Asianet Suvarna News Asianet Suvarna News

Ramanagara Row: ಡಿಕೆಸು-ಅಶ್ವತ್ಥನಾರಾಯಣ ಜಟಾಪಟಿ ತಾರಕಕ್ಕೆ..!

*   ನಿಲ್ಲದ ಸಂಘರ್ಷ
*   ರಾಮನಗರದ ವೇದಿಕೆಯಲ್ಲಿ ಮೊನ್ನೆ ಸಿಎಂ ಎದುರೇ ನಡೆದಿದ್ದ ‘ಫೈಟ್‌’
*   ವಿವಾದಕ್ಕೀಗ ಇನ್ನಷ್ಟು ಬಿಸಿ
 

Allegations Between DK Suresh and CN Ashwath Narayan grg
Author
Bengaluru, First Published Jan 5, 2022, 4:40 AM IST

ಬೆಂಗಳೂರು(ಜ.05): ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan) ಆಡಿದ ‘ಗಂಡಸ್ತನ’ ಕುರಿತ ಉದ್ಧಟತನದ ಮಾತು ಹಾಗೂ ಅದನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕರ ಕ್ರಮದಿಂದಾಗಿ ಅವರ ಹಾಗೂ ಅವರ ಪಕ್ಷದ ಸಂಸ್ಕೃತಿ ಅನಾವರಣಗೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಮನಗರದಲ್ಲಿ ನಡೆದ ಘಟನೆಯ ಸಂಬಂಧ ಸಂಸದ ಡಿ.ಕೆ.ಸುರೇಶ್‌(DK Suresh) ವಿರುದ್ಧ ಬಿಜೆಪಿಯವರು(BJP) ಕೇವಲ ರಾಜ್ಯಾದ್ಯಂತ ಅಲ್ಲ, ಇಡೀ ದೇಶದಲ್ಲಿ ಪ್ರತಿಭಟನೆ ಮಾಡಲಿ. ಸಚಿವ ಅಶ್ವತ್ಥನಾರಾಯಣ ಅವರ ಉದ್ಧಟತನದ ಮಾತುಗಳನ್ನು ಜನರು ನೋಡಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ತಮ್ಮ ಸಚಿವರು ಆಡಿರುವ ನುಡಿಮುತ್ತುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಸಚಿವ ಆರ್‌.ಅಶೋಕ್‌(R Ashok) ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಮಾಣೀಕರಿಸಿ ಸಮರ್ಥಿಸಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಬಡ್ತಿ ನೀಡಲಿ. ಅವರ ಸಂಸ್ಕೃತಿಯ(Culture) ದರ್ಶನ ಎಲ್ಲರಿಗೂ ಆಗಿದೆ ಎಂದರು.

