ಕಮಿಷನ್ ಆರೋಪ; ಮಾಧವ್ ನಾಯ್ಕ್ ವಿರುದ್ಧ ₹5 ಕೋಟಿ ಮಾನನಷ್ಟ ಕೇಸ್ ದಾಖಲಿಸಿದ ಶಾಸಕಿ ರೂಪಾಲಿ ನಾಯ್ಕ್
ಕಾರವಾರದಲ್ಲಿ ಮೊನ್ನೆಯಷ್ಟೇ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಜಟಾಪಟಿ ನಡೆದು ಭಾರೀ ಸುದ್ದಿಯಾಗಿತ್ತು. ಈ ನಡುವೆ ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್ ಕೂಡಾ ಶಾಸಕಿ ರೂಪಾಲಿ ವಿರುದ್ಧ ಮತ್ತೆ ಧ್ವನಿ ಎತ್ತಿದೆ. ಶಾಸಕಿ ಮೇಲೆ ಕಮಿಷನ್ ಆರೋಪ ಮಾಡಿರುವ ಮಾಧವ ನಾಯ್ಕ್ ಮೇಲೆ ಐದು ಕೋಟಿ ರೂ ಮಾನನಷ್ಟ ಕೇಸ್ ದಾಖಲಾಗಿದೆ.
ಉತ್ತರ ಕನ್ನಡ (ಮಾ.6) : ಕಾರವಾರದಲ್ಲಿ ಮೊನ್ನೆಯಷ್ಟೇ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಜಟಾಪಟಿ ನಡೆದು ಭಾರೀ ಸುದ್ದಿಯಾಗಿತ್ತು. ಈ ನಡುವೆ ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್ ಕೂಡಾ ಶಾಸಕಿ ರೂಪಾಲಿ ವಿರುದ್ಧ ಮತ್ತೆ ಧ್ವನಿ ಎತ್ತಿದೆ. ಆದರೆ ಕೌಂಟರ್ ಕೊಟ್ಟಿರುವ ಶಾಸಕಿ, ಅಸೋಸಿಯೇಶನ್‌ನ ಕಾಂಗ್ರೆಸ್ ಬೆಂಬಲಿಗರಿಗೆ ಕಾಂಟ್ರಾಕ್ಟ್ ಸಿಗುತ್ತಿಲ್ಲವೆಂದು ಮಾಜಿ ಶಾಸಕರ ಜತೆ ಸೇರಿ ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು, ಮೊನ್ನೆಯಷ್ಟೇ ಉತ್ತರಕನ್ನಡ(Uttara kannada) ಜಿಲ್ಲೆಯ ಕಾರವಾರ(Karwar)ದಲ್ಲಿರುವ ಜಿಲ್ಲಾ ಪಂಚಾಯತ್‌ನಲ್ಲಿ ಶಾಸಕಿ ರೂಪಾಲಿ ನಾಯ್ಕ್(MLA Roopali naik) ಹಾಗೂ ಮಾಜಿ ಶಾಸಕ ಸತೀಶ್ ಸೈಲ್(Satish sail) ನಡುವೆ ಜಟಾಪಟಿಯಾಗಿತ್ತು. ಇಬ್ಬರು ಕೂಡಾ ತಮ್ಮ ಬೆಂಬಲಿಗರ ಜತೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ಕೂಡಾ ಸಲ್ಲಿಸಿದ್ದರು. ಈ ಘಟನೆ ಹಸಿಯಾಗಿರುವಂತೇ ಕಾರವಾರದ ಸಿವಿಲ್ ಕಾಂಟ್ರಾಕ್ಟರ್ ಅಸೋಸೀಯೇಶನ್(Civil Contractors Association) ಶಾಸಕಿ ರೂಪಾಲಿ ವಿರುದ್ಧ ಮತ್ತೆ ಆರೋಪ ಮಾಡಲಾರಂಭಿದ್ದಾರೆ.
Karnataka election 2023: ಪಿಡಿಒ ವರ್ಗಾವಣೆ ವಿಚಾರಕ್ಕೆ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರ
ಶಾಸಕಿ ತಮ್ಮನ್ನು ಟಾರ್ಗೆಟ್ ಮಾಡಿ ಕಾಂಟ್ರಾಕ್ಟ್ ಪಡೆಯುವಲ್ಲಿ ಅಡ್ಡಗಾಲು ಹಾಕುತ್ತಿದ್ದಾರೆ. ಅಲ್ಲದೇ, ವೈಯಕ್ತಿಕ ದ್ವೇಷದಿಂದ ಆರೋಪ ಮಾಡಿರೋದಲ್ಲ, ಕಾಂಟ್ರಾಕ್ಟರ್ ಅಸೋಶಿಯೇಶನ್ ಸದಸ್ಯರಿಗೆ ಸಹಾಯವಾಗಲೆಂದು ಮಾಹಿತಿ ನೀಡಲಾಗಿದೆ. ಶಾಸಕಿ ಮೊನ್ನೆ ಆರೂವರೆ ಕೋಟಿ ರೂ. ಕಾಮಗಾರಿಯ ಕೆಲಸವನ್ನು ಕಾಂಗ್ರೆಸ್ ಮುಖಂಡರೋರ್ವರಿಗೆ ನೀಡಲಾಗಿದೆ ಎಂದಿದ್ದರು. ಆದರೆ, ಆ ಕಾಮಗಾರಿಯನ್ನು ಬೇರೆಯೇ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಜನರ ಲಾಭಕ್ಕಾಗಿಯಲ್ಲ, ವಯಕ್ತಿಕ ಲಾಭಕ್ಕಾಗಿ ಕಾಮಗಾರಿಗಳ ಗುದ್ದಲಿ ಪೂಜೆಗಳನ್ನು ನಡೆಸುತ್ತಿದ್ದಾರೆ. ಕಾಮಗಾರಿಗಳ ಮೂಲಕ ಭ್ರಷ್ಟಾಚಾರ ನಡೆಸುತ್ತಾರೆ ಎಂದು ಕಾರವಾರದ ಸಿವಿಲ್ ಕಾಂಟ್ರಾಕ್ಟರ್ ಅಸೋಸೀಯೇಶನ್‌ನ ಅಧ್ಯಕ್ಷರು ಆರೋಪಿಸಿದ್ದಾರೆ.
