ಉಪಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ!
ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಏಕಚಕ್ರಾಧಿಪತ್ಯ ಮತ್ತು ದುರಹಂಕಾರವೇ ಕಾರಣ: ಸಂಗಮೇಶ್ವರ ಕಂಬಾಳಿಮಠ
ಹಾವೇರಿ(ನ.29): ಶಿಗ್ಗಾಂವಿ ಉಪಚುನಾವಣೆ ಸೋಲಿನ ಬಳಿಕ ಬಿಜೆಪಿಯ ಸ್ಥಳೀಯ ಮುಖಂಡರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಸಾಬೀತಾಗಿದೆ. ವಿರೋಧಿ ಚಟುವಟಿಕೆ ಆರೋಪಪಕ್ಕೆ ಇತ್ತೀಚೆಗೆ ಉಚ್ಚಾಟನೆಗೊಂಡಿದ್ದ ಮುಖಂಡರೊಬ್ಬರು ಸೋಲಿಗೆ ಬೊಮ್ಮಾಯಿ ಕಾರಣ ಎಂದು ಹೇಳಿದ್ದರೆ, ಕಂಬಾಳಿಮಠ ಬೆನ್ನಿಗೆ ಚೂರಿ ಹಾಕಿದವರಿಂದಲೇ ಸೋಲಾಯಿತು ಎಂದು ಬೊಮ್ಮಾಯಿ ಬೆಂಬಲಿಗರು ಆರೋಪಿಸುವ ಮೂಲಕ ಪರಸ್ಪರರು ಕಾಲೆಳೆದು ಕೊಳ್ಳುತ್ತಿದ್ದಾರೆ.
ಉಪಚುನಾವಣೆಯಲ್ಲಿ ಪಕ ವಿರೋಧಿ ಚಟುವಟಿಕೆ ಮಾಡಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿ, ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಏಕಚಕ್ರಾಧಿಪತ್ಯ ಮತ್ತು ದುರಹಂಕಾರವೇ ಕಾರಣ. ಇದನ್ನು ಮುಚ್ಚಿ ಹಾಕಲು ಶ್ರೀಕಾಂತ ದುಂಡಿಗೌಡ್ರ ಹಾಗೂ ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ. ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡದ ನಮ್ಮ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿದ್ದಾರೆ. ತಮ್ಮ ಮಗ ಭರತ ಬೊಮ್ಮಾಯಿ ಸೋಲನ್ನು ಸಮಚಿತ್ತದಿಂದ ಸ್ವೀಕರಿಸದೇ, ಪಕ್ಷ ವಿರೋಧಿ ಚಟುವಟಿಕೆ ಮಾಡದ ನಮ್ಮನ್ನು ಉಚ್ಚಾಟಿಸುವ ಮೂಲಕ ಸೇಡಿನ ರಾಜಕಾರಣಕ್ಕೆ ಬೊಮ್ಮಾಯಿ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಭರತ್ ಬೊಮ್ಮಾಯಿ ಮುಂದೆ ಸಿಎಂ ಆಗ್ತಾರಂತೆ..ಶಿಗ್ಗಾಂವಿಯಲ್ಲಿ ಈ ಚರ್ಚೆ ಶುರುವಾಗೋದಕ್ಕೆ ಕಾರಣವೇನು?
ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ, ಮಗನಿಗೆ ಟಿಕೆಟ್ ಕೊಡಿಸಿದರು. ತಾವು ನಡೆದದ್ದೇ ದಾರಿ ಎಂಬ ವರ್ತನೆ ಸೋಲಿಗೆ ಕಾರಣ ವಾಗಿದೆ. ವಕ್ಫ್ ಬೋರ್ಡ್ ಪರವಾಗಿ ಅವರೇ ಮಾತ ನಾಡಿದ್ದ ವಿಡಿಯೋ ಕಾಂಗ್ರೆಸ್‌ಗೆ ವರದಾನವಾಯಿತು. 2023ರಲ್ಲಿ ಮುಖ್ಯಮಂತ್ರಿ ಇದ್ದಾಗ ವಿಧಾನಸಭಾ ಚುನಾವಣೆ ಎದುರಿಸಿದರು. ಆಗ ಜಿಲ್ಲೆಯಲ್ಲಿ ಒಬ್ಬರನ್ನೂ ಶಾಸಕರನ್ನಾಗಿ ಮಾಡಲು ಆಗಲಿಲ್ಲ. ರಾಜ್ಯದಲ್ಲೂ ಹೀನಾಯ ಸೋಲು ಕಂಡರು. ಇವರು ಅಹಂಕಾರದಿಂದ ವರ್ತಿಸಿದಕಾರಣ ಇದ್ದಕ್ಷೇತ್ರವನ್ನೂ ಕಳೆದುಕೊಂಡಿದ್ದಾರೆ. ಇವರ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತು ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಅವರಿಗೂ ಸಮಯ ಕೇಳಿದ್ದು, ಶೀಘ್ರದಲ್ಲೇ ಎಲ್ಲರನ್ನೂ ಭೇಟಿಯಾಗಿ ದೂರು ಸಲ್ಲಿ ಸುತ್ತೇವೆ. ಬೊಮ್ಮಾಯಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಬೊಮ್ಮಾಯಿ ಹಿಂಬಾಲಕರು ಈ ಹಿಂದೆ ಬೊಮ್ಮಾಯಿಗೆ ಬೇಕಾಗಿದ್ದ ಪಕ್ಷೇತರರು, ವಿರೋಧಿ ಪಕ್ಷದವರನ್ನೂ ಬೆಂಬಲಿಸಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ಅವರನ್ನೇ ಸೋಲಿಸಲು ಮುಂದಾಗಿದ್ದರು. ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿಗೆ 8 ಸಾವಿರ ಮತಗಳ ಹಿನ್ನಡೆ ಆಯಿತು. ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಸಲುವಾಗಿ ಬೊಮ್ಮಾಯಿ ಮಾಡಿದ ಹುನ್ನಾರ ಎಂದು ಆರೋಪಿಸಿದರು.
