ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ನಡುವೆ, ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ಅವರ ಪುತ್ರಿ ಐಶ್ವರ್ಯ ಆಶಯ ವ್ಯಕ್ತಪಡಿಸಿದ್ದಾರೆ. ತಂದೆಯ ಪರಿಶ್ರಮ, ಜನರ ಮೇಲಿನ ಪ್ರೀತಿ ಹಾಗೂ ಪಕ್ಷಕ್ಕಾಗಿ ದುಡಿಯುವ ರೀತಿಯನ್ನು ಅವರು ಶ್ಲಾಘಿಸಿದ್ದಾರೆ. ಡಿ.ಕೆ.ಶಿವಕುಮಾರ್ ಜೈಲಿನಿಂದ ಬಂದಾಗ ಜನರನ್ನು ಭೇಟಿಯಾಗಲು ಆದ್ಯತೆ ನೀಡಿದ್ದನ್ನು ಐಶ್ವರ್ಯ ನೆನಪಿಸಿಕೊಂಡರು. ಐಶ್ವರ್ಯ ಹೆಗ್ಡೆ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಭಾರಿ ಚರ್ಚೆ ನಡೆಯುತ್ತಿದೆ. ಚುನಾವಣೆ ಬಳಿಕ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ, ಕೊನೆಯ ಎರಡೂವರೆ ವರ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕುರಿತು ಒಪ್ಪಂದ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಇಲ್ಲ. ಆದರೂ ಇದೀಗ ಕಳೆದ ಕೆಲವು ದಿನಗಳಿಂದ ಡಿ.ಕೆ.ಶಿವಕುಮಾರ್ ಅವರ ನಡೆಯಿಂದಾಗಿ ಈ ವಿಷಯ ಮತ್ತಷ್ಟು ಕುತೂಹಲದ ಚರ್ಚೆಗೆ ಕಾರಣವಾಗಿದೆ. ಡಿಕೆಶಿ ಹಾಗೂ ಮಗಳು ಐಶ್ವರ್ಯ ಅವರು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿರುವುದು, ಅದಕ್ಕಿಂತಲೂ ಹೆಚ್ಚಾಗಿ ಶಿವಕುಮಾರ್ ಅವರು, ಸದ್ಗುರು ಜಗ್ಗಿ ವಾಸುದೇವ ಅವರನ್ನು ಶಿವರಾತ್ರಿಯ ಸಂದರ್ಭದಲ್ಲಿ ಭೇಟಿಯಾಗಿರುವುದು... ಹೀಗೆ ರಾಜಕಾರಣದಲ್ಲಿ ಒಳಗೊಳಗೇ ಏನೋ ನಡೆಯುತ್ತಿದೆ ಎಂಬ ಬಗ್ಗೆ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆಯೇ ಇದೀಗ ಡಿಕೆಶಿ ಅವರ ಮಗಳು ಐಶ್ವರ್ಯಡಿಕೆಎಸ್ ಹೆಗ್ಡೆ ಅವರು, ಸುವರ್ಣ ಚಾನೆಲ್ ಜೊತೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಇದಾಗಲೇ ತಾವು ಮುಖ್ಯಮಂತ್ರಿಯಾಗಬೇಕು ಎನ್ನುವ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ, ಇದರ ಬಗ್ಗೆ ತಮ್ಮ ಅನಿಸಿಕೆ ಏನು ಎಂಬ ಪ್ರಶ್ನೆಗೆ ಐಶ್ವರ್ಯ ಅವರು, ಖಂಡಿತವಾಗಿಯೂ ಅವರು ಸಿಎಂ ಆಗಬೇಕು, ಆಗಿಯೇ ಆಗುತ್ತಾರೆ ಎಂದು ಹೇಳಿದ್ದಾರೆ. 'ನಾನು ಅವರ ಮಗಳಾಗಿನೋ ಅಥವಾ ಅವರು ನನ್ನ ಅಪ್ಪ ಎಂದೋ ಈ ಮಾತನ್ನು ನಾನು ಹೇಳುತ್ತಿಲ್ಲ. ಅವರು ಹಾಕುತ್ತಿರುವ ಎಫರ್ಟ್ಗಳು, ಜನರ ಮೇಲೆ ಅವರು ಇಟ್ಟಿರುವ ವಿಶ್ವಾಸ, ಕುಟುಂಬಕ್ಕಿಂತಲೂ ಜನರನ್ನೇ ಅತಿಹೆಚ್ಚು ಪ್ರೀತಿಸುವ ಅವರ ಪರಿ, ಪಕ್ಷಕ್ಕಾಗಿ ಅವರು ದುಡಿಯುತ್ತಿರುವ ರೀತಿ ಎಲ್ಲವನ್ನೂ ನೋಡಿದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಮುಖ್ಯಮಂತ್ರಿಯಾಗುವ ಅವರ ಕನಸು ನನಸಾಗುತ್ತದೆ, ಅದು ಆಗಬೇಕು ಕೂಡ' ಎಂದು ಐಶ್ವರ್ಯ ಹೇಳಿದ್ದಾರೆ.
