Asianet Suvarna News Asianet Suvarna News

ಕಾಂಗ್ರೆಸ್ ಮಾಂಗಲ್ಯ ಕಿತ್ತುಕೊಳ್ಳುತ್ತೆ ಎನ್ನುವ ಮೋದಿಗೆ ನಾಚಿಕೆಯಾಗಬೇಕು: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ ಸಿ , ಎಸ್ ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಯೋಜನೆಗಳನ್ನು ಹೇಳಿದ್ದೇವೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಸಿದ್ದಾಂತ ಇದ್ದಂತೆ ಇದೆ ಎಂದಿದ್ದಾರೆ. ಯಾರೂ ಇಂತಹ ಮಾತು ಅಡುವುದಿಲ್ಲ. ಆದರೆ ಮೋದಿಗೆ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದೇನೆ. ನೋಡೋಣ ಅವರು ಬಂದರೆ ನಾನು‌ ಚರ್ಚೆ ಮಾಡುತ್ತೇನೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 

AICC President Mallikarjun Kharge Slams PM Narendra Modi grg
Author
First Published Apr 24, 2024, 3:48 PM IST | Last Updated Apr 24, 2024, 3:48 PM IST

ಕಲಬುರಗಿ(ಏ.24):  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ನಾಚಿಕೆಯಾಗಬೇಕು ಅವರಿಗೆ. ಎಂತಹ ಪ್ರಧಾನಿ ಇವರು. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಹೊರತು ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಇಂದು(ಬುಧವಾರ) ಜಿಲ್ಲೆಯ ಅಫಜಲ್‌ಪುರ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ ಸಿ , ಎಸ್ ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಯೋಜನೆಗಳನ್ನು ಹೇಳಿದ್ದೇವೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಸಿದ್ದಾಂತ ಇದ್ದಂತೆ ಇದೆ ಎಂದಿದ್ದಾರೆ. ಯಾರೂ ಇಂತಹ ಮಾತು ಅಡುವುದಿಲ್ಲ. ಆದರೆ ಮೋದಿಗೆ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದೇನೆ. ನೋಡೋಣ ಅವರು ಬಂದರೆ ನಾನು‌ ಚರ್ಚೆ ಮಾಡುತ್ತೇನೆ ಎಂದರು.

ರಾಧಾಕೃಷ್ಣ ಗೆದ್ರೆ ಕಲಬುರಗಿಗೆ ತ್ರಿಬಲ್‌ ಗ್ಯಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ

ಮೋದಿ ಈ ದೇಶದ ಜನರ ಪರವಾಗಿಲ್ಲ. ಅವರು ಹಾಗೂ ಅಮಿತ್ ಶಾ ದೇಶವನ್ನು ಮಾರುವವರಿದ್ದರೆ ಅಂಬಾನಿ ಹಾಗೂ ಅದಾನಿ ಕೊಳ್ಳುವವರಿದ್ದಾರೆ ಎಂದು ಟೀಕಿಸಿದ ಖರ್ಗೆ,  ದುರ್ದೈವದಿಂದಾಗಿ ಕಳೆದ ಸಲ ನನಗೆ ಹಿನ್ನೆಡೆಯಾಯಿತು. ಇದರಿಂದ ತಾಪತ್ರಯ ಆಗಿತ್ತು. ಆದದ್ದು ಆಗಿ ಹೋಗಿದೆ. ಅದನ್ನೇ ಪದೇ ಪದೇ ಹೇಳಿದರೂ ಚೆನ್ನಾಗಿರುವುದಿಲ್ಲ. ಕಳೆದ ಸಲದ ಸೋಲಿನಿಂದ ಹೊರಗೆ ಬನ್ನಿ ಆದದ್ದೂ ಆಯ್ತು ಈ ಸಲ ನೀವೆಲ್ಲ ಸೇರಿ ಬಿಜೆಪಿಗೆ ಮುಖಭಂಗ ಮಾಡಿ‌ ಇದು ಮೋದಿಗೂ ಗೊತ್ತಾಗಲಿ ಎಂದು ಮನವಿ ಮಾಡಿದರು.

ಬ್ಯಾರೇಜ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರಿಯ ವಿವಿ ಗಳನ್ನು ಸ್ಥಾಪಿಸಿದ್ದೇನೆ. ಇದನ್ನು ಯಾರೂ ನನಗೆ ಹೇಳಿರಲಿಲ್ಲ. ಆದರೆ ಈ ಭಾಗದ ಅಭಿವೃದ್ದಿಗಾಗಿ‌‌ ನಾನು ಮಾಡಿದ್ದೇನೆ. ಕಲಬುರಗಿಯಿಂದ ಬೆಂಗಳೂರಿಗೆ ಚಥುಷ್ಪಥ ರಸ್ತೆ ನಿರ್ಮಾಣವಾಗಬೇಕು ಸಿಎಂ ಸಿದ್ದರಾಮಯ್ಯ ಅದನ್ನೂ ಮಾಡುತ್ತಾರೆ ಎನದನುವ ಭರವಸೆ ಇದೆ. ಮೆಜಾರಿಟಿ ಇಲ್ಲದಿದ್ದರೂ ಕೂಡಾ ಆರ್ಟಿಕಲ್ 371 J. ಜಾರಿಗೆ ತಂದಿದ್ದೇವೆ ಇದರಿಂದಾಗಿ‌ ಸಾವಿರಾರು ನಿರುದ್ಯೋಗಿಗಳು ನೌಕರಿ ಪಡೆದುಕೊಂಡಿದ್ದಾರೆ ಎಂದರು.

