ಬೆಂಗಳೂರು(ಮಾ.20):  ರಾಜ್ಯದ ನರ್ಸಿಂಗ್‌ ಮತ್ತು ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜುಗಳಿಗೆ ಅನುಮತಿ ನೀಡಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ಸದನ ಸಮಿತಿಯಿಂದ ತನಿಖೆಗೆ ಆಗ್ರಹಿಸಿ ಜೆಡಿಎಸ್‌ ಸದಸ್ಯರು ಧರಣಿ ಮುಂದುವರೆಸಿದ ಪರಿಣಾಮ ಶುಕ್ರವಾರದ ಕಲಾಪ ಬಲಿಯಾಗಿದ್ದು, ಸದನ ಸೋಮವಾರಕ್ಕೆ ಮುಂದೂಡಿಕೆ ಕಂಡಿತು.

ಜೆಡಿಎಸ್‌ ಸದಸ್ಯರು ಗುರುವಾರದಿಂದ ಆರಂಭಿಸಿದ್ದ ಈ ಧರಣಿಯನ್ನು ಶುಕ್ರವಾರ ಸದನ ಆರಂಭವಾಗುತ್ತಿದ್ದಂತೆಯೇ ಮತ್ತೆ ಆರಂಭಿಸಿದರು. ಈ ವೇಳೆ ತನಿಖೆಯನ್ನು ಸರ್ಕಾರದ ಅಧಿಕಾರಿಗಳು ಅಥವಾ ಸದನ ಸಮಿತಿ ಬದಲು ತಜ್ಞರಾಗಿರುವ ಮೂರನೇ ಪಕ್ಷಗಾರರಿಂದ ತನಿಖೆ ಮಾಡಿಸಲು ಸಿದ್ಧ ಎಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ. ಸುಧಾಕರ್‌ ಭರವಸೆ ನೀಡಿದರು. ಆದರೆ, ಇದಕ್ಕೆ ಜೆಡಿಎಸ್‌ ಸದಸ್ಯರು ಒಪ್ಪಲಿಲ್ಲ. ಒಂದು ಬಾರಿ ಸಭಾಪತಿಗಳ ಕಚೇರಿಯಲ್ಲಿ ಸಂಧಾನದ ಮಾತುಕತೆ ನಡೆದರೂ ಫಲಪ್ರದವಾಗಲಿಲ್ಲ. ನಂತರ ನಡೆದ ಕಲಾಪದಲ್ಲಿ ಇದೇ ವಿಷಯದಲ್ಲಿ ನಿರಂತರವಾಗಿ ಮಾತಿನ ಚಕಮಕಿ, ವಾಗ್ವಾದಗಳು ಮುಂದುವರೆದ ಕಾರಣ ಸಭಾಪತಿ ಬಸವರಾಜ ಹೊರಟ್ಟಿಇಂತಹ ಪರಿಸ್ಥಿತಿಯ ನಡುವೆ ಸದನ ನಡೆಸಲು ಆಗುವುದಿಲ್ಲ ಎಂದು ಹೇಳಿ ಸದನವನ್ನು ಮಾ. 22ಕ್ಕೆ ಮುಂದೂಡಿದರು.

ಬದುಕಿನ ಪ್ರಶ್ನೆ- ಶ್ರೀಕಂಠೇಗೌಡ:

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರು, ಸದನ ಸಮಿತಿ ತನಿಖೆ ಆಗ್ರಹದ ವಿಷಯದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಜನರ ಬದುಕಿನ ಪ್ರಶ್ನೆ ಇದರಲ್ಲಿ ಅಡಗಿದೆ. ಹೀಗಾಗಿ ಆಡಳಿತ ಪಕ್ಷದ ಸದಸ್ಯರೇ ಹೆಚ್ಚಿರುವ ಸದನ ಸಮಿತಿ ರಚಿಸಿ ತನಿಖೆ ಮಾಡಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಹಿಂದೆ ಕುಡಿಯುವ ನೀರಿನ ಯೋಜನೆ ಅವ್ಯವಹಾರದ ಬಗ್ಗೆ ಸದನ ಸಮಿತಿ ರಚಿಸುವ ಮುನ್ನ ಇಲಾಖೆಯ ಎರಡು ತನಿಖಾ ವರದಿಗಳು ಸರ್ಕಾರದ ಮುಂದೆ ಇತ್ತು. ಅದೇ ರೀತಿ ಈ ವಿಷಯದಲ್ಲಿ ಮೂರು ತಿಂಗಳಲ್ಲಿ ಅಧಿಕಾರಿಗಳಿಂದ ತನಿಖೆ ಮಾಡಿದ ವರದಿ ಪಡೆಯಲಾಗುವುದು ಎಂದು ಹೇಳಿದರು.