Karnataka Politics: ರಾಮನಗರ ಜಗಳ, ಡಿಕೆ ಸುರೇಶ್‌ಗೆ ಧನ್ಯವಾದ ಹೇಳಿದ ಸಿಟಿ ರವಿ

ಗಂಡಸ್ತನ ಬಗ್ಗೆ ಚರ್ಚೆಗೆ ಬರುವೆ, ಸಮಯ ತಿಳಿಸಿ

‘ಗಂಡಸ್ತನ’ ಕುರಿತು ಚರ್ಚೆಗೆ ಪ್ರತ್ಯೇಕ ಸಮಯ, ಸ್ಥಳ ನಿಗದಿ ಮಾಡುವಂತೆ ಸಚಿವ ಅಶ್ವತ್ಥನಾರಾಯಣ ಅವರಿಗೆ ಹೇಳಿದ್ದೆ. ಈ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಪಲಾಯನ ಮಾಡುವವನಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವತ್ಥನಾರಾಯಣ ಅವರಿಗೆ ನೀವು ಮಾತನಾಡುತ್ತಿರುವುದು ಸರಿಯಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಕಾರ್ಯಕ್ರಮದಲ್ಲಿ ಹೇಳಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಅವರೂ ಭಾಷಣದಲ್ಲಿ ರಾಜಕೀಯ ಬೆರೆಸಬೇಡಿ ಎಂದರು. ಆದರೂ, ಅವರು ‘ಗಂಡಸ್ತನ’ ಪದ ಬಳಸಿ ಉದ್ಧಟತನ ತೋರಿದ್ದಾರೆ. ನಾನಿಲ್ಲಿ ನೆಪಮಾತ್ರ, ಇದು ನನಗೆ ಹಾಕಿದ ಸವಾಲಲ್ಲ. ಇಡೀ ರಾಮನಗರದ(Ramanagara) ಜನತೆಗೆ ಹಾಕಿದ ಸವಾಲು. ಜಿಲ್ಲೆಯ ಜನರ ಸ್ವಾಭಿಮಾನವನ್ನು ಅಶ್ವತ್ಥನಾರಾಯಣ ಕೆಣಕಿದ್ದಾರೆ. ಇಡೀ ಕರ್ನಾಟಕದ(Karnataka) ಯುವಕರಿಗೆ ಅವಮಾನ ಮಾಡಿದ್ದಾರೆ. ಗಂಡಸ್ತನದ ಬಗ್ಗೆ ಚರ್ಚೆಗೆ ಪ್ರತ್ಯೇಕ ಸಮಯ, ಸ್ಥಳ ನಿಗದಿ ಮಾಡಲು ಹೇಳಿದ್ದೇನೆ. ನನ್ನ ಈ ಹೇಳಿಕೆಯಿಂದ ಪಲಾಯನ ಮಾಡುವುದಿಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಿಸ್ಟರ್‌ ಡಿಕೆಶಿ, ನಿಮ್ಮ ಗೂಂಡಾಗಿರಿ ಬಿಟ್ಟುಬಿಡಿ

‘ಮಾಗಡಿ ಅಂದರೆ ಗೊತ್ತಲ್ಲ. ಅದು ಕೆಂಪೇಗೌಡರ ನೆಲ. ಅಲ್ಲಿನ ಚಿಕ್ಕಕಲ್ಯ ಗ್ರಾಮದಲ್ಲೇ ನನ್ನ ಕಂದಾಯ (ಆರ್‌.ಟಿ.ಸಿ) ದಾಖಲೆಗಳಿವೆ. ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎನ್ನುವ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಾಗಿದೆ. ಮಿಸ್ಟರ್‌ ಡಿ.ಕೆ.ಶಿವಕುಮಾರ್‌, ಗೂಂಡಾಗಿರಿ ಬಿಡಿ. ಪ್ರಜಾಪ್ರಭುತ್ವದ(Democracy) ಆಶಯಕ್ಕೆ ಧಕ್ಕೆ ತರಬೇಡಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತೀಕ್ಷ್ಣವಾಗಿ ಹೇಳಿದ್ದಾರೆ.

‘ರಾಮನಗರ ಜಿಲ್ಲೆಯ ಜೊತೆ ನನಗೆ ಡಿಕೆ ಸಹೋದರರಿಗಿಂತಲೂ ದೀರ್ಘ ಇತಿಹಾಸವಿದೆ. ಅತೀವ ಅಭಿಮಾನವೂ ಇದೆ. ಇಂತಹ ಕನಿಷ್ಠ ಪರಿಜ್ಞಾನವೂ ಇಲ್ಲದ ವ್ಯಕ್ತಿ ಕೆಪಿಸಿಸಿ ಅಧ್ಯಕ್ಷರಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದೂ ತಿರುಗೇಟು ನೀಡಿ ಮಂಗಳವಾರ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್‌(Congress) ಗೂಂಡಾಗಿರಿ ಎನ್ನುವ ಹ್ಯಾಶ್‌ಟ್ಯಾಗ್‌ ಹಾಕಿದ್ದಾರೆ.

‘ನಾಡಪ್ರಭುಗಳು (ಕೆಂಪೇಗೌಡರು) ಆಡಳಿತ ನಡೆಸಿದ ಪುಣ್ಯಭೂಮಿ ರಾಮನಗರ. ಅದರ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧ. ಸುಸಜ್ಜಿತ ಆರೋಗ್ಯ ಸೌಲಭ್ಯ, ಶೈಕ್ಷಣಿಕ, ಔದ್ಯೋಗಿಕ, ಮೂಲಸೌಕರ್ಯ, ನೀರಾವರಿ ಯೋಜನೆಗಳ ಮೂಲಕ ನವ ರಾಮನಗರ ನಿರ್ಮಾಣ ಮಾಡುತ್ತಿದ್ದೇವೆ. ಕಾಂಗ್ರೆಸ್‌ ನಾಯಕರ ಧಮಕಿ, ದಬ್ಬಾಳಿಕೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೇ ಉತ್ತರ’ ಎಂದು ಅವರು ಟ್ವೀಟ್‌ ಮೂಲಕ ಪಂಥಾಹ್ವಾನ ನೀಡಿದ್ದಾರೆ.

