ಎಸಿಬಿ ದಾಳಿ ನಿರಂತರ ಪ್ರಕ್ರಿಯೆ: ಸಿಎಂ ಬೊಮ್ಮಾಯಿ
ಎಸಿಬಿ ದಾಳಿ ಒಂದು ನಿರಂತರ ಪ್ರಕ್ರಿಯೆ. ಸಮಯ, ಸಾಕ್ಷಿ ಆಧಾರ ಸಮೇತವಾಗಿ ಎಸಿಬಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಜು.06): ಎಸಿಬಿ ದಾಳಿ ಒಂದು ನಿರಂತರ ಪ್ರಕ್ರಿಯೆ. ಸಮಯ, ಸಾಕ್ಷಿ ಆಧಾರ ಸಮೇತವಾಗಿ ಎಸಿಬಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸಿಬಿ ಬಾಕಿ ಪ್ರಕರಣಗಳನ್ನು ತನಿಖೆ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಮಯ, ಸಾಕ್ಷಿ ಆಧಾರ ಸಮೇತವಾಗಿ ಎಸಿಬಿ ಕೆಲಸ ಮಾಡುತ್ತಿದೆ. ಇದು ನಿರಂತರ ಮಾಡುವ ಕೆಲಸ ಎಂದರು.
ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ತವ್ಯ ಮಾಡಲು ಹೋದಾಗ ಅಡಚಣೆ ಮಾಡಿ ಅದಕ್ಕೆ ರಾಜಕೀಯ ಬಣ್ಣ ನೀಡುವುದು ಸರ್ವೇ ಸಾಮಾನ್ಯ. ಇದು ಕಾಂಗ್ರೆಸ್‌ನ ಸ್ಲೋಗನ್. ಅವರು ಪ್ರಕರಣದ ಬಗ್ಗೆ ಮಾತನಾಡದೇ ಬೇರೆಲ್ಲವನ್ನೂ ಮಾತನಾಡುತ್ತಾರೆ. ಕರ್ತವ್ಯ ಮಾಡುವ ಅಧಿಕಾರಿಗಳಿಗೆ ಕೆಲಸವನ್ನು ಪೂರ್ತಿ ಮಾಡಲು ಯಾವುದೇ ಅಡಚಣೆಯಾಗುವುದಿಲ್ಲ ಎಂದು ತಿಳಿಸಿದರು.
ಜಮೀರ್ ಅಹ್ಮದ್ ಖಾನ್‌ಗೆ ಎಸಿಬಿ ಶಾಕ್, ಬಿಟ್ಟೂ ಬಿಡದೆ ಕಾಡ್ತಿರುವ ಐಎಂಎ ಉರುಳು..!
ಇನ್ನು, ಪರಪ್ಪನ ಅಗ್ರಹಾರದ ಪ್ರಕರಣವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದೆ. ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತರಿಸಿ ಕ್ರಮ ಕೈಗೊಳ್ಳಲಾಗುವುದು. ಆಗ್ಗಾಗ್ಗೆ ಈ ರೀತಿಯ ಅವಾಂತರಗಳು ನಡೆಯುತ್ತಿವೆ. ಅಲ್ಲಿ ವ್ಯವಸ್ಥಿತವಾಗಿ ಒಂದು ಗುಂಪು ಈ ರೀತಿಯ ಕೆಲಸ ಮಾಡುತ್ತಿದೆ ಎಂದು ಕಾಣುತ್ತಿದೆ. ಅಪರಾಧಿಗಳ ಬಗ್ಗೆ ಸ್ನೇಹ, ಭ್ರಷ್ಟಾಚಾರ ಇದೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಸಿಬಿ ದಾಳಿ ರಾಜಕೀಯ ಪ್ರೇರಿತವಲ್ಲ: ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರ ಮನೆಯ ಮೇಲೆ ಎಸಿಬಿ ದಾಳಿ ನಡೆದಿರುವುದರ ಹಿಂದೆ ಯಾವುದೇ ರೀತಿಯ ದ್ವೇಷವಿಲ್ಲ. ಇದು ರಾಜಕೀಯ ಪ್ರೇರಿತದಿಂದ ಕೂಡಿರುವ ದಾಳಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ ಸ್ಪಷ್ಟಪಡಿಸಿದರು.
ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದ ಶಾಸಕರ ಮನೆಗಳ ಮೇಲೆ ಎಸಿಬಿ ದಾಳಿ ನಡೆಯುತ್ತಿರುವುದು ಇದೇನು ಹೊಸದಲ್ಲಿ, ತಪ್ಪು ಮಾಡಿದವರ ವಿರುದ್ಧ ಎಸಿಬಿ ದಾಳಿ ಮಾಡುವ ಪ್ರಕ್ರಿಯೇ ಹಿಂದಿನಿಂದಲೂ ಇದೆ. ಎಸಿಬಿ, ಇಡಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರಚನೆ ಮಾಡಿಲ್ಲ, ಇಲ್ಲಿವರೆಗೂ ನಡೆಯದೇ ಇರುವಂತಹ ತನಿಖೆಗಳು ಇದೀಗ ಹೊಸದಾಗಿ ಏನು ನಡೆಯುತ್ತಿಲ್ಲ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳನ್ನಾಧರಿಸಿ ದಾಳಿಗಳು ಜರುಗುತ್ತಿಲ್ಲ, ಅಕ್ರಮ ಸಂಪಾದನೆ, ತಪ್ಪು ಮಾಡಿದವರ ವಿರುದ್ಧ ದಾಳಿಗಳು ನಡೆಯುತ್ತಿವೆ. ಜಮೀರ್ ಅಹಮ್ಮದ್ ಅವರು ತಪ್ಪು ಮಾಡಿಲ್ಲವೆಂದರೆ ಎಸಿಬಿ ದಾಳಿಗೆ ಯಾಕೆ ಎದರಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಏನು ಮಾಡಬೇಕೆಂಬ ಜ್ಞಾನವಿಲ್ಲ: ಆರು ದಶಕಕ್ಕೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರತಿಪಕ್ಷದ ಸ್ಥಾನದಲ್ಲಿದ್ದುಕೊಂಡು ಏನು ಮಾಡಬೇಕು ಎನ್ನುವುದರ ಕುರಿತು ಜ್ಞಾನವಿಲ್ಲ. ಪಕ್ಷದ ನಾಯಕರು, ಮುಖಂಡರು ತಮ್ಮ ಮನಸ್ಸಿಗೆ ಬಂದಂತೆ ಮಾತುಗಳನ್ನಾಡುತ್ತಿದ್ದಾರೆ. ಬಂದ್ ಘೋಷಣೆ ಮಾಡಿ ಕಲ್ಲು ಹೊಡೆಸುವ, ವಾಹನಗಳಿಗೆ ಬೆಂಕಿ ಹಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಇದು ಅವರ ಹಣೆಬರವಾಗಿದೆ. ಅವರು ನಡೆಸಿದ ದುರಾಡಳಿತದಿಂದಲೆಯೇ ಇಂದು ಇಂತಹ ಸ್ಥಿತಿ ಬಂದಿದ್ದು, ಇಷ್ಟೋಂದು ವರ್ಷಗಳ ಕಾಲ ದೇಶವನ್ನಾಳಿದ ಪಕ್ಷಕ್ಕೆ ಇಂತಹ ದುಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಕಚೇರಿಯಲ್ಲಿ ಲಂಚ ಪ್ರಕರಣ, ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅರೆಸ್ಟ್!
ಯಾವುದೋ ಹೋರಾಟಕ್ಕೆ ಮಣಿದು ಪಠ್ಯ ಪರಿಷ್ಕರಣೆ ಸಮಿತಿಯನ್ನು ರದ್ದು ಪಡಿಸಿಲ್ಲ, ಸರ್ಕಾರವೇ ಪೂರ್ವ-ಪರ ಮಾಹಿತಿಯನ್ನು ಪಡೆದುಕೊಂಡು ಕ್ರಮ ವಹಿಸಿದೆ. ಪಿಎಸ್‌ಐ ಅಕ್ರಮ ಪ್ರಕರಣವನ್ನು ಸಿಎಂ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದ್ದು, ಯಾರೇ ಅಕ್ರಮ ನಡೆಸಿದ್ದರೂ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಹಿಂಜರಿಯಲ್ಲ ಎಂದು ಹೇಳಿದರು.