Asianet Suvarna News Asianet Suvarna News

ಸರ್ಕಾರದ 6ನೇ ಗ್ಯಾರಂಟಿ ವಕೀಲರ ರಕ್ಷಣೆ ಕಾಯ್ದೆ: ಸಿದ್ದರಾಮಯ್ಯ ಭರವಸೆ

ವಕೀಲರ ಹಿತರಕ್ಷಣೆಗಾಗಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ‘ವಕೀಲರ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Govt 6th Guarantee Lawyers Protection Act Says Siddaramaiah gvd
Author
First Published Aug 12, 2023, 10:12 PM IST

ಮೈಸೂರು (ಆ.12): ವಕೀಲರ ಹಿತರಕ್ಷಣೆಗಾಗಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ‘ವಕೀಲರ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ 10ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಈ ಕಾಯ್ದೆಯ ಕರಡು ಸಿದ್ಧವಾಗಿತ್ತು. ಈ ಸಂಬಂಧ ನಾನು ಬೆಳಗಾವಿ ಅಧಿವೇಶನದಲ್ಲಿ ಕೂಡ ಮಾತನಾಡಿದ್ದೆ. ಈಗ ನಮ್ಮದೇ ಸರ್ಕಾರ ಬಂದಿದೆ. ಈ ಬಾರಿಯ ಅಧಿವೇಶನದಲ್ಲಿಯೇ ವಿಧೇಯಕ ಮಂಡಿಸಬೇಕಿತ್ತು. 

ಆದರೆ, ಕೆಲವು ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಖಂಡಿತವಾಗಿಯೂ ಮಂಡಿಸಲಾಗುವುದು ಎಂದು ಭರವಸೆ ನೀಡಿದರು. ‘ನಾನೂ ವಕೀಲನಾಗಿ ಸೇವೆ ಸಲ್ಲಿಸಿದವನು. ಮೈಸೂರಿನಲ್ಲೇ ಪ್ರ್ಯಾಕ್ಟೀಸ್‌ ಮಾಡಿದವನು. 14 ವರ್ಷಗಳ ನಂತರ ನನ್ನ ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ವಕೀಲ ವೃತ್ತಿ ಮಾಡುವವರಿಗೆ ರಕ್ಷಣೆ ಕೊಡಬೇಕಾದದ್ದು ನಮ್ಮ ಕರ್ತವ್ಯ. ಇದನ್ನು ಸರ್ಕಾರದ ಆರನೇ ಗ್ಯಾರಂಟಿ ಎಂದು ತಿಳಿಯಿರಿ’ ಎಂದರು. ಇನ್ನು, ಬೆಂಗಳೂರಿನಲ್ಲಿರುವ ಕರ್ನಾಟಕ ವಕೀಲರ ಪರಿಷತ್‌ಗೆ ಪ್ರತ್ಯೇಕ ಕಟ್ಟಡ ಬೇಕು ಎಂದು ಕೇಳಿದ್ದೀರಿ. 

