BJP Politics: ಕಟೀಲ್ ಎದುರಲ್ಲೇ ಬಿಜೆಪಿ ಬೆಂಬಲಿಗರ ವಾಗ್ವಾದ
ಮಾಜಿ ಸಚಿವ ಬೆಳ್ಳುಬ್ಬಿ, ಬಿಜೆಪಿ ಮುಖಂಡ ಸೋಮನಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ
ಬಸವನಬಾಗೇವಾಡಿ(ಸೆ. 28): ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟಿಲ್ ಎದುರಿಗೇ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮತ್ತು ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಪಟ್ಟಣದ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಬಿಜೆಪಿ ಮಂಡಲದ ಕಾರ್ಯಕರ್ತರ ಸಭೆಯಲ್ಲಿ ಈ ಘಟನೆಗೆ ಸಾಕ್ಷಿಯಾಯಿತು.
ಸಭೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡುವ ಸಂದರ್ಭದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಯಾವುದೇ ಷರತ್ತು ಹಾಕದೇ ಪಕ್ಷ ಸೇರಿದ್ದಾರೆ. ಅವರು ಮೊದಲು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಹೇಳುತ್ತಿದ್ದಂತೆ ಅಪ್ಪುಗೌಡ ಪಾಟೀಲ ಮನಗೂಳಿ ಅವರ ಅಭಿಮಾನಿಗಳು ಬೆಳ್ಳುಬ್ಬಿ ಅವರು ತಮ್ಮ ಮಾತನ್ನು ಹಿಂಪಡೆದು ವೇದಿಕೆಯಲ್ಲಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬೆಳ್ಳುಬ್ಬಿ, ಸೋಮನಗೌಡ(ಅಪ್ಪುಗೌಡ) ಪಾಟೀಲ ಅವರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಪ್ಪುಗೌಡ ಪಾಟೀಲ ವೇದಿಕೆಯಿಂದ ಕೆಳಗೆ ಬಂದು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಸಭೆಯಲ್ಲಿ ಕೆಲ ಹೊತ್ತು ಗಂಭೀರ ವಾತಾವರಣ ಸೃಷ್ಟಿಯಾಯಿತು. ಮುಖಂಡರು ತಮ್ಮ ಬೆಂಬಲಿಗರನ್ನು ಸಮಾಧಾನ ಮಾಡುವಲ್ಲಿ ಹರಸಾಹಸಪಟ್ಟರು. ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಇಬ್ಬರು ಮುಖಂಡರ ಮುಸುಕಿನ ಗುದ್ದಾಟ ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆ ಬಹಿರಂಗವಾದ ಪ್ರಸಂಗ ಜರುಗಿತು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿದರು.
PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ; ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ
ಪ್ರಾಮಾಣಿಕ ಜನಸೇವಕರಿಗೆ ಬಿಜೆಪಿ ಟಿಕೆಟ್:
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಪರಿವರ್ತನೆಯಾಗುತ್ತಿರುವುದನ್ನು ಜಗತ್ತು ಕೊಂಡಾಡುತ್ತಿದೆ. ಮೋದಿ ಅವರು ಬಡವರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಲ್ಯಾಣ ರಾಜ್ಯವನ್ನಾಗಿ ಮಾಡುತ್ತಿದೆ ಎಂದು ಹೇಳಿದರು.
2018ರಲ್ಲಿ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಬಿಜೆಪಿ ಸ್ಥಾನಗಳು ಬಂದವು. 17 ಜನ ಶಾಸಕರು ತಮ್ಮ ಅಧಿಕಾರ ತ್ಯಾಗ ಮಾಡುವ ಮೂಲಕ ಪಕ್ಷಕ್ಕೆ ಬರುವ ಮೂಲಕ ಪಕ್ಷ ಬಲಪಡಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತಾಯಿತು. ಇದರಿಂದಾಗಿ ಬಿ.ಎಸ್. ಯಡಿಯೂರಪ್ಪ ಅವರು ಬಸವಣ್ಣನವರ ಆಶಯದಂತೆ ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೆ ಮಾಡಿದರು ಎಂದರು.
Karnataka Politics: '2023ಕ್ಕೆ ಕುಮಾರಣ್ಣನೇ ಮುಖ್ಯಮಂತ್ರಿ ಆಗ್ತಾರೆ'
ಬಿಜೆಪಿಯಲ್ಲಿ ಯಾರೂ ಟಿಕೆಟ್ ಕೇಳುವ ಹಕ್ಕಿಲ್ಲ. ಯಾರೂ ಪಕ್ಷದಲ್ಲಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಾರೋ ಅಂತಹವರನ್ನು ಗುರುತಿಸಿ ಅವರಿಗೆ ಪಕ್ಷ ಟಿಕೆಟ್ ನೀಡುತ್ತದೆ. ಉತ್ತಮ ವ್ಯಕ್ತಿಗಳನ್ನು ಪಕ್ಷವು ಆಯ್ಕೆ ಮಾಡಿ ಟಿಕೆಟ್ ನೀಡುತ್ತದೆ. ಕಾರ್ಯಕರ್ತರು ಜನರ ಹೃದಯದ ಸ್ಥಾನದಲ್ಲಿರಬೇಕು. ಪಕ್ಷದಲ್ಲಿ ಅಶಿಸ್ತಿನಿಂದ ವರ್ತಿಸುತ್ತಾರೋ ಅಂತಹವರ ಮೇಲೆ ಶಿಸ್ತು ಕ್ರಮ ಖಂಡಿತ ತೆಗೆದುಕೊಳ್ಳುತ್ತದೆ. ಅಶಿಸ್ತಿನಿಂದ ವರ್ತಿಸುವುದರ ರಾಜಕೀಯ ಜೀವನ ಅಧಃಪತನವಾಗಲು ಆರಂಭವಾಗುತ್ತದೆ ಎಂದರು.
ಸಂಸದ ರಮೇಶ ಜಿಗಜಿಣಗಿ, ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಸಹ ಪ್ರಭಾರಿ ಬಸವರಾಜ ಯಕಂಚಿ, ಬೂತ ಸಶಕ್ತಿಕೀರಣ ರಾಜ್ಯ ಪ್ರಮುಖ ಚಂದ್ರಶೇಖರ ಪಾಟೀಲ, ಒಬಿಸಿ ರಾಜ್ಯ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಸಾವಿತ್ರಿ ಕಲ್ಯಾಣಶೆಟ್ಟಿ, ಬಿ.ಕೆ. ಕಲ್ಲೂರ, ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗೂರ, ಕಾಸುಗೌಡ ಬಿರಾದಾರ ಇತರರು ಇದ್ದರು. ಅಮರಯ್ಯ ಹಿರೇಮಠ ನಿರೂಪಿಸಿದರು. ಮಲ್ಲಿಕಾರ್ಜನ ದೇವರಮನಿ ವಂದಿಸಿದರು.