ರಾಘವೇಂದ್ರ ದೇಶಪಾಂಡೆ, ನಾಗಪ್ಪ ಅಣ್ಣಿಗೇರಿ, ಯಲ್ಲಪ್ಪ ಹುಕ್ಕೇರಿ, ಬಸವರಾಜ ಮಿರ್ಜಿ, ರವಿ ಮಡಿವಾಳರ, ಬಸವರಾಜ ಲಂಗೋಟಿ, ಬಸವರಾಜ ಕುಂಬಾರ, ಶೇಖರ ಬಳ್ಳಾರಿ, ಇತರರು ಇದ್ದರು.
ಕಂಬಾಳಿಮಠರಂಥ ಬೆನ್ನಿಗೆ ಚೂರಿ ಹಾಕುವವರಿಂದಾಗಿ ಸೋಲು
ಹಾವೇರಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಂಗಮೇಶ್ವರ ಕಂಬಾಳಿಮಠ ಅವರಂಥ ಬೆನಿಗೆ ಚೂರಿ ಹಾಕುವವರಿಂದಲೇ ಹೊರತು ಮತ್ತೇನು ಕಾರಣವಿಲ್ಲ ಎಂದು ಶಿಗ್ಗಾಂವಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ತಿರುಗೇಟು ನೀಡಿದರು.
ಶಿಗ್ಗಾಂವಿ ಉಪಚುನಾವಣೆ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂಬಾಳಿಮಠ ಬಿಜೆಪಿ ಸೇರಿ ಒಂದು ವರ್ಷವಾಗಿದೆ. ಕೆಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಇದ್ದರೂ ಕಂಬಾಳಿಮಠ ಬಸವರಾಜ ಬೊಮ್ಮಾಯಿ ಹಾಗೂ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ ಗೆಲುವು ಸಾಧಿಸಿದರು. ಆಗಲೇ ಅವರನ್ನು ಉಚ್ಚಾಟನೆ ಮಾಡಿ ಎಂದು ಬೊಮ್ಮಾಯಿ ಅವರಿಗೆ ಹೇಳಿದ್ದೆವು. ಇಂದಲ್ಲ ನಾಳೆ ಸುಧಾರಿಸುತ್ತಾರೆ ಎಂದಿದ್ದರು ಎಂದು ಹೇಳಿದರು.
ಬೊಮ್ಮಾಯಿ ಅವರಿಗೆ ಪುತ್ರ ವ್ಯಾಮೋಹವಿಲ್ಲ. ಅವರು ಚುನಾವಣೆ ಬೇಡ ಎಂದಿದ್ದರು. ನಿಮ್ಮ ಮಗನೇ ನಿಲ್ಲಬೇಕು ಎಂದು ನಾವು ಒತ್ತಡ ಹೇರಿದ್ದೆವು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರಿಂದ ಕರೆ ಬಂದ ನಂತರ ವರಿಷ್ಠರ ಒತ್ತಡಕ್ಕೆ ಮಣಿದು ಟಿಕೆಟ್ ಫಲಿತಾಂಶ ಬಂದ ದಿನವೇ ಯಾಸೀರ್‌ಖಾನ್ ಪಠಾಣ ಪರವಾಗಿ ಹಾಗೂ ಅಜ್ಜಂಪೀರ್‌ಖಾದಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲದೇ ಮತ್ತಿನ್ನೇನು ಎಂದು ದಾಖಲೆ ಪ್ರದರ್ಶಿಸಿದರು.
ನಾವು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು-ಗವಿಶ್ರೀ
ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಷ ಚವ್ಹಾಣ ಮಾತನಾಡಿ, ಕಂಬಾಳಿಮಠ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರೇ ಆಗಿದ್ದರೆ ಪಕ್ಷದ ಚೌಕಟ್ಟಿನಲ್ಲಿ ನಾಯಕರ ಬಳಿ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಬಹಿರಂಗವಾಗಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ, ಒಂದು ವೇಳೆ ಅವರು ಪಕ್ಷಕ್ಕಾಗಿ ದುಡಿದಿದ್ದರೆ ನಾಯಕರ ಬಳಿ ಹೋಗಿ ಆಗಿರುವ ಅನ್ಯಾಯ ಹೇಳಿ ಕೊಳ್ಳುತ್ತಿದ್ದರು ಎಂದು ಹೇಳಿದರು.
ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣವರ, ಶಿವಾನಂದ ಮ್ಯಾಗೇರಿ, ಉಮೇಶ ಅಂಗಡಿ, ಸೋಮಶೇಖರಯ್ಯ ಗೌರಿಮಠ, ಮಂಜುನಾಥ ಪ್ಯಾಟಿ, ಬಸವನಗೌಡ ರಾಮನಗೌಡರ, ರೇಣುಕಗೌಡ ಪಾಟೀಲ, ಅನೀಲ ಸಾತಣ್ಣವರ, ಮಂಜುನಾಥ ನಂಜಪ್ಪನವರ, ಸಚಿನ ಮಡಿವಾಳರ, ಸತೀಶ ಬಾಣದ ಇತರರು ಇದ್ದರು.