ನನ್ನ ಬಳಿ ಪೆನ್‌ಡ್ರೈವ್‌ ಇರೋದು ನಿಜ, ಸಮಯ ಬಂದಾಗ ಬಿಡುಗಡೆ: ಲಕ್ಷ್ಮಣ ಸವದಿ

ಬೆಂಗಳೂರಿನಲ್ಲಿ ಜಾಗದ ಕೊರತೆ ಹೆಚ್ಚಿದೆ. ನೀವು ಇಲ್ಲಿಯೇ ಹತ್ತಿರದಲ್ಲಿ ಎಲ್ಲಾದರೂ ಸ್ಥಳ ಗುರುತಿಸಿ ತಿಳಿಸಿದರೆ ನಾನು ಜಾಗ ನೀಡಲು ಸಿದ್ಧ. ನಿಮ್ಮ ಉಳಿದ ಬೇಡಿಕೆಗಳನ್ನೂ ಹಂತ, ಹಂತವಾಗಿ ಈಡೇರಿಸಲಾಗುವುದು ಎಂದರು. ಹಿಂದೆ ರಾಜ, ಮಹಾರಾಜರು ಮನುವಾದದ ಆಧಾರದಲ್ಲಿ ನ್ಯಾಯ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಅಂದು ಜಾತಿ ವ್ಯವಸ್ಥೆ ಬಲವಾಗಿದ್ದರಿಂದ ಒಂದೇ ರೀತಿಯ ತಪ್ಪಿಗೆ ಬೇರೆ, ಬೇರೆ ಶಿಕ್ಷೆಗಳಿದ್ದವು. ಶ್ರೀಮಂತರಿಗೆ, ಮೇಲ್ಜಾತಿಯವರಿಗೆ, ಕೆಳವರ್ಗದವರಿಗೆ, ಬಡವರಿಗೆ ಬೇರೆ, ಬೇರೆ ರೀತಿಯ ಶಿಕ್ಷೆ ಆಗುತ್ತಿತ್ತು. 

ಸಂವಿಧಾನ ಬಂದ ನಂತರ ಸಮಾನತೆ ಬಂದಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಕೆಳ ಹಂತದ ನ್ಯಾಯಾಲಯಗಳಲ್ಲಿ ಮೀಸಲಾತಿ ಇದೆ. ಆದರೆ, ಮೇಲ್ಮಟ್ಟದ ನ್ಯಾಯಾಲಯಗಳಲ್ಲಿ ಮೀಸಲಾತಿ ಇಲ್ಲ. ಅಲ್ಲಿ ಮೀಸಲಾತಿ ಜಾರಿಯಾದರೆ ಹೆಚ್ಚು ಉಪಯುಕ್ತವಾದ ನ್ಯಾಯ ನೀಡಲು ಸಾಧ್ಯ ಎಂದರು. ಇದಕ್ಕೂ ಮೊದಲು ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಚ್‌.ಎಲ್‌.ವಿಶಾಲ್‌ ರಘು, ವಕೀಲ ವೃತ್ತಿಯ ಮೂಲಕ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೋರಿದರು. ಮೂರು ಪುಟಗಳ ಮನವಿ ಪತ್ರ ಸಲ್ಲಿಸಿದರು.

ಗ್ಯಾರಂಟಿಗಳಿಂದ ಪ್ರತಿ ಬಡ ಕುಟುಂಬಕ್ಕೂ ಸಿಗ್ತಿದೆ ₹5000: ಸಿದ್ದರಾಮಯ್ಯ

ಸಿದ್ದು ಲಾಯರ್‌ ಆಗಿದ್ದು ಹೇಗೆ ಗೊತ್ತಾ?: ಹಿಂದೆ ವಕೀಲಗಿರಿಯನ್ನು ಮೇಲ್ವರ್ಗದವರೇ ಮಾಡುತ್ತಿದ್ದರು. ನಾನು ವಕೀಲನಾಗುತ್ತೀನಿ ಎಂದಾಗ ನಮ್ಮೂರಿನ ಶಾನುಭೋಗರಾದ ಚೆನ್ನಪ್ಪಯ್ಯ ಎಂಬುವವರು ನಮ್ಮ ತಂದೆಯ ಹತ್ತಿರ, ‘ಕುರುಬರು ವಕೀಲರಾಗಲು ಸಾಧ್ಯವೇನಯ್ಯ? ಆತನಿಗೆ ಬೇಡ ಎಂದು ಹೇಳು’ ಎಂದಿದ್ದರಂತೆ. ಅವರ ಮಾತು ಕೇಳಿಕೊಂಡು ನಮ್ಮಪ್ಪ ಓದಬೇಡ ಎಂದರು. ನಾನು ಚೆನ್ನಪ್ಪಯ್ಯನ ಮಾತು ಕೇಳಿ ಕಾನೂನು ಓದದಿದ್ದರೆ ವಕೀಲನಾಗುತ್ತಿರಲಿಲ್ಲ. ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂ ಇರುತ್ತಾರೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.

Follow Us:
Download App:
  • android
  • ios