ನಾನು ಅಫಜಲ್ ಪುರದಿಂದಲೇ ಸೋತಿದ್ದೇನೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಸೋಲಿಸಲು ಬಿಡೀ ದೇಶವೇ ಒಗ್ಗಟ್ಟಾಗಿತ್ತು. ಶಾ, ಆರ್ ಎಸ್ ಎಸ್‌,ಸೂಲಿಬೆಲೆ ಎಲ್ಲಿ ಸೇರಿ ಇಲ್ಲೇ ಕ್ಯಾಂಪ್ ಮಾಡಿ ನನ್ನನ್ನ ಟಾರ್ಗೆಟ್ ಮಾಡಿದ್ದರು. ಆದರೂ, ಕಲಬುರಗಿ ಜನ ನನ್ನ ಕೈ‌ಬಿಡಲ್ಲ ಎಂದು‌ ಭಾವಿಸಿದ್ದೆ, ಸೋಲಾಯಿತು. ಈಗಲೂ ಕೂಡಾ ಮೋದಿ ಅಲ್ಲಿ ಇಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ನಾನು ರಾಜಕೀಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ ಎಂದು ಘೋಷಿಸಿದ ಖರ್ಗೆ ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರ್ ಎಸ್ ಎಸ್ ಸಿದ್ದಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ಕಳೆದ ಸಲದ ಸೋಲಿನ‌ ವಿಚಾರ ಬಿಡಿ. ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ ರಾಧಾಕೃಷ್ಣ ಅವರಿಗೆ ಗೆಲ್ಲಿಸಬೇಕು. ನೀವು ಹಾಗೆ ಮಾಡದಿದ್ದರೆ ನಿಮ್ಮ ಹೃದಯದಲ್ಲಿ ನಾನು ಇಲ್ಲ ಎಂದು ತಿಳಿದುಕೊಳ್ಳುತ್ತೇನೆ. ನಾನು ಸತ್ತರೆ‌ ನನ್ನ ಮಣ್ಣಿಗೆ ನೀವು ಬರಬೇಕು. ನನ್ನನ್ನು‌ ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ‌ ಹೂಳಿದರೆ ಮಣ್ಣು ಹಾಕಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ ಎಂದು ಭಾವುಕರಾಗಿ ನುಡಿದರು.

ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಮತದಾರರು ಆಶೀರ್ವಾದ ಮಾಡಿ ದಿಲ್ಲಿಗೆ ಕಳಿಸಿದರೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ, ರೈತವಿರೋಧಿ ಹಾಗೂ ಬಡವರ ವಿರೋಧಿ ಧೋರಣೆ ಅನುಸರಿಸುತ್ತಿದೆ. ಮೋದಿ ಉದ್ರಿ ಭಾಷಣದಿಂದ ಯಾರ ಹೊಟ್ಟೆ ತುಂಬಲ್ಲ. ಸಿದ್ದರಾಮಯ್ಯ ಗ್ಯಾರಂಟಿಯಿಂದ ಜನರ ಕಷ್ಟ ನೀಗುತ್ತದೆ. ಮತ್ತೆ ಜನ ಪರವಾದ ಆಡಳಿತ ಬರಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದರು.

ಮೋದಿ ಸರ್ಕಾರ, ಉಮೇಶ್ ಜಾಧವ ಕೊಡುಗೆ ಶೂನ್ಯ 

ಮೋದಿ ಸರ್ಕಾರ ಹಾಗೂ ಉಮೇಶ್ ಜಾಧವ ಅವರ ಕೊಡುಗೆ ಶೂನ್ಯ ಎಂದ ಸಚಿವರು ಜಿಲ್ಲೆಯಲ್ಲಿ ಇಎಸ್ ಐ, ಜಯದೇವ, ಕಿದ್ವಾಯಿ ಆಸ್ಪತ್ರೆಗಳು ಹಾಗೂ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಬಾರಿಗೆ ತಂದಿದ್ದರೆ ಹೇಳಲಿ ಎಂದು ಸವಾಲಾಕಿದರು.

