ಪಾಟ್ನಾ (ಅ. 30): ಇಲ್ಲಿಯವರೆಗೆ ಬಿಹಾರದ ಚುನಾವಣೆಯಲ್ಲಿ ಅಮಿತ್‌ ಶಾ ಕಾಣಿಸಿಕೊಂಡಿಲ್ಲ. ಸೀಟು ಹಂಚಿಕೆ ವೇಳೆ ಕೊರೋನಾದಿಂದ ಅಸ್ಪತ್ರೆಯಲ್ಲಿದ್ದ ಶಾ ಸೀಟು ಹಂಚಿಕೆ ಮಾತುಕತೆ ಹೊಣೆಯನ್ನು ದೇವೇಂದ್ರ ಫಡ್ನವೀಸ್‌ಗೆ ವಹಿಸಿದ್ದರು.

ನವರಾತ್ರಿ ಪೂಜೆಗೆಂದು ತನ್ನ ಊರು ಗುಜರಾತ್‌ನ ಮಾನಸಾ ತಲುಪಿದ್ದ ಅಮಿತ್‌ ಶಾ ಒಂದು ವಾರ ಅಲ್ಲೇ ಉಳಿದುಕೊಂಡು ವಿಶ್ರಾಂತಿ ಪಡೆದಿದ್ದರು. ಮುಂದೆ ಆದರೂ ಅಮಿತ್‌ ಶಾ ಬಿಹಾರಕ್ಕೆ ಹೋಗುವ ಕಾರ್ಯಕ್ರಮ ನಿಗದಿಯಾಗಿಲ್ಲ. 6 ವರ್ಷಗಳಲ್ಲಿ ಅಮಿತ್‌ ಭಾಯಿ ತಲೆಹಾಕದ ಮೊದಲ ಚುನಾವಣೆ ಇದು. ಸ್ವಲ್ಪ ವಿಶ್ರಾಂತಿ ಪಡೆದು ಅವರು ಬಂಗಾಳದ ಚುನಾವಣೆ ಪೂರ್ತಿ ನೋಡಿಕೊಳ್ಳಲಿದ್ದಾರೆ.

ಅಪ್ಪನೇ ಹೆಸರೇ ಹೇಳ್ತಿಲ್ಲ ಮರಿ ಲಾಲು!

ಹೊಸ ಬಿಹಾರ ಕಟ್ಟುತ್ತೇನೆ ಎಂದು ಓಡಾಡುತ್ತಿರುವ ತೇಜಸ್ವಿ ಯಾದವ್‌ ತನ್ನ ಪ್ರಚಾರದಲ್ಲಿ ಎಲ್ಲಿಯೂ ಕೂಡ ತಂದೆ ಲಾಲು ಬಗ್ಗೆ ಹೇಳುವುದಿಲ್ಲ. ಅವರ ಫೋಟೋ ಕೂಡ ತೋರಿಸುವುದಿಲ್ಲ. ಅಪ್ಪನ ಜಂಗಲ್‌ ರಾಜ್‌ ಅಲ್ಲ ನನ್ನದು ಹೊಸ ರೀತಿಯ ಪಾಲಿಟಿಕ್ಸ್‌ ಎಂದು ತೇಜಸ್ವಿ ಮಾತನಾಡುತ್ತಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. ರಾಜಕೀಯದಲ್ಲಿ ಜಾತಿಯ ಬಲ ಇದ್ದರೆ ಬಾರಾ ಖೂನ್‌ ಮಾಫ್‌. ಏಕೆಂದರೆ ಪಬ್ಲಿಕ್‌ ಮೆಮೋರಿ ಈಸ್‌ ಟೂ ಶಾರ್ಟ್‌.

ಬಿಹಾರದಲ್ಲಿ ವೋಟರ್ ಮಾಂಗೆ ಮೋರ್: ನಿತೀಶ್ ಕುಮಾರ್ ಎದುರು ದೊಡ್ಡ ಸವಾಲ್

ನಿತೀಶ್‌ ‘ಚಂಚಲ’ ಕುಮಾರ

2010ರಲ್ಲಿ ಪಟ್ನಾಗೆ ಬಿಜೆಪಿ ಕಾರ್ಯಕಾರಿಣಿಗೆ ಹೋಗಿದ್ದ ಮೋದಿ ತನ್ನ ಜೊತೆಗಿನ ಹಳೆಯ ಫೋಟೋವನ್ನು ಪತ್ರಿಕೆಯಲ್ಲಿ ಹಾಕಿಸಿದರು ಎನ್ನುವ ಕಾರಣಕ್ಕೆ ನಿತೀಶ್‌ ಸಿಟ್ಟಾಗಿ ಅಡ್ವಾಣಿ ಮತ್ತು ಇತರ ಬಿಜೆಪಿ ನಾಯಕರಿಗೆ ಮನೆಗೆ ಊಟಕ್ಕೆ ಬರಲು ನೀಡಿದ್ದ ಆಮಂತ್ರಣ ಹಿಂದೆ ತೆಗೆದುಕೊಂಡಿದ್ದರು.

ಈಗ ಮೋದಿ ಪ್ರಚಾರಕ್ಕೆ ಬಂದರೆ ಸಾಕು ಎಂದು ಅವರ ಜೊತೆ ತಿರುಗುತ್ತಿದ್ದಾರೆ. ನಿತೀಶ್‌ ಒಮ್ಮೆ ಕ್ಷೇತ್ರಕ್ಕೆ ಬಂದರೆ ಗೆಲ್ಲುತ್ತೇವೆ ಎಂದು ಕರೆಯುತ್ತಿದ್ದ ಬಿಜೆಪಿ ಅಭ್ಯರ್ಥಿಗಳು ಈ ಬಾರಿ ನಿತೀಶ್‌ ಬರುವುದು ಬೇಡ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಬಿಜೆಪಿ ಒಳಗಡೆ ಕೂಡ ನಿತೀಶ್‌ಗೆ ಹತ್ತಿರದವರಾದ ಸುಶೀಲ್‌ ಮೋದಿ ಬಗ್ಗೆ ಆಕ್ರೋಶವಿದೆ. ಒಮ್ಮೆ ಮೋದಿ ಕೆಟ್ಟವರು, ಇನ್ನೊಮ್ಮ ಲಾಲು ಕೆಟ್ಟವರು ಎಂದಿದ್ದ ನಿತೀಶ್‌ ಬಗ್ಗೆ ಇಬ್ಬರ ಮತದಾರರೂ ಕೂಡ ಮುನಿಸಿಕೊಂಡಂತೆ ಕಾಣುತ್ತಿದೆ. ರಾಜಕೀಯದವರ ಚಂಚಲತೆ ಮತದಾರರಿಗೆ ಇಷ್ಟಆಗೋದಿಲ್ಲ.