ಕಾಂಗ್ರೆಸ್ ವಿರುದ್ಧ ಮತ್ತೆ ಗುಲಾಂ ನಬಿ ಆಜಾದ್ ಗುಡುಗು
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾದವರಿಗೆ ಕನಿಷ್ಠ ಶೇ.51 ಮಂದಿಯ ಬೆಂಬಲವಾದರೂ ಇರುತ್ತದೆ. ಆದರೆ ನೇಮಕಗೊಂಡು ಅಧ್ಯಕ್ಷರಾಗುವವರಿಗೆ ಶೇ.1ರಷ್ಟು ಬೆಂಬಲ ಇರುವ ಸಾಧ್ಯತೆಯೂ ಕಡಿಮೆ ಎಂದು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.28): ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಕೋರಿ ಇತ್ತೀಚೆಗೆ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ 23 ಮಂದಿ ಪೈಕಿ ಒಬ್ಬರಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮತ್ತೆ ನಾಯಕತ್ವದ ವಿರುದ್ಧ ತೀಕ್ಷ್ಣ ದನಿ ಎತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾದವರಿಗೆ ಕನಿಷ್ಠ ಶೇ.51 ಮಂದಿಯ ಬೆಂಬಲವಾದರೂ ಇರುತ್ತದೆ. ಆದರೆ ನೇಮಕಗೊಂಡು ಅಧ್ಯಕ್ಷರಾಗುವವರಿಗೆ ಶೇ.1ರಷ್ಟು ಬೆಂಬಲ ಇರುವ ಸಾಧ್ಯತೆಯೂ ಕಡಿಮೆ. ಕಾಂಗ್ರೆಸ್ ಪಕ್ಷ ಸಕ್ರಿಯ ಹಾಗೂ ಬಲಿಷ್ಠವಾಗಬೇಕು ಎಂಬ ಇಚ್ಛೆ ಇದ್ದರೆ, ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರನ್ನೂ ಚುನಾವಣೆ ಮೂಲಕ ಆರಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಅಧ್ಯಕ್ಷರ ಆಯ್ಕೆಗೆ ಈ ಬಾರಿ ಕಾಂಗ್ರೆಸ್‌ನಲ್ಲಿ ಚುನಾವಣೆ!
ಪಕ್ಷದ ಆಂತರಿಕ ಕಾರ್ಯನಿರ್ವಹಣೆ ಬಗ್ಗೆ ನೈಜ ಆಸಕ್ತಿ ಇರುವ ಯಾವುದೇ ವ್ಯಕ್ತಿ ಪ್ರತಿಯೊಬ್ಬ ರಾಜ್ಯ ಹಾಗೂ ಜಿಲ್ಲಾಧ್ಯಕ್ಷನೂ ಆಯ್ಕೆಯಾಗಬೇಕು ಎಂದು ಬಯಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಸುಲಭವಾಗಿ ನೇಮಕಗೊಳ್ಳುವ ಸದಸ್ಯರು ನಮ್ಮ ಪ್ರಸ್ತಾವಗಳನ್ನು ವಿರೋಧಿಸುತ್ತಾರೆ. ಸಿಡಬ್ಲ್ಯುಸಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದರೆ ತೊಂದರೆ ಏನು ಎಂದು ಪ್ರಶ್ನಿಸಿದ್ದಾರೆ.
ಪತ್ರಕ್ಕೆ ಸಹಿ ಹಾಕಿದ್ದ ಜಿತಿನ್ ವಿರುದ್ಧ ಶಿಸ್ತು ಕ್ರಮಕ್ಕೆ ಪಟ್ಟು
ನವದೆಹೆಲಿ: ಕಾಂಗ್ರೆಸ್ ನಾಯಕತ್ವದ ವಿರುದ್ಧ ಪತ್ರ ಬರೆದಿದ್ದ 23 ನಾಯಕರ ಪೈಕಿ ಒಬ್ಬರಾಗಿರುವ ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲಾ ಕಾಂಗ್ರೆಸ್ ಘಟಕ ನಿರ್ಣಯ ಅಂಗೀಕರಿಸಿದೆ.
ಅವರು ಸಂಪೂರ್ಣ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ ಎಂದು ದೂರಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನಾಯಕ ಕಪಿಲ್ ಸಿಬಲ್, ಬಿಜೆಪಿ ಮೇಲೆ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಮಾಡಬೇಕೇ ಹೊರತು, ಸ್ವಪಕ್ಷದ ಜಿತಿನ್ ಪ್ರಸಾದ ಮೇಲಲ್ಲ ಎಂದು ಟಾಂಗ್ ನೀಡಿದ್ದಾರೆ.