Asianet Suvarna News Asianet Suvarna News

ಡಿಕೆಶಿ - ಸಿದ್ದರಾಮಯ್ಯಗೆ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಖರ್ಗೆ ಟಾಸ್ಕ್‌: 150 ಕ್ಷೇತ್ರ ಗೆಲ್ಲಲು ಟಾರ್ಗೆಟ್‌

Kharge task to Siddaramaiah and DK Shivakumar: ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರಿಗೂ ಸಮಾನ ಕರ್ತವ್ಯಗಳನ್ನು ಹಂಚಿದ್ದಾರೆ. ಉತ್ತರಕರ್ನಾಟಕಕ್ಕೆ ಸಿದ್ದರಾಮಯ್ಯ, ಹಳೆ ಮೈಸೂರು ಭಾಗಕ್ಕೆ ಡಿಕೆ ಶಿವಕುಮಾರ್‌ ಅವರನ್ನು ನೇಮಿಸಿದ್ದಾರೆ. 

AICC President Mallikarjun Kharge fixes task for Siddaramaiah and DK Shivakumar
Author
First Published Nov 8, 2022, 12:30 PM IST

ಬೆಂಗಳೂರು: ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನ್ನುತ್ತಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವಿನ ಶೀತಲ ಸಮರ ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರಿಗೂ ಹೊಸ ಜವಾಬ್ದಾರಿ ಹಂಚಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಕೆಲಸವನ್ನು ಸಿದ್ದರಾಮಯ್ಯ ಅವರಿಗೆ ಮತ್ತು ಹಳೇ ಮೈಸೂರು ಭಾಗದ ಸಂಘಟನೆ ಡಿಕೆ ಶಿವಕುಮಾರ್‌ ಅವರಿಗೆ ನೀಡಿದ್ದಾರೆ. ಇಬ್ಬರೂ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿ ಕಾಣಿಸಿಕೊಳ್ಳಬೇಕು ಮತ್ತು ಪ್ರಮುಖ ನಿರ್ಧಾರಗಳನ್ನು ಇಬ್ಬರೂ ಚರ್ಚಿಸಿ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ. 

ಡಿಕೆಶಿ - ಸಿದ್ದುಗೆ ಖರ್ಗೆ ಟಾಸ್ಕ್‌:

1) ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಗೆ ಪ್ರತ್ಯೇಕ ಜವಾಬ್ದಾರಿ

2 ) ಸಿದ್ದು, ಡಿಕೆಶಿಗೆ ಟಾರ್ಗೆಟ್ 150 ಜವಾಬ್ದಾರಿ

3) 224 ಕ್ಷೇತ್ರಗಳನ್ನು ಇಬ್ಬರಿಗೂ ಸಮಾನವಾಗಿ ಹಂಚಿಕೆ

4) ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳ ಜವಾಬ್ದಾರಿ ಸಿದ್ದರಾಮಯ್ಯಗೆ

5) ಹಳೇ ಮೈಸೂರು ಭಾಗದ ಕ್ಷೇತ್ರಗಳ ಜವಬ್ದಾರಿ ಡಿ.ಕೆ ಶಿವಕುಮಾರ್ ಗೆ

6 ) ಆದರೆ ಎರಡು ಭಾಗದಲ್ಲಿ ಮಹತ್ವವಾದ ಸಭೆ, ಸಮಾರಂಭಗಳಲ್ಲಿ ಇಬ್ಬರು ಕಾಣಿಸಿಕೊಳ್ಳಬೇಕು

7) ಎರಡು ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಇಬ್ಬರು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು

ಈ ಎಲ್ಲಾ ಟಾಸ್ಕ್ ಗಳನ್ನು ಸಿದ್ದು, ಡಿಕೆಶಿಗೆ ಖರ್ಗೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಯೋಚಿಸಲು ಹೇಳಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪರ ಬಂದರೆ ಲೋಕಸಭಾ ಚುನಾವಣೆಗೂ ಅದು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ರಾಜ್ಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಇಬ್ಬರ ನಡುವಿನ ಭಿನ್ನಾಬಿಪ್ರಾಯವನ್ನು ಬದಿಗಿಟ್ಟು ಕೆಲಸ ಮಾಡುವಂತೆ ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಒಳಗೊಂಡ 47 ಸದಸ್ಯರ ಸ್ಟೀರಿಂಗ್ ಸಮಿತಿಯನ್ನು ರಚಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಕೆಲಸವನ್ನು ಈ ಸ್ಟೀರಿಂಗ್‌ ಸಮಿತಿ ನೋಡಿಕೊಳ್ಳಲಿದೆ. ಇದು ಅಧ್ಯಕ್ಷರಾದ ಬಳಿಕ ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರ ಎನಿಸಿದೆ. ಇದು ಪಕ್ಷದ ಸರ್ವೋಚ್ಚ ಸಭೆಯಲ್ಲಿ ಖರ್ಗೆ ಅವರ ಆಯ್ಕೆಯನ್ನು ಅಂಗೀಕರಿಸಿದ ನಂತರ ಹೊಸ ಸಿಡಬ್ಲ್ಯುಸಿ ರಚನೆಯಾಗುವವರೆಗೆ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಘೋಷಿಸಲಾದ ಸಮಿತಿಯಲ್ಲಿ ಕಳೆದ ಸಿಡಬ್ಲ್ಯುಸಿಯ ಬಹುತೇಕ ಸದಸ್ಯರನ್ನು ಉಳಿಸಿಕೊಳ್ಳಲಾಗಿದೆ. ಪಕ್ಷದ ಎಲ್ಲಾ ಸಿಡಬ್ಲ್ಯಸಿ ಸದಸ್ಯರು ಮತ್ತು ಪದಾಧಿಕಾರಿಗಳು, ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ತಮ್ಮ ಸ್ವಂತ ತಂಡವನ್ನು ಆಯ್ಕೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅವರು ನೀಡಿರುವ ಮಾಹಿತಿಯ ,ಸಮಿತಿಯ ಸದಸ್ಯರಲ್ಲಿ ಪಕ್ಷದ ಹಿರಿಯ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಎ ಕೆ ಆಂಟನಿ, ಅಂಬಿಕಾ ಸೋನಿ, ಆನಂದ್ ಶರ್ಮಾ, ಕೆ ಸಿ ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ ಮತ್ತು ದಿಗ್ವಿಜಯ ಸಿಂಗ್ ಇದ್ದಾರೆ. "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂವಿಧಾನದ XV (ಬಿ) ಪರಿಚ್ಛೇದದ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಬದಲಿಗೆ ಕಾರ್ಯನಿರ್ವಹಿಸುವ ಸ್ಟೀರಿಂಗ್ ಸಮಿತಿಯನ್ನು ರಚಿಸಿದ್ದಾರೆ" ಎಂದು ವೇಣುಗೋಪಾಲ್ ಆದೇಶದಲ್ಲಿ ತಿಳಿಸಿದ್ದಾರೆ.

ಸಿಡಬ್ಲ್ಯುಸಿಯು ಕಾಂಗ್ರೆಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಎಲ್ಲಾ ಪಿಸಿಸಿ ಪ್ರತಿನಿಧಿಗಳು ಭಾಗವಹಿಸುವ ಪಕ್ಷದ ಪ್ಲಾನರಿ ಅಧಿವೇಶನದಲ್ಲಿ ಖರ್ಗೆ ಅವರ ಆಯ್ಕೆಯನ್ನು ಅನುಮೋದಿಸುವವರೆಗೆ ಸ್ಟೀರಿಂಗ್ ಸಮಿತಿಯು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಅಧಿವೇಶನ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್‌ನಲ್ಲಿನ ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ತಗೆದುಕೊಳ್ಳುತ್ತಿತ್ತು. ಆ ಸಮಿತಿಯಲ್ಲಿ ಒಟ್ಟು 23 ಸದಸ್ಯರಿದ್ದರು. ಆದರೆ ಈಗ ಮಲ್ಲಿಕಾರ್ಜುನ ಖರ್ಗೆ ಆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ರದ್ದುಗೊಳಿಸಿದ್ದಾರೆ. ಅದರ ಜಾಗದಲ್ಲಿ ನೂತನ ಸಮಿತಿ ರಚಿಸಿದ್ದು, ಅದರಲ್ಲಿ 47 ಸದಸ್ಯರಿಗೆ ಸ್ಥಾನ ನೀಡಲಾಗಿದೆ. ಇದೀಗ ಈ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Ramya: ಖರ್ಗೆಗೆ ಸೇರಿ ಒಂದೇ ಟ್ವೀಟ್‌ನಲ್ಲಿ ಹೋಲ್‌ಸೇಲ್‌ ಶುಭಾಶಯ ಕೋರಿದ ಸ್ಯಾಂಡಲ್‌ವುಡ್‌ ಕ್ವೀನ್‌!