ಇದಕ್ಕೆ ಕೌಂಟರ್ ನೀಡಿರುವ ಶಾಸಕಿ ರೂಪಾಲಿ ನಾಯ್ಕ್, ಸಿವಿಲ್ ಕಾಂಟ್ರಾಕ್ಟರ್ ಅಸೋಸೀಯೇಶನ್‌ನ ಅಧ್ಯಕ್ಷ ಮಾಧವ ನಾಯ್ಕ್(Madhav naik) ಈವರೆಗೆ ತನ್ನ ಬಳಿ ಬಂದು ಕಾಂಟ್ರಾಕ್ಟ್ ನೀಡುವಂತೆ ಕೇಳಿಲ್ಲ, ತನ್ನ ಮುಂದೆಯೂ ಇಲ್ಲಿಯವರೆಗೆ ಬಂದಿಲ್ಲ. ಟೆಂಡರ್‌ಗಳು ಆನ್‌ಲೈನ್ ಮುಖಾಂತರ ನಡೆಯೋದು ಹೊರತು ಶಾಸಕಿ ಕೊಡೋದಲ್ಲ. ತಾನು ಶಂಕು ಸ್ಥಾಪನೆ ಮಾಡಿರುವ ಯೋಜನೆಗಳ ಕಾಮಗಾರಿಯ ಟೆಂಡರ್ ಪ್ಯಾಕೇಜ್ ಕಾಂಗ್ರೆಸ್‌ನ ಮಾಜಿ ಶಾಸಕರ ಬಲಗೈ ಬಂಟನಿಗೆ ದೊರಕಿದೆ. ಇಲ್ಲಿ ರೂಪಾಲಿ ನಾಯ್ಕ್ ಬಂದು ಕಾಂಗ್ರೆಸ್ ಜತೆ ಡೀಲ್ ಮಾಡಿದ್ದಲ್ಲ. ಸಮಾಜ ಸೇವಕ ಅನ್ನೋ ಮುಖವಾಡ ಹೊತ್ತುಕೊಂಡು ಸಮಾಜ ಒಡೆಯುವ ಕೆಲಸ ಸಿವಿಲ್ ಕಾಂಟ್ರಾಕ್ಟರ್ ಅಸೋಸೀಯೇಶನ್‌ನ ಅಧ್ಯಕ್ಷ ಮಾಧವ ನಾಯ್ಕ್ ನಡೆಸಿದ್ದಾರೆ. ಜಿಲ್ಲೆಯ ಪತ್ರಿಕಾ ಸಂಸ್ಥೆ ಹಾಗೂ ಮಾಧವ ನಾಯ್ಕ್ ಮೇಲೆ ತಲಾ 5 ಕೋಟಿ ರೂ. ಮಾನನಷ್ಟ ಹಾಕಲಾಗಿದೆ. ನನ್ನ ತೇಜೋವಧೆಗೆ ಮಾಜಿ ಶಾಸಕರ ಜತೆ ಇವರೆಲ್ಲಾ ಪ್ರಯತ್ನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇವರು ಹೊಂಡಕ್ಕೆ ಬೀಳ್ತಾರೆ ಎಂದು ಖಡಕ್ ಉತ್ತರ ನೀಡಿದ್ದಾರೆ.
ಇತಿಹಾಸದಲ್ಲೇ ಆಗದ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ: ರೂಪಾಲಿ ನಾಯ್ಕ್
ಒಟ್ಟಿನಲ್ಲಿ ಮಾಜಿ ಶಾಸಕರ ಜತೆ ಜಟಾಪಟಿ ಬಳಿಕ ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್ ಮತ್ತೆ ಶಾಸಕಿ ರೂಪಾಲಿ ನಾಯ್ಕ್ ಗುದ್ದಾಟಕ್ಕಿಳಿದಿದೆ. ಇದಕ್ಕೆ ಶಾಸಕಿ ಕೂಡಾ ಕೌಂಟರ್ ಪ್ರಹಾರ ನಡೆಸುತ್ತಾ ಖಾರವಾಗಿ ಉತ್ತರಿಸುತ್ತಿದ್ದಾರೆ. ಈ ವಿಚಾರಗಳು ಮುಂದಿನ ಚುನಾವಣೆ(Assembly election)ಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಎಷ್ಟು ಪ್ಲಸ್ ಹಾಗೂ ಎಷ್ಟು ಮೈನಸ್ ಆಗುತ್ತೆಂತಾ ಕಾದು ನೋಡಬೇಕಷ್ಟೇ.
ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