ್ರಮಗಳನ್ನು ಮುಚ್ಚಿ ಹಾಕಲು ಬಿಜೆಪಿ ಯತ್ನಿಸುತ್ತಿದೆ. ಗಂಗಾಕಲ್ಯಾಣ ಯೋಜನೆಯಡಿ ನೀಡಿರುವ ಗುತ್ತಿಗೆಯಲ್ಲಿ 130 ಕೋಟಿ ರು.ಗಳ ವ್ಯಾಪಕ ಅವ್ಯವಹಾರ ನಡೆದಿದೆ. ದಲಿತರ ಯೋಜನೆಯಲ್ಲಿ ಲೂಟಿ ಮಾಡಿ ಅದನ್ನು ಮರೆಮಾಚಲು ಕಾಶ್ಮೀರ ಫೈಲ್ಸ್, ಹಿಜಾಬ್, ಕೇಸರಿ ಶಾಲು ತಂದು ಧರ್ಮ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
Karnataka Politics ಬಿಜೆಪಿ, ಸಂಘ ಪರಿವಾರದ ದೇಶಭಕ್ತಿ ನಕಲಿ, 1930ರ ದಾಖಲೆ ತೆಗೆದ ಪ್ರಿಯಾಂಕ್ ಖರ್ಗೆ
ಗಂಗಾಕಲ್ಯಾಣ ಯೋಜನೆಯಡಿ ಅಕ್ರಮವಾಗಿ ಗುತ್ತಿಗೆದಾರರಿಗೆ ವಹಿವಾಟಿಗಿಂತ ದುಪ್ಪಟ್ಟು ಮೊತ್ತದ ಗುತ್ತಿಗೆ ನೀಡಲಾಗಿದೆ. ಜತೆಗೆ ಕಳೆದ ವರ್ಷಕ್ಕಿಂತ ಬೋರ್‌ವೆಲ್ ಕೊರೆಯುವ ದರ, ಪೈಪು ಅಳವಡಿಕೆಯನ್ನು ಏಕಾಏಕಿ ದುಪ್ಪಟ್ಟು ಮಾಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನೀಡುತ್ತಿರುವ ದರಕ್ಕಿಂತ ದುಪ್ಪಟ್ಟು ದರವನ್ನು ನೀಡಲು ಸಮಾಜ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇದಕ್ಕೆ ಅನುಮೋದನೆ ಕೊಟ್ಟಿರುವ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಸಚಿವರ ರಾಜೀನಾಮೆ ಪಡೆಯಲಾಗದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
