ಕಲಬುರಗಿ, (ಆ.05): ಈಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಮನಾಮ ಜಪ ಮಾಡೋದಾಗಿ ಹೇಳಿದ್ದಾರೆ. ಬರೀ ಡಿಕೆಶಿ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಅಸಾದುದ್ದೀನ್ ಓವೈಸಿ ಕೂಡ ಜೈ ಶ್ರೀರಾಮ ಎಂದು ರಾಮನಾಮ ಜಪಿಸುವ ಕಾಲ ಬರಲಿದೆ ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಅಂದೋಲ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಸ್ವಾತಂತ್ರ್ಯ ನಂತರ 65 ವರ್ಷ ಕಾಲ ಮಂದಿರ ನಿರ್ಮಾಣವಾಗದಂತೆ ತಡೆದವರು ಇದೇ ಕಾಂಗ್ರೆಸ್ಸಿಗರು ಎಂದು  ಸಿದ್ದಲಿಂಗ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದರು.

ಕಲಬುರಗಿ: ರಾಮನಾಮ ಜಪಿಸಿದ ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್ ಇದುವರೆಗೆ ಓಟಿಗಾಗಿ ಮುಸ್ಲಿಂ ತುಷ್ಠಿಕರಣ ಮಾಡಿಕೊಂಡು ಬಂದಿದೆ. ಇದೀಗ ಮೋದಿ ಮತ್ತು ಯೋಗಿ ಆದಿತ್ಯನಾಥ್ ಪ್ರಭಾವದಿಂದ 'ಕಾಂಗಿಗಳು' ನಾಸ್ತಿಕಕರಾಗಿದ್ದವರು ಆಸ್ತಿಕರಾಗುತ್ತಿದ್ದಾರೆಂದು ಆಂದೋಲಾ ಶ್ರೀಗಳು ಮಾತಿನಲ್ಲೇ ಕಾಂಗ್ರೆಸ್ಸಿಗರನ್ನು ಛೇಡಿಸಿದರು.

ಕಾಂಗಿಗಳು ಆಸ್ತಿಕರಾಗುತ್ತಾರೆಂಬ ತಮ್ಮ ಹೇಳಿಕೆಗೆ ಸಾಕ್ಷಿ ಎಂದರೆ ಡಿಕೆ ಶಿವಕುಮಾರ್ ರಾಮ ನಾಮ ಜಪಿಸುತ್ತಿರುವುದು, ರಾಮ ಇದ್ದರೇನೇ ನಮಗೆ ಅಧಿಕಾರ ಅನ್ನೋ ಸತ್ಯ ಅವ್ರಿಗೆ ಈಗ ಗೊತ್ತಾಗಿದೆ.  ಹಾಗಾಗಿಯೇ ಅವರು ಗುಡಿ ಗುಂಡಾರ ಸುತ್ತುತ್ತಿದ್ದಾರೆ. ರಾಮ ನಾಮ ಜಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಅವರು ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಅದು ಬಿಟ್ಟು ಕೇವಲ ಅಧಿಕಾರಕ್ಕಾಗಿ ಬೂಟಾಟಿಕೆ ಮಾಡಿದ್ರೆ ಹಿಂದೂಗಳು ಮತ್ತೆ ಕಾಂಗ್ರೆಸ್ ಗೆ ಪಾಠ ಕಲಿಸುತ್ತಾರೆಂದೂ ಸ್ವಾಮೀಜಿ ಕಾಂಗ್ರೆಸ್‍ಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ 70 ವರ್ಷಗಳಲ್ಲಿ ಮಾಡದ ಮಂದಿರ ನಿರ್ಮಾಣ ಕೆಲಸ ಮೋದಿ ಮತ್ತು ಯೋಗಿ ಆದಿತ್ಯನಾಥ್ ಮಾಡಿದ್ದಾರೆ. ಕಾಂಗ್ರೆಸ್ ಗೆ ಈಗ ತನ್ನ ತಪ್ಪಿನ ಅರಿವಾಗಿದೆ. ಅವರು ಮುಸ್ಲಿಂ ತುಷ್ಠಿಕರಣ ಬಿಡಬೇಕು, ನಮ್ಮೆಲ್ಲರ ಮುಂದಿನ ಹೋರಾಟವೆಂದರೆ ಮಥುರಾ, ಕಾಶಿ ಮುಕ್ತಿಗಾಗಿ ಹೋರಾಟಕ್ಕೆ ಸಿದ್ಧರಾಗೋದೇ ಆಗಿದೆ ಎಂದರು.