ನನ್ನ ಹೋರಾಟಕ್ಕೆ ಯಾರೆಲ್ಲಾ ಸೇರ್ತಾರೆ ಕಾದು ನೋಡಿ: ಸುಮಲತಾ!
* ಮುಂದೆ ನನ್ನ ಹೋರಾಟದ ಜತೆಗೆ ಯಾರೆಲ್ಲಾ ಇರುತ್ತಾರೆ ಎಂಬುದನ್ನು ಕಾದು ನೋಡಿ
* ಗಣಿ ಸಚಿವರು ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲೇ ಅಕ್ರಮ ಗಣಿಗಾರಿಕೆ ತಡೆಗೆ ಸೂಚಿಸಿದ್ದರು
* ಅಕ್ರಮ ತಡೆಗೆ ಟಾಸ್ಕ್‌ಫೋರ್ಸ್ ಸಹ ರಚಿಸಿ, 100 ಕೋಟಿ ರು. ದಂಡ ವಿಧಿಸಿದ್ದರು
ಬೆಂಗಳೂರು(ಜು.13): ನನ್ನ ಹೋರಾಟ ಒಂಟಿ ಹೋರಾಟ ಎಂದುಕೊಳ್ಳಬಹುದು. ಮುಂದೆ ನನ್ನ ಹೋರಾಟದ ಜತೆಗೆ ಯಾರೆಲ್ಲಾ ಇರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಸೋಮವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವರ ಜತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದೇನೆ. ಗಣಿ ಸಚಿವರು ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲೇ ಅಕ್ರಮ ಗಣಿಗಾರಿಕೆ ತಡೆಗೆ ಸೂಚಿಸಿದ್ದರು. ಅಕ್ರಮ ತಡೆಗೆ ಟಾಸ್ಕ್‌ಫೋರ್ಸ್ ಸಹ ರಚಿಸಿ, 100 ಕೋಟಿ ರು. ದಂಡ ವಿಧಿಸಿದ್ದರು ಎಂದು ಹೇಳಿದರು.
ನಾನು ಅವರಿಗೆ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ವಿವರಿಸಿದ್ದೇನೆ. ಯಾವುದೇ ರೀತಿಯಲ್ಲಿ ಅಕ್ರಮಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದೇನೆ. ಅಲ್ಲದೇ, ಸರ್ಕಾರಕ್ಕೆ ಸರಿಯಾಗಿ ರಾಜಧನ ನೀಡದೆ ನಷ್ಟಮಾಡುತ್ತಿದ್ದಾರೆ. ಅದನ್ನ ವಸೂಲಿ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದೇನೆ. ಸಚಿವರು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಮಂಗಳವಾರ ಬೇಬಿಬೆಟ್ಟ ಹಾಗೂ ಕೆಆರ್‌ಎಸ್ ಜಲಾಶಯ ವೀಕ್ಷಣೆಗೆ ತೆರಳಲಿದ್ದೇನೆ. ಅದರ ಸುರಕ್ಷತೆಗೆ, ಏನೆಲ್ಲ ಕ್ರಮ ಕೈಗೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಜನರಿಗಿಂತ, ರೈತರಿಗಿಂತ ಯಾರೂ ದೊಡ್ಡವರಲ್ಲ. ಕೆಆರ್‌ಎಸ್ ಅಧಿಕಾರಿಗಳೊಂದಿಗೆ ಏಪ್ರಿಲ್ ತಿಂಗಳಲ್ಲಿಯೇ ಸಭೆ ನಿಗದಿಯಾಗಿತ್ತು. ಕೊರೋನಾ ಕಾರಣ ಲಾಕ್‌ಡೌನ್‌ನಿಂದ ಅದನ್ನು ಮುಂದೂಡಲಾಗಿತ್ತು. ಈಗ ಅದು ಮತ್ತೆ ಸಭೆ ನಿಗದಿಯಾಗಿದ್ದು, ಜು.14ರಂದು ನಡೆಯಲಿದೆ ಎಂದು ಹೇಳಿದರು.