ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಶಕ್ತಿ ಯೋಜನೆ ಬಗ್ಗೆ ಘೋಷಿಸಿದ್ದಾಗ ವಿರೋಧ ಪಕ್ಷಗಳು ಅದನ್ನು ವಿರೋಧಿಸಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲು ಜಾರಿ ಮಾಡಿದ್ದೇ ಶಕ್ತಿ ಯೋಜನೆಯನ್ನು. ಈಗ ಯೋಜನೆ ಯಶಸ್ವಿಯಾಗಿದ್ದು, ವಿರೋಧ ಪಕ್ಷಗಳಿಗೆ ಸಂಕಟವನ್ನುಂಟು ಮಾಡುತ್ತಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು(ನ.25): ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಶಕ್ತಿ ಯೋಜನೆಯನ್ನು ವಿರೋಧಿಸುವ ಮೂಲಕ ಪ್ರತಿಪಕ್ಷಗಳು ಮಹಿಳಾ ವಿರೋಧಿಗಳಂತೆ ವರ್ತಿಸಿದ್ದರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾರಿಗೆ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಅಡಿಯಲ್ಲಿ 100 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಆಮೂಲಕ ಯೋಜನೆ ಯಶಸ್ವಿಯಾಗಿದೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಶಕ್ತಿ ಯೋಜನೆ ಬಗ್ಗೆ ಘೋಷಿಸಿದ್ದಾಗ ವಿರೋಧ ಪಕ್ಷಗಳು ಅದನ್ನು ವಿರೋಧಿಸಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲು ಜಾರಿ ಮಾಡಿದ್ದೇ ಶಕ್ತಿ ಯೋಜನೆಯನ್ನು. ಈಗ ಯೋಜನೆ ಯಶಸ್ವಿಯಾಗಿದ್ದು, ವಿರೋಧ ಪಕ್ಷಗಳಿಗೆ ಸಂಕಟವನ್ನುಂಟು ಮಾಡುತ್ತಿದೆ. ಆದರೂ, ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಾ ಮಹಿಳಾ ವಿರೋಧಿಗಳಾಗಿದ್ದಾರೆ ಎಂದರು.
ಶಕ್ತಿ ಯೋಜನೆ: 100 ಕೋಟಿ ದಾಟಿದ ಉಚಿತ ಬಸ್ ಪ್ರಯಾಣಿಕರ ಸಂಖ್ಯೆ!
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ 2014ರಿಂದ ಈವರೆಗೆ 13,878 ಮಂದಿ ನಿವೃತ್ತರಾಗಿದ್ದು, ಅವರ ಜಾಗಕ್ಕೆ ಹೊಸ ನೇಮಕಾತಿಯಾಗಿಲ್ಲ. ಇದೀಗ 9 ಸಾವಿರ ಹೊಸ ಸಿಬ್ಬಂದಿ ನೇಮಕಾತಿಗೆ ಚಾಲನೆ ನೀಡಲಾಗಿದೆ. ಅದರ ಜತೆಗೆ 2019ರಿಂದ ಈವರೆಗೆ ಹೊಸ ಬಸ್‌ಗಳನ್ನು ಖರಿದೀಸಿಲ್ಲ. ಇದೀಗ 5,500 ಹೊಸ ಬಸ್‌ಗಳ ಖರೀದಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ನಿಗಮಗಳ ಮೇಲಿನ ಸಾಲದ ಪ್ರಮಾಣವನ್ನು ಕ್ರಮೇಣ ಇಳಿಸಲಾಗುತ್ತಿದೆ. ಒಟ್ಟಾರೆ ರಸ್ತೆ ಸಾರಿಗೆ ಸಂಸ್ಥೆಗೆ ಬಲ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಅನುದಾನ ನೀಡಿ ಎಂದ ಸಚಿವಗೆ ಕಾಲೆಳೆದ ಸಿದ್ದು
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಸಹಕಾರ ನೀಡಿದರೆ, ರಸ್ತೆ ಸಾರಿಗೆ ನಿಗಮಗಳು ಆರ್ಥಿಕವಾಗಿ ಬಲಪಡೆಯುತ್ತವೆ ಎಂದು ತಮ್ಮ ಮಾತನ್ನು ಮುಗಿಸಿ ವಾಪಸು ತಮ್ಮ ಆಸನದತ್ತ ಬಂದರು.
ಶಕ್ತಿ ಯೋಜನೆ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸಿಹಿಸುದ್ದಿ ಕೊಟ್ಟ ಕೆಎಸ್‌ಆರ್‌ಟಿಸಿ
ಆಗ ಅವರನ್ನು ತಡೆದು ನಿಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಎಷ್ಟು ಅನುದಾನ ನೀಡಿದ್ದೇವೆ ಎಂಬುದನ್ನೂ ಹೇಳಿ. ಮುಂದೆ ಸಹಕಾರ ನೀಡಬೇಕು ಎಂದು ಹೇಳಿದರೆ ಏನರ್ಥವಾಗುತ್ತದೆ ಎಂದು ನಗುತ್ತಲೇ ಹೇಳಿದರು.
ಅದಕ್ಕೆ ವಾಪಸು ಡಯಾಸ್ ಬಳಿಗೆ ಬಂದ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನಲ್ಲಿ ಸಾರಿಗೆ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅದರ ಜತೆಗೆ ಬಸ್‌ಗಳ ಖರೀದಿ, ಸಿಬ್ಬಂದಿ ನೇಮಕ ಸೇರಿ ಹಲವು ನೆರವನ್ನೂ ನೀಡಿದ್ದಾರೆ. ಅದನ್ನು ಹೀಗೆಯೇ ಮುಂದುವರಿಸಬೇಕು ಎಂದು ಸಮಜಾಯಿಷಿ ನೀಡಿದರು.
ನಂತರ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಕ್ತಿ ಯೋಜನೆ ಜಾರಿಗೊಳಿಸಿದ ಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳು ಇನ್ನಷ್ಟು ಶಕ್ತಿ ನೀಡಬೇಕು. ಹಾಗೆಯೇ, ನಮ್ಮ ಇಲಾಖೆಗೂ ಹೆಚ್ಚಿನ ಅನುದಾನ ಕೊಡಿ ಎಂದರು.