ಎಮ್ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಮಾಲೀಕಯ್ಯ ಗುತ್ತೇದಾರ ಹಾಗೂ ಎಂ ವೈ ಪಾಟೀಲ್ ಒಂದೇ ತಾಯಿ ಮಕ್ಕಳಿದಂತೆ ಇಬ್ಬರು ಎದುರಾಳಿಗಳಾಗಿದ್ದರೂ ಈಗ ಒಂದಾಗಿ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಅಲ್ಲಮಪ್ರಭು ಮಾತನಾಡಿ, ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಫೋಟೋ ಹಾಕಿಸಿ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿ ಎಂದಿಗೂ ಲಿಂಗಾಯತರನ್ನು ಉದ್ದಾರ ಮಾಡಲ್ಲ ಎಂದು ಟೀಕಿಸಿದರು.

ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅಫಜಲ್ ಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 37,000 ಮತ ಹಿನ್ನೆಡೆಯಾಗಿದ್ದುದು ನಾನು ತಲೆ ಎತ್ತಿ ತಿರುಗದಂತೆ ಆಗಿದೆ. ನಾನು ಬೀದಿಗೆ ಬಂದಾಗ ನನ್ನ ಕೈಹಿಡಿದು ಪಕ್ಷಕ್ಕೆ ಸೇರಿಸಿಕೊಂಡು ಟಿಕೇಟ್ ಕೊಟ್ಟು ಗೆಲ್ಲಿಸಿದ ಖರ್ಗೆ ಅವರಿಗೆ ನಾನು ಲೀಡ್ ಕೊಡಲಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ. ಕಳೆದ‌ ವಿಧಾನಸಭೆ ಚುನಾವಣೆ ಯಲ್ಲಿ ನಾನು‌ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೂ ಕೂಡಾ ನಾಯಕರು ನನಗೆ ಒತ್ತಾಯ ಮಾಡಿ ನಿಲ್ಲಿಸಿ ಗೆಲ್ಲಿಸಿದ್ದಾರೆ. ಇದು ನನ್ನ ಕೊನೆ ಚುನಾವಣೆ ಮುಂದೆ ನಿಲ್ಲುವುದಿಲ್ಲ. ನಾನು ಖರ್ಗೆ ಅವರ ಋಣ ತೀರಿಸಬೇಕಿದೆ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ರಾಧಾಕೃಷ್ಣ ಅವರನ್ನ ಗೆಲ್ಲಿಸಬೇಕಿದೆ. ಹಾಗಾಗಿ ನೀವೆಲ್ಲ ನನ್ನ ಕೈಹಿಡಿಯಿರಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಗೆ ನೀವೆಲ್ಲ 40 ಸಾವಿರ ಮತದ ಲೀಡ್ ಕೊಟ್ಟರೆ ಮಾತ್ರ ನನಗೆ ಹಾಗೂ ಎಂ ವೈ ಪಾಟೀಲ ಅವರಿಗೆ ನೆಮ್ಮದಿ‌ ಸಿಗಲಿದೆ. ಯಾವುದೋ ಒಂದು ಕಾರಣಾಂತರಗಳಿಂದ‌ ಕಳೆದ ಲೋಕಸಭಾ ಚುನಾವಣೆಯಲ್ಲಿ 37,000 ಮತಗಳ ಗಳ ಲೀಡ್ ಬಿಜೆಪಿಗೆ ಬಂದಿದ್ದವು. ಅವು ಈ ಸಲ ಪಲ್ಟಿಯಾಗಬೇಕು ಎಂದರು.

ಸಿದ್ದರಾಮಯ್ಯ ಕೆಳಗಿಳಿಸಲು ಡಿ.ಕೆ.ಶಿವಕುಮಾರ್‌ ಸಂಚು: ಬಸನಗೌಡ ಯತ್ನಾಳ ಆರೋಪ

ಬಿಜೆಪಿ ಪಕ್ಷ ನಮ್ಮ ಕುಟುಂಬ ಒಡೆದ ಕಾರಣ ನಾನಿನ್ನೂ ರಾಜಕೀಯದಲ್ಲಿ ಜೀವಂತವಾಗಿರುತ್ತೇನೆ. ಜಾಧವ್ ನನ್ನು ಬಿಜೆಪಿಗೆ ತಂದು ತಪ್ಪು ಮಾಡಿದೆ. ಆ ಮನುಷ್ಯ ಎಂತವನು ಎಂದು ನಿಮಗೆ ಗೊತ್ತಿದೆ. ಒಂದು ದಿನ ಕ್ಷೇತ್ರಕ್ಕೆ ಕಾಲಿಡಲಿಲ್ಲ. ಅವನನ್ನು ಸೋಲಿಸಿ ರಾಧಾಕೃಷ್ಣ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ ಮಾಲೀಕಯ್ಯ ಹಾಗೂ ನಾನು‌ ಜೋಡೆತ್ತುಗಳಿದ್ದಂತೆ. ನಾವಿಬ್ಬರೂ ಈಗ ಕಾಂಗ್ರೆಸ್ ನಲ್ಲಿದ್ದೇವೆ. ಕಲಬುರಗಿ ಹಾಗೂ ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಲಿದ್ದೇವೆ ಎಂದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆ ಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್ ಇನ್ನಿತರರು ವೇದಿಕೆ ಮೇಲಿದ್ದರು.

Latest Videos
Follow Us:
Download App:
  • android
  • ios