ಖಾತೆ ಕ್ಯಾತೆ ನಂತರ ಸಿಎಂ ಯಡಿಯೂರಪ್ಪಗೆ ಇನ್ನೊಂದು ಅಗ್ನಿ ಪರೀಕ್ಷೆ!
ಖಾತೆ ಕ್ಯಾತೆ ನಂತರ ಜಿಲ್ಲಾ ಉಸ್ತುವಾರಿ ಸವಾಲು| ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ಸಿಎಂಗೆ ಇನ್ನೊಂದು ಪರೀಕ್ಷೆ| ಜಿಲ್ಲಾ ಉಸ್ತುವಾರಿ ಹೊಣೆ ನೀಡಲು ವಲಸಿಗರ ಪಟ್ಟು
ಬೆಂಗಳೂರು[ಫೆ.09]: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿಗಳ ನೇಮಕವೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.
ಕೆಲವು ಸಚಿವರು ತಮಗೆ ಇಂಥದ್ದೇ ಖಾತೆಗಳು ಬೇಕು ಎಂಬ ಬೇಡಿಕೆ ಮಂಡಿಸಿದ ಬೆನ್ನಲ್ಲೇ ತಮಗೆ ಇಂಥದ್ದೇ ಜಿಲ್ಲಾ ಉಸ್ತುವಾರಿಯನ್ನೂ ನೀಡಬೇಕು ಎಂಬ ಪಟ್ಟು ಹಿಡಿಯಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲ ಜಿಲ್ಲೆಗಳ ಉಸ್ತುವಾರಿಯೂ ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ, ನೂತನ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಗಳ ಉಸ್ತುವಾರಿಯನ್ನು ತಮಗೇ ನೀಡುವಂತೆ ಈಗಾಗಲೇ ಪ್ರಸ್ತಾಪ ಮಂಡಿಸಿರುವುದರಿಂದ ಒಂದಿಷ್ಟುಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಸರ್ಕಾರದ ಹಿರಿಯ ಸಚಿವರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೇ ಇದ್ದರೂ ರಮೇಶ್ ಜಾರಕಿಹೊಳಿ ಅವರ ಕಾರಣದಿಂದಾಗಿ ಆರಂಭದಲ್ಲಿಯೇ ಆ ಜಿಲ್ಲೆಯ ಉಸ್ತುವಾರಿಯನ್ನು ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿತ್ತು. ಲಕ್ಷ್ಮಣ ಸವದಿ ಅವರಿಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಇದೀಗ ಬೆಳಗಾವಿ ಉಸ್ತುವಾರಿಯನ್ನು ತಮಗೆ ನೀಡುವಂತೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದರೆ, ದೊಡ್ಡ ಜಿಲ್ಲೆಯ ಉಸ್ತುವಾರಿಯನ್ನು ವಲಸಿಗರಿಗೆ ನೀಡಬೇಕಲ್ಲ ಎಂಬ ಆಕ್ಷೇಪವೂ ಪಕ್ಷದಿಂದ ಕೇಳಿಬಂದಿದೆ ಎನ್ನಲಾಗಿದೆ.
ಇನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರ ನಡುವಿನ ಪೈಪೋಟಿಯಿಂದಾಗಿ ಬೆಂಗಳೂರು ನಗರದ ಉಸ್ತುವಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇಟ್ಟುಕೊಂಡಿದ್ದಾರೆ. ನೂತನವಾಗಿ ಸಂಪುಟಕ್ಕೆ ಸೇರಿರುವ ಎಸ್.ಟಿ.ಸೋಮಶೇಖರ್ ಹಾಗೂ ಬೈರತಿ ಬಸವರಾಜು ಅವರು ತಮಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ನಗರ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗ ಸಚಿವರಾಗಿರುವ ಆನಂದ್ ಸಿಂಗ್ ಅವರ ವಿರೋಧದಿಂದಾಗಿಯೇ ಆರಂಭದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯಿಂದ ಹೊರಗಿಡಲಾಗಿದೆ. ಆದರೆ, ಈಗ ಆನಂದ್ ಸಿಂಗ್ ಅವರು ಜಿಲ್ಲಾ ಉಸ್ತುವಾರಿ ನಿರೀಕ್ಷೆಯಲ್ಲಿದ್ದಾರೆ. ಶ್ರೀರಾಮುಲು ಅವರು ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವುದರಿಂದ ಬಳ್ಳಾರಿಯನ್ನು ತಮಗೆ ನೀಡುವುದು ನ್ಯಾಯ ಎಂಬುದು ಆನಂದ್ ಸಿಂಗ್ ಅವರ ವಾದ. ಆದರೆ, ಆನಂದ್ ಸಿಂಗ್ ಅವರಿಗೆ ಉಸ್ತುವಾರಿ ನೀಡಲು ರಾಮುಲು ಹಾಗೂ ಬಳ್ಳಾರಿ ಜಿಲ್ಲೆಯ ಅವರ ಆಪ್ತ ಶಾಸಕರು ಒಪ್ಪಲಿಕ್ಕಿಲ್ಲ ಎನ್ನಲಾಗಿದೆ.
