‘ನಮ್ಮ ಸರ್ಕಾರದಲ್ಲಿ ಸಚಿವರು, ಶಾಸಕರು ಯಾರೂ ಕಮಿಷನ್ ಕೇಳಲು ಸಾಧ್ಯವಿಲ್ಲ. ಇದನ್ನು ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಸೇರಿ ಹಲವು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಕೆಲವು ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಆ.12): ‘ನಮ್ಮ ಸರ್ಕಾರದಲ್ಲಿ ಸಚಿವರು, ಶಾಸಕರು ಯಾರೂ ಕಮಿಷನ್ ಕೇಳಲು ಸಾಧ್ಯವಿಲ್ಲ. ಇದನ್ನು ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಸೇರಿ ಹಲವು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಕೆಲವು ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಮಿಷನ್ ಕೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಕ್ಕೆ ಈಗಲೂ ಬದ್ಧ. ನಾವು ರಾಜ್ಯದ ಜನರಿಗೆ ದಕ್ಷ, ಭ್ರಷ್ಟಾಚಾರರಹಿತ ಆಡಳಿತ ನೀಡುವ ವಚನ ನೀಡಿ ಅಧಿಕಾರಕ್ಕೆ ಬಂದಿದ್ದೇವೆ. ಅದಕ್ಕೆ ಬದ್ಧವಾಗಿ ಆಡಳಿತ ನಡೆಸುವುದು ನಮ್ಮ ಕನಸು. ಹೀಗಾಗಿ ನಮ್ಮ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ 6ನೇ ಗ್ಯಾರಂಟಿ ವಕೀಲರ ರಕ್ಷಣೆ ಕಾಯ್ದೆ: ಸಿದ್ದರಾಮಯ್ಯ ಭರವಸೆ
ದಾಖಲೆ ಸಮೇತ ಬಿಚ್ಚಿಡುವೆ: ಇನ್ನು ತಮ್ಮ ಮೇಲೆ ಕಮಿಷನ್ ಆರೋಪ ಮಾಡಿರುವ ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಅಶೋಕ್ ಅವರ ಕಿಕ್‌ಬ್ಯಾಕ್ ಬಗ್ಗೆ ಮಾತನಾಡಲು ಸಮಯವಿದೆ. ನಾನು ದಾಖಲೆ ಸಮೇತ ಮಾತನಾಡುತ್ತೇನೆ. ನಮ್ಮ ಸರ್ಕಾರದಲ್ಲಿ ಬಿಲ್ ಬಿಡುಗಡೆ ಪ್ರಕ್ರಿಯೆಯೇ ಶುರುವಾಗಿಲ್ಲ. ಹೀಗಾಗಿ ಕಿಕ್‌ಬ್ಯಾಕ್ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆ? ಅವರ ಕಾರ್ಯವೈಖರಿ ಏನು ಎಂಬುದನ್ನು ಶೀಘ್ರದಲ್ಲೇ ದಾಖಲೆ ಸಮೇತ ವಿವರಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
‘ನಾನು, ಸಿದ್ದರಾಮಯ್ಯ ಅವರು ನಮ್ಮದೇ ಆದ ರಾಜಕೀಯ ಹಿನ್ನೆಲೆ ಹೊಂದಿದ್ದೇವೆ. ಕೆಂಪಣ್ಣ ಅವರು ಬಹಳ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿ. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲ. ಅಶೋಕ್, ಮಾಜಿ ಸಚಿವರಾದ ಅಶ್ವತ್ಥನಾರಾಯಣ್ ಹಾಗೂ ಗೋಪಾಲಯ್ಯ ಅವರು ಗುತ್ತಿಗೆದಾರರನ್ನು ಬಳಸಿಕೊಂಡು ತಮ್ಮ ತಿಮಿಂಗಲಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಅಕ್ರಮ ಮಾಡಿರುವವರು ತಪ್ಪಿಸಿಕೊಳ್ಳಬಾರದು. ಅದೇ ನಮ್ಮ ಮುಖ್ಯ ಉದ್ದೇಶ’ ಎಂದು ಹೇಳಿದರು.
ಅಶೋಕ್, ಅಶ್ವತ್ಥನಾರಾಯಣ್ ಅಪಪ್ರಚಾರ: ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಅಶೋಕ್ ಹಾಗೂ ಅಶ್ವತ್ಥನಾರಾಯಣ್ ಅವರಿಗೆ ನಮ್ಮ ಗ್ಯಾರಂಟಿ ಜಾರಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಕ್ಷೇತ್ರದ ಮಹಿಳೆಯರಿಗೂ ತಿಂಗಳಿಗೆ 2 ಸಾವಿರ ರು. ಸಹಾಯಧನ, ಉಚಿತ ಬಸ್ಸು, ಉಚಿತ ಅಕ್ಕಿ, ವಿದ್ಯುತ್ ನೀಡುತ್ತಿದ್ದೇವೆ. ಅವರು ಅಧಿಕಾರದಲ್ಲಿದ್ದಾಗ ಇಂತಹ ಒಂದು ಕಾರ್ಯಕ್ರಮ ನೀಡಿಲ್ಲ. ಇದನ್ನು ಸಹಿಸಲಾಗದೆ ಜನರ ಗಮನ ಬೇರೆಡೆಗೆ ಸೆಳೆಯಲು ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.
ನನ್ನ ಬಳಿ ಪೆನ್‌ಡ್ರೈವ್ ಇರೋದು ನಿಜ, ಸಮಯ ಬಂದಾಗ ಬಿಡುಗಡೆ: ಲಕ್ಷ್ಮಣ ಸವದಿ
ನಮ್ಮ ಸರ್ಕಾರದಲ್ಲಿ ಸಚಿವರು, ಶಾಸಕರು ಯಾರೂ ಕಮಿಷನ್ ಕೇಳಲು ಸಾಧ್ಯವಿಲ್ಲ. ಇದನ್ನು ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮುಂತಾದವರೇ ಹೇಳಿದ್ದಾರೆ. ಕಮಿಷನ್ ಕೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಕ್ಕೆ ಈಗಲೂ ಬದ್ಧನಿದ್ದೇನೆ.
- ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
