ಚಿತ್ರದುರ್ಗ, ದಾವಣಗೆರೆಯಲ್ಲಿ ಕಿಚ್ಚನ ಹವಾ: ಸುದೀಪ್ ನೋಡಲು ಜನಸಾಗರ
ಜಗಳೂರು, ಸಂಡೂರು, ಮಾಯಕೊಂಡ, ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಬೃಹತ್ ರೋಡ್ ಶೋ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದ ಅಭಿನಯ ಚಕ್ರವರ್ತಿ, ಎಲ್ಲೆಡೆ ಕಿಚ್ಚ, ಕಿಚ್ಚ, ಘೋಷಣೆ, ನೆಚ್ಚಿನ ನಟನಿಗೆ ಹೂಮಳೆ ಸುರಿಸಿದ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸ್ವಾಗತ.
ಬೆಂಗಳೂರು(ಏ.27): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರಕ್ಕೆ ಇಳಿದಿರುವ ನಟ ಕಿಚ್ಚ ಸುದೀಪ್ ಅವರು ಬುಧವಾರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಜಗಳೂರು, ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಪ್ರಚಾರಕ್ಕೆ ತೆರಳುವುದಕ್ಕೂ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾತು ಕೊಟ್ಟಂತೆ ಅವರೊಟ್ಟಿಗೆ ಇದ್ದು ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಬುಧವಾರದಿಂದ ಪ್ರಚಾರ ಶುರು ಮಾಡುತ್ತಿದ್ದೇನೆ. ಕೊನೆಯವರೆಗೂ ಪ್ರಚಾರ ಮಾಡುತ್ತೇನೆ. ನಾನು ಪ್ರಚಾರ ಮಾಡುವ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ. ನಾನು ರೋಡ್ ಶೋ ನಡೆಸಿ ತುಂಬಾ ವರ್ಷವಾಗಿದೆ. ಹೆಬ್ಬುಲಿ ಸಿನಿಮಾ ಸಮಯದಲ್ಲಿ ಕಡೆಯದಾಗಿ ರೋಡ್ ಶೋ ಮಾಡಿದ್ದೆ ಎಂದರು.
ಮಾತು ಕೊಟ್ಟಿದ್ದೇನೆ, ಇಂದಿನಿಂದ ಸಂಪೂರ್ಣವಾಗಿ ಬಿಜೆಪಿ ಪರ ಪ್ರಚಾರ: ಸುದೀಪ್
ರಸ್ತೆಯುದ್ದಕ್ಕೂ ಅಭಿಮಾನಿಗಳ ಹರ್ಷೋದ್ಘಾರ:
ಬೆಂಗಳೂರಿನಿಂದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಆಗಮಿಸಿ, ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಪರ ಬೃಹತ್ ರೋಡ್ ಶೋ ನಡೆಸಿದರು. ರಾಮಚಂದ್ರ ಅವರು ಆತ್ಮೀಯ ಒಡನಾಡಿಯಾಗಿದ್ದು, ಅತ್ಯಧಿಕ ಮತಗಳಿಂದ ಅವರನ್ನು ಗೆಲ್ಲಿಸುವಂತೆ ಜನರಿಗೆ ಮನವಿ ಮಾಡಿದರು. ಜಗಳೂರಿನಲ್ಲಿ ಅಭಿಮಾನಿಗಳು ಅವರಿಗೆ ಹೂವಿನಮಾಲೆ, ಸೇಬು ಹಣ್ಣಿನ ಮಾಲೆ ಹಾಕಿ ಸ್ವಾಗತಿಸಿದರು. ಸುದೀಪ್ ಕೈಬೀಸುತ್ತಿದ್ದಂತೆ ಸೇಬು ಹಣ್ಣಿನ ಹಾರದಲ್ಲಿರುವ ಹಣ್ಣುಗಳನ್ನು ಎಸೆದು ಅಭಿಮಾನಿಗಳು ಸಂಭ್ರಮಿಸಿದರು. ಕೈಯಲ್ಲಿನ ನೀರಿನ ಬಾಟಲಿ ಎಸೆದಾಗ ಅಭಿಮಾನಿಗಳು ಕ್ಯಾಚ್ ಹಿಡಿದದ್ದು ಅಲ್ಲದೆ, ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ಹರ್ಷೋದ್ಘಾರ ವ್ಯಕ್ತಪಡಿಸಿದರು.
ತೆರೆದ ವಾಹನದಲ್ಲಿ ಅವರು ಮೆರವಣಿಗೆ ನಡೆಸಿದಾಗ, ವಾಹನದ ಸುತ್ತ ಕಿಕ್ಕಿರಿದ ಅಭಿಮಾನಿಗಳು, ಸುದೀಪ್ ಭಾವಚಿತ್ರ, ಬಾವುಟಗಳೊಂದಿಗೆ ಮುಗಿಬಿದ್ದರು. ‘ಕಿಚ್ಚ...ಕಿಚ್ಚ...’ಘೋಷಣೆಗಳು ಮುಗಿಲು ಮುಟ್ಟಿದವು. ಸುದೀಪ್ ಅವರೂ ಅಭಿಮಾನಿಗಳ ಜೈಕಾರಕ್ಕೆ ಸಾಥ್ ನೀಡಿದರು. ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಡುತ್ತಾ, ಅಭಿಮಾನಿಗಳತ್ತ ಕೈಬೀಸುತ್ತಾ, ನಗುತ್ತಾ ಮುಂದೆ ಸಾಗಿದರು.
ವೈರಲ್ ಆಯ್ತು ಜೆ.ಪಿ ನಡ್ಡಾ ಜತೆ ಕಿಚ್ಚ ಸುದೀಪ್ ಹೆಲಿಕಾಫ್ಟರ್ ಸೆಲ್ಫಿ!
ಮೆರವಣಿಗೆ ಸಾಗಿದ ದಾರಿಯುದ್ಧಕ್ಕೂ ಮನೆ, ಮರ, ಬಸ್, ಆಟೋಗಳ ಮೇಲೆ ನಿಂತು ಅಭಿಮಾನಿಗಳು ಮೊಬೈಲ್‌ನಲ್ಲಿ ಸುದೀಪ್ ಅವರ ರೋಡ್ ಶೋನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು. ಅಭಿಮಾನಿಗಳ ಕಡೆ ಕೈಬೀಸುತ್ತಾ ಸುದೀಪ್ ಅವರು ಬಿಜೆಪಿ ಬೆಂಬಲಿಸಲು ಮನವಿ ಮಾಡಿದರು. ರೋಡ್ ಶೋ ಹಿನ್ನೆಲೆ ಮೆರವಣಿಗೆ ಸಾಗುತ್ತಿದ್ದ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಿ, ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.
ಸಂಡೂರು ತಾಲೂಕಿನ ಅಂತಾಪುರದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರವಾಗಿ ತೆರೆದ ವಾಹನದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೋಡ್ ಶೋ ನಡೆಸಿದರು. ‘ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಪರಿಶಿಷ್ಟಪಂಗಡದ ಮಹಿಳೆಗೆ ಟಿಕೇಟ್ ನೀಡಿದೆ. ಅಭ್ಯರ್ಥಿ ಸಹೋದರಿ ಶಿಲ್ಪಾ ರಾಘವೇಂದ್ರ ಅವರನ್ನು ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ’ ಎಂದು ಮನವಿ ಮಾಡಿದರು.