ಹುಬ್ಬಳ್ಳಿ[ಫೆ.26]: ‘ಕಾಂಗ್ರೆಸ್‌ನಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಯಾವ ಮನಸ್ಥಿತಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಪರಮೇಶ್ವರ್‌ ಹೇಳಿಕೆ ಬಗ್ಗೆ ಕೇಳಿದಾಗ, ಪರಮೇಶ್ವರ ಅವರಿಗೆ ಕೇಳಿ ಎಂದರು. ಇದೇವೇಳೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ. ಹೈಕಮಾಂಡ್‌ ನನಗೆ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಹೇಳುವುದಿಲ್ಲ ಎಂದು ತಿಳಿಸಿದರು.

ಸುಮಲತಾ ಸ್ಪರ್ಧೆ ನಿರ್ಧಾರವಾಗಿಲ್ಲ:

ಸುಮಲತಾ ಅಂಬರೀಷ್‌ ಮಂಡ್ಯದಿಂದ ಸ್ಪರ್ಧಿಸುವ ವಿಚಾರವಾಗಿ ನನ್ನನ್ನು ಭೇಟಿ ಮಾಡಿದ್ದರು. ಆದರೆ, ಈವರೆಗೂ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ವಿಷಯವಾಗಿ ಸೀಟು ಹಂಚಿಕೆಯಾಗಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಮೈತ್ರಿಯಿಂದಲೇ ಚುನಾವಣೆ ಎದುರಿಸುತ್ತೇವೆ ಎಂದರು.

ಎಸ್‌ಐಟಿ ನನ್ನ ಪಾತ್ರವಿಲ್ಲ:

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕೇಳಿ ಬಂದಿರುವ ಆಪರೇಷನ್‌ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ರಚನೆ ಮಾಡಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಂಡಂತಹ ನಿರ್ಧಾರ. ಅದರಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ನುಡಿದರು.