ಖರ್ಗೆ ಅವರು ಪಕ್ಷದ ಹಲವು ದೊಡ್ಡ ಮುಖಗಳಿಗೆ ಸ್ಥಾನ ನೀಡಿದ್ದಾರೆ. ಅಭಿಷೇಕ್ ಮನು ಸಿಂಘ್ವಿ, ಆನಂದ್ ಶರ್ಮಾ, ರಣದೀಪ್ ಸುರ್ಜೆವಾಲಾ, ಅಜಯ್ ಮಾಕನ್, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ, ಹರೀಶ್ ರಾವತ್, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ಮೀರಾ ಕುಮಾರ್, ಪಿಎಲ್ ಪುನಿಯಾ, ಪ್ರಮೋದ್ ತಿವಾರಿ, ಸಲ್ಮಾನ್ ಖುರ್ಷಿದ್, ರಾಜೀವ್ ಶುಕ್ಲಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಆದರೆ ಈ ಸಮಿತಿಯಲ್ಲಿ ಶಶಿ ತರೂರ್ ಯಾಕೆ ಸ್ಥಾನ ಪಡೆದಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಅವರ ಹೆಸರು ಬಹಳ ದಿನಗಳಿಂದ ಚರ್ಚೆಯಾಗುತ್ತಿತ್ತು, ಆದರೆ ಅವರು ಸೇರ್ಪಡೆಯಾಗುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ತರೂರ್ ಅವರನ್ನು ಬೆಂಬಲಿಸುವ ಒಂದು ಬಣ ಇದ್ದರೆ, ಅವರನ್ನು ಸೇರಿಸಿಕೊಳ್ಳಲು ಬಯಸದ ಒಂದು ಬಣ ಇತ್ತು.

ಇಂದು ಎಐಸಿಸಿ ಚುಕ್ಕಾಣಿ ಹಿಡಿದ ಮಲ್ಲಿಕಾರ್ಜುನ ಖರ್ಗೆ

ಈಗ ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಶಶಿ ತರೂರ್‌ ಅವರಿಂದ ಹಲವು ರೀತಿಯ ಆರೋಪಗಳು ಕೇಳಿ ಬಂದಿದ್ದವು. ಮತ ಎಣಿಕೆ ವಿಚಾರದಲ್ಲೂ ಪ್ರಶ್ನೆಗಳನ್ನು ಎತ್ತಿದ್ದ ಅವರು, ಮಾಧ್ಯಮಗಳ ಮುಂದೆಯೂ ಕೆಲ ಹೇಳಿಕೆಗಳನ್ನು ನೀಡಿದ್ದರು, ಇಂತಹ ಪರಿಸ್ಥಿತಿಯಲ್ಲಿ ಹಲವು ಕಾಂಗ್ರೆಸ್ ನಾಯಕರು ಅವರ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಮುಂದೆ ಪಕ್ಷದ ಪ್ರಕ್ರಿಯೆಯನ್ನೇ ಪ್ರಶ್ನಿಸಿದ್ದಕ್ಕೆ ಅಸಮಾಧಾನ ಹೆಚ್ಚಿತ್ತು.

Follow Us:
Download App:
  • android
  • ios