ಏಕ ದೇಶ, ಏಕ ಚುನಾವಣೆಗೆ ಗದ್ದಲ: ಕಲಾಪ ಬಲಿ

ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌, ಗುರುವಾರದಿಂದ ಈ ವಿಷಯದ ಬಗ್ಗೆ ಜೆಡಿಎಸ್‌ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಸಾರ್ವಜನಿಕ ಮಹತ್ವದ ವಿಷಯದ ಬಗ್ಗೆ ಸದನ ಸಮಿತಿಯಿಂದ ತನಿಖೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸಭಾಪತಿಗಳು ತಮ್ಮ ಕೊಠಡಿಯಲ್ಲಿ ಸಭೆ ಕರೆದು ಮಾತುಕತೆ ನಡೆಸುವಂತೆ ಸಲಹೆ ನೀಡಿದರು. ಇದಕ್ಕೆ ಒಪ್ಪಿದ ಸಭಾಪತಿ ಹೊರಟ್ಟಿಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಲೋಪ ಗಮನಕ್ಕೆ ತಂದರೆ ಕ್ರಮ: ಸಚಿವ ಸುಧಾಕರ್‌

ಪುನಃ ಸದನ ಆರಂಭವಾದಾಗ ಜೆಡಿಎಸ್‌ ಸದಸ್ಯರು ಸಭಾಪತಿಗಳ ಪೀಠದ ಮುಂದೆ ಬಂದು ಧರಣಿ ಮುಂದುವರೆಸಿದರು. ಈ ಹಂತದಲ್ಲಿ ಸಚಿವ ಡಾ. ಕೆ. ಸುಧಾಕರ್‌ ಅವರು, ‘ರಾಜ್ಯದಲ್ಲಿ ಹೊಸದಾಗಿ ಬಿಎಸ್ಸಿ (ನರ್ಸಿಂಗ್‌) ಮತ್ತು ಅಲೈಡ್‌ ಹೆಲ್ತ್‌ ಸೈನ್ಸ್‌ಸ್‌ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸುದೀರ್ಘವಾಗಿ ವಿವರಿಸಿ, ತಮ್ಮ ಸರ್ಕಾರ ಹೊಸದಾಗಿ 47 ನರ್ಸಿಂಗ್‌ ಮತ್ತು 45 ಅಲೈಡ್‌ ಹೆಲ್ತ್‌ ಸೈನ್ಸಸ್‌ ಸಂಸ್ಥೆಗಳಿಗೆ ಮಂಜೂರಾತಿ ನೀಡಲಾಗಿದೆ. ಮಂಜೂರಾತಿ ನೀಡುವಲ್ಲಿ ಯಾವುದೇ ಲೋಪದೋಷಗಳಿರುವುದನ್ನು ನಿರ್ದಿಷ್ಟವಾಗಿ ತಿಳಿಸಿದರೆ ಕ್ರಮ ಕೈಗೊಳ್ಳಲು ಸಿದ್ಧ’ ಎಂದರು.

ಆದರೆ ಈ ಮಾತಿಗೆ ಜೆಡಿಎಸ್‌ ಸದಸ್ಯರು ಒಪ್ಪದೇ ಧರಣಿ ಮುಂದುವರೆಸಿದರು. ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರು ಹಣ ಕೊಡದ ಕಾರಣ ಕೇವಲ 47 ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ ಎಂದು ಆರೋಪ ಮಾಡಿದರು. ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಮರಿತಿಬ್ಬೇಗೌಡರ ವಿರುದ್ಧ ತಿರುಗಿ ಬಿದ್ದರು. ಈ ಮಧ್ಯ ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಅವರು, ಸದನ ಸಮಿತಿ ರಚನೆ ಬಗ್ಗೆ ಎಲ್ಲ ಸದಸ್ಯರ ಅಭಿಪ್ರಾಯ ಪಡೆಯಿರಿ, ಬಹುಮತ ಬಂದರೆ ಸದನ ಸಮಿತಿ ರಚಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಸಭಾಪತಿಗಳು ಪ್ರಸ್ತಾವನೆ ಇಲ್ಲದೇ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಮಧ್ಯ ಪೀಠದ ಮುಂದಿದ್ದ ಮರಿತಿಬ್ಬೇಗೌಡ ಅವರು ಮಾತನಾಡಲು ತೊಡಗಿದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪಿಸಿದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ಹಂತದಲ್ಲಿ ಸಭಾಪತಿಗಳು ಸದನವನ್ನು ಸೋಮವಾರಕ್ಕೆ ಮುಂದೂಡಿದರು.