ಮನಗೆದ್ದ ಸೊಸೆ ಐಶ್ವರ್ಯಗೆ ಅತ್ತೆಯ ಉಡುಗೊರೆ, ಡಿಕೆಶಿ ಪುತ್ರಿ ಹೆಗಲಿಗೆ ಹೊಸ ಜವಾಬ್ದಾರಿ!
ಇದೇ ವೇಳೆ, ಕುಟುಂಬಕ್ಕಿಂತ ತಮ್ಮ ತಂದೆಗೆ ಜನರೇ ಅತಿಹೆಚ್ಚು ಪ್ರೀತಿ ಹೇಗೆ ಎಂಬ ಬಗ್ಗೆ ಡಿಕೆಶಿ ಅವರು ಜೈಲಿಗೆ ಹೋಗಿ ಬಂದ ಸಂದರ್ಭದಲ್ಲಿನ ಉದಾಹರಣೆಯನ್ನೂ ಐಶ್ವರ್ಯ ನೀಡಿದರು. ಅಪ್ಪ ಜೈಲಿನಿಂದ ಹೋಗಿ ಬಂದಾಗ ಎರಡು ದಿನ ಅವರ ಜೊತೆ ಮಾತು ಬಿಟ್ಟಿದ್ದೆ ಎಂದಿರುವ ಐಶ್ವರ್ಯ ಅವರು ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಅಪ್ಪ ಜೈಲಿನಿಂದ ಬಂದಾಗ ಅವರು ನೇರವಾಗಿ ಮನೆಗೆ ಬರಲಿಲ್ಲ, ನಮಗೆ ಫೋನ್ ಕೂಡ ಮಾಡಿರಲಿಲ್ಲ. ಬದಲಿಗೆ ಅವರು ಜನರನ್ನು ನೋಡಲು ಹೋಗಿದ್ದರು. ಅದಕ್ಕಾಗಿಯೇ ನಾನು ಮಾತು ಬಿಟ್ಟಿದ್ದೆ. ಆಗ ಅವರು, ನೋಡು ಮಗಳೇ... ನಾನು ಜೈಲಿನಲ್ಲಿ ಇದ್ದಾಗ ಎಷ್ಟೋ ಮಂದಿ ಚಪ್ಪಲಿ ಇಲ್ಲದೇ ವಿಮಾನ ಹತ್ತಿದ್ದರು. ಊಟ, ತಿಂಡಿ ಏನೂ ಇಲ್ಲದೇ ನನಗೋಸ್ಕರ ಜೈಲಿನ ಹೊರಗೆ ನಿಂತಿದ್ದರು. ಇಂಥ ಜನರನ್ನು ನೋಡುವುದು ನನ್ನ ಮೊದಲ ಆದ್ಯತೆ ಆಗಿತ್ತು. ನನಗೆ ಜನರೇ ಫ್ಯಾಮಿಲಿ ಎಂದಿದ್ದರು. ಇದು ಜನರಿಗಾಗಿ ಇರುವ ಅವರ ಪ್ರೀತಿಯನ್ನು ತೋರಿಸುತ್ತದೆ' ಎಂದಿದ್ದಾರೆ ಐಶ್ವರ್ಯ.
ಇನ್ನು ಐಶ್ವರ್ಯ ಅವರ ಕುರಿತು ಹೇಳುವುದಾದರೆ, ಇವರು, ಡಿ.ಕೆ ಶಿವಕುಮಾರ್ ಅವರ ಹಿರಿಯ ಪುತ್ರಿ. ಕಾಫಿ ಕೆಫೆ ಡೇಯ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ಥ್ಯ ಹೆಗ್ಡೆ ಅವರ ಪತ್ನಿ. ಐಶ್ವರ್ಯ ಅವರು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಡಿ.ಕೆ ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಟ್ರಸ್ಟಿ ಕೂಡ ಆಗಿದ್ದಾರೆ. ಸದ್ಯ ಸ್ವತಂತ್ರವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆ, ಫ್ಯಾಷನ್ ಬ್ರ್ಯಾಂಡ್ ಸೇರಿದಂತೆ ಹಲವು ಸಂಸ್ಥೆಗಳನ್ನು ಐಶ್ವರ್ಯ ಮುನ್ನಡೆಸುತ್ತಿದ್ದಾರೆ. ಚಿಕ್ಕಮಗಳೂರಿನ ಅಂಬರ್ ವ್ಯಾಲಿ ಸ್ಕೂಲ್ ಹೊಣೆಯನ್ನು ಐಶ್ವರ್ಯ ಹೊತ್ತುಕೊಂಡಿದ್ದಾರೆ. ಉಡುಪುಗಳ ಫ್ಯಾಷನ್ ಬ್ರ್ಯಾಂಡ್ ಸಂಸ್ಥೆ ನಡೆಸುತ್ತಿದ್ದಾರೆ. ಈ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