DKS vs Ashwath Narayan ತಮ್ಮೆದುರಲ್ಲೇ ನಡೆದ ಅಶ್ವತ್ಥ್ ನಾರಾಯಣ-ಡಿಕೆ ಸುರೇಶ್ ಗಲಾಟೆ ಬಗ್ಗೆ ಸಿಎಂ ಹೇಳಿದ್ದಿಷ್ಟು

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, ಕಾರ್ಯಕ್ರಮಕ್ಕೆ ಎಲ್ಲ ಜನಪ್ರತಿನಿಧಿಗಳನ್ನೂ ಶಿಷ್ಟಾಚಾರದಂತೆ ಆಹ್ವಾನಿಸಲಾಗಿತ್ತು. ಡಿ.ಕೆ.ಸುರೇಶ್‌ ಅವರಿಗೂ ಒಂದು ಗಂಟೆ ಕಾಲ ಮಾತನಾಡಲು ಅವಕಾಶ ಕೊಡಲಾಗಿತ್ತು. ಆದರೆ, ಸುರೇಶ್‌ ತಮ್ಮ ಹಿಂಬಾಲಕರನ್ನು ಮತ್ತು ಕಾರ್ಯಕರ್ತರನ್ನು ಪ್ರಚೋದಿಸಿ ಕಾರ್ಯಕ್ರಮವನ್ನು ಹಾಳು ಮಾಡಲು ನೋಡುತ್ತಿದ್ದರು. ಇದಕ್ಕೆಲ್ಲ ನಾನು ಸರಕಾರದ ಪರವಾಗಿ ಸ್ಪಷ್ಟಸಂದೇಶ ಕೊಡಬೇಕಾಗಿತ್ತು. ಆ ಕೆಲಸವನ್ನಷ್ಟೇ ನಾನಲ್ಲಿ ಮಾಡಿದೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಪಾಳೇಗಾರಿಕೆ:

ರಾಮನಗರದಲ್ಲಿ ಡಿಕೆ ಸಹೋದರರು ಸರ್ವಾಧಿಕಾರಿಗಳಂತೆ(Dictator) ವರ್ತಿಸುತ್ತಿದ್ದಾರೆ. ಇದು ಪಾಳೇಗಾರಿಕೆ ಮತ್ತು ದೌರ್ಜನ್ಯದ ಸಂಕೇತ. ತಮ್ಮ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದಾಗ, ವೇದಿಕೆಯ ಮೇಲಿದ್ದ ಡಿ.ಕೆ.ಸುರೇಶ್‌ ಬುದ್ಧಿವಾದ ಹೇಳಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅನಾಗರಿಕರಂತೆ ವರ್ತಿಸಲು ಬಿಡುವ ಮೂಲಕ ಇಡೀ ಜಿಲ್ಲೆ ತಲೆ ತಗ್ಗಿಸುವಂತೆ ಮಾಡಿದರು ಎಂದು ಹರಿಹಾಯ್ದರು.

ಡಿಕೆ ಸಹೋದರರು ಇಷ್ಟು ವರ್ಷ ಅಧಿಕಾರ ಹಿಡಿದುಕೊಂಡಿದ್ದರು. ನಾಡಿಗೆ ವಿಧಾನಸೌಧವನ್ನು ಕೊಟ್ಟ ಕೆಂಗಲ್‌ ಹನುಮಂತಯ್ಯನವರ ಒಂದು ಪ್ರತಿಮೆಯನ್ನೂ ಏಕೆ ಇವರು ಪ್ರತಿಷ್ಠಾಪಿಸಿಲ್ಲ? ಅವರ ಸಮಾಧಿ ಎಂತಹ ದುಸ್ಥಿತಿಯಲ್ಲಿದೆ ಗೊತ್ತಾ? ಅಂಬೇಡ್ಕರ್‌ ಮತ್ತು ಕೆಂಪೇಗೌಡರ ಪ್ರತಿಮೆಗಳನ್ನೇನೂ ಇವರು ಜೇಬಿನಿಂದ ದುಡ್ಡು ಹಾಕಿ ಮಾಡಿಸಿಲ್ಲ. ಅದೆಲ್ಲ ಸರಕಾರ ಮಾಡಿರುವಂಥದ್ದು ಎಂದರು.
 

Follow Us:
Download App:
  • android
  • ios