ಅದೇ ರೀತಿ ಹಾವೇರಿ ಜಿಲ್ಲಾ ಉಸ್ತುವಾರಿಯ ಮೇಲೆ ನೂತನ ಸಚಿವ ಬಿ.ಸಿ.ಪಾಟೀಲ್ ಕಣ್ಣು ಹಾಕಿದ್ದಾರೆ. ಆದರೆ, ಇದೇ ಜಿಲ್ಲೆಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಉಡುಪಿ ಜೊತೆಗೆ ಹಾವೇರಿಯನ್ನು ಪ್ರಭಾರ ಉಸ್ತುವಾರಿಯಾಗಿ ನೀಡಲಾಗಿದೆ. ಇದೀಗ ಹಾವೇರಿ ಜಿಲ್ಲಾ ಉಸ್ತುವಾರಿಯನ್ನು ತಮ್ಮ ಆಪ್ತ ಬೊಮ್ಮಾಯಿ ಅವರ ಬದಲು ಪಾಟೀಲ್ ಅವರಿಗೆ ನೀಡುವುದಕ್ಕೆ ಮುಖ್ಯಮಂತ್ರಿಗಳು ಸಹಮತ ಸೂಚಿಸುತ್ತಾರೆಯೇ ಎಂಬುದು ಕುತೂಹಲವಿದೆ.
ಹಾಲಿ ಜಿಲ್ಲಾ ಉಸ್ತುವಾರಿ ಸಚಿವರು
ಬಿ.ಎಸ್.ಯಡಿಯೂರಪ್ಪ- ಬೆಂಗಳೂರು ನಗರ
ಶ್ರೀರಾಮುಲು- ರಾಯಚೂರು ಮತ್ತು ಚಿತ್ರದುರ್ಗ (ಪ್ರಭಾರ)
ಸಿ.ಟಿ. ರವಿ- ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ- ಉಡುಪಿ, ಹಾವೇರಿ (ಪ್ರಭಾರ)
ಕೋಟಾ ಶ್ರೀನಿವಾಸ ಪೂಜಾರಿ - ದಕ್ಷಿಣ ಕನ್ನಡ ಜಿಲ್ಲೆ
ಆರ್. ಅಶೋಕ್ - ಮಂಡ್ಯ (ಪ್ರಭಾರ) ಮತ್ತು ಬೆಂಗಳೂರು ಗ್ರಾಮಾಂತರ
ಕೆ.ಎಸ್. ಈಶ್ವರಪ್ಪ - ಶಿವಮೊಗ್ಗ ಮತ್ತು ದಾವಣಗೆರೆ (ಪ್ರಭಾರ)
ಪ್ರಭು ಚೌಹಾಣ್ - ಬೀದರ್ ಮತ್ತು ಯಾದಗಿರಿ (ಪ್ರಭಾರ)
ಗೋವಿಂದ ಕಾರಜೋಳ- ಬಾಗಲಕೋಟೆ - ಕಲಬುರಗಿ (ಪ್ರಭಾರ)
ಅಶ್ವತ್ಥನಾರಾಯಣ- ರಾಮನಗರ - ಚಿಕ್ಕಬಳ್ಳಾಪುರ (ಪ್ರಭಾರ)
ಸಿ.ಸಿ. ಪಾಟೀಲ್- ಗದಗ ಮತ್ತು ವಿಜಯಪುರ (ಪ್ರಭಾರ)
ಶಶಿಕಲಾ ಜೊಲ್ಲೆ- ಉತ್ತರ ಕನ್ನಡ
ವಿ. ಸೋಮಣ್ಣ - ಮೈಸೂರು ಮತ್ತು ಕೊಡಗು (ಪ್ರಭಾರ)
ಜೆ.ಸಿ. ಮಾಧುಸ್ವಾಮಿ- ತುಮಕೂರು ಮತ್ತು ಹಾಸನ (ಪ್ರಭಾರ)
ಎಚ್. ನಾಗೇಶ್- ಕೋಲಾರ
ಲಕ್ಷ್ಮಣ ಸವದಿ - ಬಳ್ಳಾರಿ ಮತ್ತು ಕೊಪ್ಪಳ (ಪ್ರಭಾರ)
ಜಗದೀಶ್ ಶೆಟ್ಟರ್ - ಧಾರವಾಡ ಹಾಗೂ ಬೆಳಗಾವಿ (ಪ್ರಭಾರ)
ಎಸ್.ಸುರೇಶ್‌ಕುಮಾರ್- ಚಾಮರಾಜನಗರ